ADVERTISEMENT

ಗಾಂಧಿ ಫೋಟೊಗೂ ಗುಂಡು ಹೊಡೆಯುವ ಕಾಲ ಇದು

‘ರಾಷ್ಟ್ರಪಿತನಿಗೆ ನಾವೆಷ್ಟು ಹತ್ತಿರ?’ ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಅರುಣಕುಮಾರಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2019, 12:18 IST
Last Updated 23 ಅಕ್ಟೋಬರ್ 2019, 12:18 IST
ದಾವಣಗೆರೆ ಎಂ.ಎಸ್‌.ಬಿ. ಕಾಲೇಜಿನಲ್ಲಿ ಬುಧವಾರ ನಡೆದ ವಿಚಾರಸಂಕಿರಣವನ್ನು ಅತಿಥಿಗಳು ಗಿಡಕ್ಕೆ ನೀರು ಉಣಿಸಿ ಉದ್ಘಾಟಿಸಿದರು
ದಾವಣಗೆರೆ ಎಂ.ಎಸ್‌.ಬಿ. ಕಾಲೇಜಿನಲ್ಲಿ ಬುಧವಾರ ನಡೆದ ವಿಚಾರಸಂಕಿರಣವನ್ನು ಅತಿಥಿಗಳು ಗಿಡಕ್ಕೆ ನೀರು ಉಣಿಸಿ ಉದ್ಘಾಟಿಸಿದರು   

ದಾವಣಗೆರೆ: ಗಾಂಧಿ ಫೋಟೊಗೂ ಗುಂಡು ಹೊಡೆಯುವ, ಗೋಡ್ಸೆಯನ್ನು ದೇಶಭಕ್ತ ಎಂದು ಬಿಂಬಿಸುವ ಜನರು ಚುನಾವಣೆಯಲ್ಲಿ ಭಾರಿ ಅಂತರದಿಂದ ಗೆಲ್ಲುವ ಅಪಾಯಕಾರಿ ಸ್ಥಿತಿಯಲ್ಲಿ ಭಾರತ ಇದೆ ಎಂದು ಸೀತಮ್ಮ ಪದವಿಪೂರ್ವ ಕಾಲೇಜು ಉಪನ್ಯಾಸಕಿ ಅರುಣಕುಮಾರಿ ಬಿರಾದಾರ್‌ ವಿಷಾದ ವ್ಯಕ್ತಪಡಿಸಿದರು.

ವಾರ್ತಾ ಇಲಾಖೆ, ಎಂ.ಎಸ್‌.ಬಿ. ಕಲಾ ಮತ್ತು ವಾಣಿಜ್ಯ ಕಾಲೇಜು, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಆಶ್ರಯದಲ್ಲಿ ಗಾಂಧೀಜಿ 151ನೇ ಜನ್ಮ ವರ್ಷಾಚರಣೆಯ ಅಂಗವಾಗಿ ಎಂ.ಎಸ್‌.ಬಿ. ಕಾಲೇಜಿನಲ್ಲಿ ಬುಧವಾರ ನಡೆದ ‘ರಾಷ್ಟ್ರಪಿತನಿಗೆ ನಾವೆಷ್ಟು ಹತ್ತಿರ? ಮತ್ತು ಮದ್ಯಪಾನದ ದುಷ್ಪರಿಣಾಮಗಳ ಕುರಿತು ಗಾಂಧೀಜಿಯವರ ನಿಲುವುಗಳು’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಯುವಜನರ ಮೊಬೈಲ್‌ಗಳ ಸ್ಟೇಟಸ್‌ಗಳಲ್ಲಿ ಗಾಂಧಿಯನ್ನು ದೇಶದ್ರೋಹಿ, ಗೋಡ್ಸೆಯನ್ನು ದೇಶಭಕ್ತ ಎಂದು ಹಾಕಿಕೊಂಡಿರುವುದನ್ನು ನೋಡಿ ಬೆಚ್ಚಿಬಿದ್ದೆ. ಗಾಂಧೀಜಿಯನ್ನು ತಪ್ಪಾಗಿ ತಿಳಿದ ಮತ್ತು ಅರೆಬರೆ ತಿಳಿದ ಕಾರಣ ಈ ರೀತಿಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಗಾಂಧೀಜಿ ಬಯಸಿದ್ದರೆ ದೇಶದ ಉನ್ನತ ಹುದ್ದೆ ಅಲಂಕರಿಸಬಹುದಿತ್ತು. ಅವರು ಬಯಸಲಿಲ್ಲ. ಸ್ವಾತಂತ್ರ್ಯ ಸಿಕ್ಕಿದ ದಿನ ಅವರು ಕೊಲ್ಕತದಲ್ಲಿ ಕೋಮುಗಲಭೆ ನಿಯಂತ್ರಿಸಲು ಪ್ರಯತ್ನಿಸುತ್ತಿದ್ದರು. ತನ್ನ ಮಕ್ಕಳನ್ನೂ ಅಧಿಕಾರದಿಂದ ದೂರ ಇಟ್ಟಿದ್ದರು ಎಂದು ಬಣ್ಣಿಸಿದರು.

‘ಮದ್ಯಪಾನ ನಿಷೇಧಿಸಬೇಕು ಎಂದು ಬ್ರಿಟಿಷ್‌ ಸರ್ಕಾರಕ್ಕೆ ಗಾಂಧೀಜಿ ಪತ್ರ ಬರೆದಿದ್ದರು. ಮದ್ಯದಿಂದ ಬರುವ ತೆರಿಗೆಯನ್ನು ಮಕ್ಕಳ ಶಿಕ್ಷಣಕ್ಕಾಗಿ ಬಳಸುತ್ತಿರುವುದರಿಂದ ನಿಷೇಧಿಸುವುದಿಲ್ಲ ಎಂದು ಬ್ರಿಟಿಷರು ಹೇಳಿದ್ದರು. ಮದ್ಯದ ಹಣ ಶಿಕ್ಷಣಕ್ಕೆ ಬೇಡ. ನೀವು ಸೈನ್ಯಕ್ಕೆ ಮಾಡುವ ವೆಚ್ಚವನ್ನು ಕಡಿಮೆ ಮಾಡಿ ಆ ಹಣವನ್ನು ಶಿಕ್ಷಣಕ್ಕೆ ವ್ಯಯಿಸಿ ಎಂದು ಗಾಂಧೀಜಿ ಉತ್ತರಿಸಿದ್ದರು’ ಎಂದು ವಿವರಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಚ್‌.ಎಸ್‌. ಮಂಜುನಾಥ ಕುರ್ಕಿ, ‘ಗಾಂಧೀಜಿಯನ್ನು ಆಚರಣೆಗೆ ಸೀಮಿತಗೊಳಿಸಿದ್ದೇವೆ. ಆಚಾರದಲ್ಲಿ ಅಳವಡಿಸಿಕೊಂಡಿಲ್ಲ. ವಿಶ್ವಕ್ಕೇ ಮಾದರಿಯಾದ ಗಾಂಧೀಜಿ ಭಾರತಕ್ಕೆ ಬೇಡವಾಗಿರುವುದು ನೋವಿನ ಸಂಗತಿ’ ಎಂದು ವಿಚಾರಿಸಿದರು.

‘ದುಡಿಮೆಯಿಲ್ಲದೆ ಗಳಿಸಿದಸಂಪತ್ತು, ಆತ್ಮಸಾಕ್ಷಿಯಿಲ್ಲದ ಸಂತೋಷ, ಗುಣವಿಲ್ಲದಜ್ಞಾನ, ನೀತಿಯಿಲ್ಲದವ್ಯಾಪಾರ, ಮಾನವೀಯತೆಯಿಲ್ಲದವಿಜ್ಞಾನ, ತ್ಯಾಗವಿಲ್ಲದಧರ್ಮ, ನೀತಿಯಿಲ್ಲದ ರಾಜಕೀಯಗಳನ್ನು ಗಾಂಧೀಜಿ ಏಳು ಮಹಾಪಾತಕಗಳು ಎಂದು ಕರೆದಿದ್ದರು. ಅವುಗಳನ್ನು ನಾವೂ ದೂರವಿಡಬೇಕು’ ಎಂದು ಸಲಹೆ ನೀಡಿದರು.

ಧರ್ಮ ಮತ್ತು ನೈತಿಕತೆಯಲ್ಲಿ ಆಯ್ಕೆ ಮಾಡುವುದಿದ್ದರೆ ನೈತಿಕತೆಯನ್ನೇ ಆರಿಸಿಕೊಳ್ಳುವುದಾಗಿ ಗಾಂಧೀಜಿ ತಿಳಿಸಿದ್ದರು. ಆದರೆ ಇವತ್ತು ಯಾವ ನೈತಿಕತೆಯೂ ಇಲ್ಲದೇ ಧರ್ಮವನ್ನೇ ಆಯ್ಕೆ ಮಾಡಿಕೊಳ್ಳುತ್ತಿರುವುದರಿಂದ ಮತಾಂಧ ಶಕ್ತಿಗಳು ವಿಜ್ರಂಭಿಸುತ್ತಿವೆ ಎಂದರು.

ಪ್ರಾಂಶು‍ಪಾಲ ಡಾ. ಕೆ. ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಡಾ. ಎಸ್‌. ಪರಮೇಶಿ ಸ್ವಾಗತಿಸಿದರು. ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಿ. ಅಶೋಕ್‌ ಕುಮಾರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಆರ್‌. ರಾಘವೇಂದ್ರ ವಂದಿಸಿದರು. ಬಿ.ಎಲ್‌. ಗಂಗಾಧರ್‌ ನಿಟ್ಟೂರು ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.