ADVERTISEMENT

ತಂತ್ರಜ್ಞಾನ ಮಾನವ ಸಾಮರ್ಥ್ಯ ವೃದ್ಧಿಸಲಿ: ಬಾಹ್ಯಾಕಾಶ ವಿಜ್ಞಾನಿ ಅಣ್ಣಾದೊರೈ

ಜಿಎಂ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದಲ್ಲಿ ಬಾಹ್ಯಾಕಾಶ ವಿಜ್ಞಾನಿ ಎಂ. ಅಣ್ಣಾದೊರೈ ಅಭಿಮತ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 15:32 IST
Last Updated 11 ಜನವರಿ 2026, 15:32 IST
   

ದಾವಣಗೆರೆ: ತಂತ್ರಜ್ಞಾನವು ಮಾನವನ ಸಾಮರ್ಥ್ಯವನ್ನು ವೃದ್ಧಿಸಬೇಕೆ ಹೊರತು ಮಾನವೀಯತೆ, ನೈತಿಕತೆ ಮತ್ತು ಜವಾಬ್ದಾರಿಯನ್ನು ಕುಂದಿಸಬಾರದು ಎಂದು ಇಸ್ರೊ ಉಪಗ್ರಹ ಕೇಂದ್ರದ ಮಾಜಿ ನಿರ್ದೇಶಕರೂ ಆಗಿರುವ ಬಾಹ್ಯಾಕಾಶ ವಿಜ್ಞಾನಿ ಎಂ. ಅಣ್ಣಾದೊರೈ ಅಭಿಪ್ರಾಯಪಟ್ಟರು.

ಇಲ್ಲಿನ ಜಿಎಂ ವಿಶ್ವವಿದ್ಯಾಲಯದ ಜಿ.ಎಂ ಹಾಲಮ್ಮ ಸಭಾಂಗಣದಲ್ಲಿ ಭಾನುವಾರ ನಡೆದ ಪ್ರಥಮ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.

‘ಶಿಕ್ಷಣ, ಆರೋಗ್ಯ, ಕೈಗಾರಿಕೆ, ಆಡಳಿತ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಬದಲಾವಣೆ ತಂದಿದೆ. ಯುವ ಪದವೀಧರರು ಈ ಬದಲಾವಣೆಯನ್ನು ಜವಾಬ್ದಾರಿಯಿಂದ ಮುನ್ನಡೆಸಬೇಕಿದೆ’ ಎಂದು ಸಲಹೆ ನೀಡಿದರು.

ADVERTISEMENT

‘ನಿರಂತರ ಕಲಿಕೆ ಇಂದಿನ ಅವಶ್ಯಕತೆಯೇ ಹೊರತು ಆಯ್ಕೆಯಲ್ಲ. ಆಜೀವ ಕಲಿಕೆ ಮತ್ತು ಹೊಂದಾಣಿಕೆಯೇ ಯಶಸ್ಸಿನ ಮೂಲ. ವೃತ್ತಿಪರ ಸಾಧನೆಯ ಜೊತೆಗೆ ಉತ್ತಮ ನಾಗರಿಕರಾಗಬೇಕು. ಕುಟುಂಬ ಮತ್ತು ಸಮಾಜದ ಜವಾಬ್ದಾರಿಗಳನ್ನು ನಿಭಾಯಿಸಬೇಕು’ ಎಂದು ಕಿವಿಮಾತು ಹೇಳಿದರು.

‘ದೊಡ್ಡ ಕನಸು, ದೃಢ ನಿರ್ಧಾರ, ನಿಶ್ಚಿತ ಗುರಿ, ಆಸಕ್ತಿ ಮತ್ತು ಸಮರ್ಪಣಾ ಮನೋಭಾವ ಯಶಸ್ಸಿನ ಕೀಲಿಕೈ. ಈವರೆಗೆ ದೇಶ ಸಾಕಷ್ಟು ನೀಡಿದೆ. ದೇಶಕ್ಕೆ ಮರಳಿ ಕೊಡುವ ಕಾಲ ಸನ್ನಿಹಿತವಾಗಿದೆ. ಉತ್ತಮ ನಾಗರಿಕರಾಗಿ ರೂಪುಗೊಳ್ಳುವ ಅಗತ್ಯವಿದೆ. ವಿಶ್ವದಲ್ಲಿ ಭಾರತೀಯ ಪದವೀದರರಿಗೆ ಹೆಚ್ಚು ಬೇಡಿಕೆ ಇದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ತರಬೇತಿ ಪಡೆದ ಮಾನವ ಸಂಪನ್ಮೂಲದ ಅಗತ್ಯವಿದೆ’ ಎಂದು ಹೇಳಿದರು.

‘ಮನುಷ್ಯರು ಗಾಳಿಯಲ್ಲಿ ಹಾರುವುದು ಸಾಧ್ಯವೆಂದು ಅರಿತ ರೈಟ್ ಸಹೋದರರು ವಿಮಾನ ಕಂಡುಹಿಡಿದರು. ಇಸ್ರೊ ತಂಡವು ಚಂದ್ರಯಾನ, ಮಂಗಳಯಾನ ಮತ್ತು ಆದಿತ್ಯ-ಎಲ್1 ಮಿಷನ್‌ಗಳಲ್ಲಿ ಮೊದಲ ಪ್ರಯತ್ನದಲ್ಲೇ ಯಶಸ್ಸು ಸಾಧಿಸಿದೆ. ಕಡಿಮೆ ಬಜೆಟ್, ಸೀಮಿತ ಸಮಯ ಮತ್ತು ಸೀಮಿತ ಸಂಪನ್ಮೂಲಗಳ ನಡುವೆಯೂ ಚಂದ್ರ, ಮಂಗಳ ಹಾಗೂ ಸೂರ್ಯನ ಕುರಿತು ಸಂಶೋಧನೆಯಲ್ಲಿ ಯಶಸ್ಸು ಕಂಡಿದ್ದೇವೆ’ ಎಂದರು.

ಎಂಬಿಎ ವಿಭಾಗದ 263, ಎಂಸಿಎ ವಿಭಾಗದ 44 ಹಾಗೂ ಎಂಕಾಂ ವಿಭಾಗದ 11 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಎಂಬಿಎ ವಿಭಾಗದ ಎಸ್‌.ಸಂಕೇತ್‌ ಹಾಗೂ ಎಂಸಿಎ ವಿಭಾಗದ ಎಸ್‌.ಆರ್‌. ಸ್ವಾತಿಮುತ್ತು ಅವರಿಗೆ ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಚಿನ್ನದ ಪದಕ ಪ್ರದಾನ ಮಾಡಿದರು.

ಜಿಎಂ ವಿಶ್ವವಿದ್ಯಾಲಯದ ಕುಲಾಧಿಪತಿ ಜಿ.ಎಂ. ಲಿಂಗರಾಜು, ಕುಲಪತಿ ಎಸ್‌.ಆರ್‌. ಶಂಕಪಾಲ್‌ ಮಾತನಾಡಿದರು. ಬಿಜೆಪಿ ನಾಯಕಿ ಗಾಯತ್ರಿ ಸಿದ್ದೇಶ್ವರ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಮಾಜಿ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ. ದಿವ್ಯಾನಂದ್‌, ಸಹ ಕುಲಪತಿ ಎಚ್‌.ಡಿ. ಮಹೇಶಪ್ಪ, ಕುಲಸಚಿವ ಸುನೀಲ್‌ಕುಮಾರ್‌, ಮಾಲ್ಯಮಾಪನ ವಿಭಾಗದ ಕುಲಸಚಿವ ವೀರಭದ್ರಸ್ವಾಮಿ ಹಾಜರಿದ್ದರು.

‘ಪಾಲಕರನ್ನು ಆರೈಕೆ ಮಾಡಿ’

‘ಜಿ.ಎಂ. ವಿಶ್ವವಿದ್ಯಾಲಯ ಸ್ಥಾಪನೆಯಾಗಿ ಮೂರು ವರ್ಷ ಕಳೆದಿದೆ. ಪ್ರಥಮ ಘಟಿಕೋತ್ಸವ ವಿಶ್ವವಿದ್ಯಾಲಯದ ಹೊಸ ಮೈಲಿಗಲ್ಲು. ಮಧ್ಯಕರ್ನಾಟಕದ ಐದಾರು ಜಿಲ್ಲೆಯ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ವಿಶ್ವವಿದ್ಯಾಲಯದ ಕಾರ್ಯ ಹೆಮ್ಮೆ ಮೂಡಿಸಿದೆ. ಪದವಿ ಪಡೆದ ಪ್ರತಿಯೊಬ್ಬರಿಗೂ ಉದ್ಯೋಗ ಸಿಗಬೇಕು ಎಂಬುದು ವಿಶ್ವವಿದ್ಯಾಲಯದ ಆಶಯ’ ಎಂದು ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಅಭಿಪ್ರಾಯಪಟ್ಟರು.

‘ಗ್ರಾಮೀಣ ಪ್ರದೇಶದ ರೈತರ ಮಕ್ಕಳೇ ಹೆಚ್ಚಾಗಿ ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಬಡ ರೈತರು ಹೊಟ್ಟೆ, ಬಟ್ಟೆಯನ್ನು ಲೆಕ್ಕಿಸದೇ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದಾರೆ. ಇಂತಹ ರೈತರ ಮಕ್ಕಳು ಪದವಿ ಪಡೆದ ಬಳಿಕ ಪಾಲಕರನ್ನು ಮರೆಯಬಾರದು. ಎಂಬಿಎ, ಎಸಿಎ ಪದವೀಧರರಿಗೆ ವಿದೇಶದಲ್ಲಿ ಉದ್ಯೋಗಾವಕಾಶ ಹೆಚ್ಚು. ಉದ್ಯೋಗ ಹಿಡಿಯುವ ಧಾವಂತದಲ್ಲಿ ಪಾಲಕರನ್ನು ವೃದ್ಧಾಶ್ರಮಗಳಿಗೆ ಸೇರಿಸಬೇಡಿ. ಬೆಳೆಸಿ, ಶಿಕ್ಷಣ ಕೊಡಿಸಿದ ಪಾಲಕರನ್ನು ಪ್ರೀತಿಯಿಂದ ಆರೈಕೆ ಮಾಡಿ’ ಎಂದು ಕಿವಿಮಾತು ಹೇಳಿದರು.

ಪ್ರಾಥಮಿಕ, ಪ್ರೌಢ ಹಾಗೂ ಪದವಿ ಶಿಕ್ಷಣವನ್ನು ಸರ್ಕಾರಿ ಶಾಲೆ–ಕಾಲೇಜಿನಲ್ಲಿ ಪಡೆದ್ದೇನೆ. ಸಾಮಾನ್ಯ ಕುಟುಂಬದ ನನಗೆ ಜಿಎಂ ವಿಶ್ವವಿದ್ಯಾಲಯದಲ್ಲಿ ಉತ್ತಮ ಶಿಕ್ಷಣ ಸಿಕ್ಕಿತು
ಎಸ್‌.ಸಂಕೇತ್‌, ಚಿನ್ನದ ಪದಕ ಪಡೆದ ವಿದ್ಯಾರ್ಥಿ
ರೈತ ಕುಟುಂಬದಲ್ಲಿ ಜನಿಸಿದ ನಾನು ಜಿಎಂ ವಿಶ್ವವಿದ್ಯಾಲಯದಲ್ಲಿ ಹೆಚ್ಚು ಕಲಿತೆ. ಪರಿಶ್ರಮದ ವ್ಯಾಸಂಗದ ಬದಲಾಗಿ ಕೌಶಲಗಳತ್ತ ಗಮನ ಹರಿಸಿದೆ. ಐಟಿ ಕಂಪನಿ ಸೇರುವ ಕನಸು ನನಸಾಗಲಿದೆ
ಎಸ್‌.ಆರ್‌.ಸ್ವಾತಿಮುತ್ತು, ಚಿನ್ನದ ಪದಕ ಪಡೆದ ವಿದ್ಯಾರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.