ADVERTISEMENT

ಸಾಲ ಮಂಜೂರಾತಿಯಲ್ಲಿ ರೈತರಿಗೆ ವಂಚನೆ: ಶಾಸಕ ದೇವೇಂದ್ರಪ್ಪ ಗರಂ

ಜಗಳೂರು: ತ್ರೈಮಾಸಿಕ ಸಭೆ: ರಸ್ತೆ ವಿಸ್ತರಣೆ ಪ್ರಕ್ರಿಯೆ ಚುಕುರುಗೊಳಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 15:24 IST
Last Updated 24 ಆಗಸ್ಟ್ 2024, 15:24 IST
ಜಗಳೂರಿನಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ಬಿ. ದೇವೇಂದ್ರಪ್ಪ ಮಾತನಾಡಿದರು
ಜಗಳೂರಿನಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ಬಿ. ದೇವೇಂದ್ರಪ್ಪ ಮಾತನಾಡಿದರು   

ಜಗಳೂರು: ತಾಲ್ಲೂಕಿನ ಬಹುತೇಕ ವ್ಯವಸಾಯ ಸೇವಾ ಸಹಕಾರ ಸಂಘಗಳಲ್ಲಿ ರೈತರಿಗೆ ವಂಚನೆಯಾಗುತ್ತಿರುವ ಬಗ್ಗೆ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿದ್ದು, ರೈತರಿಗೆ ಅನ್ಯಾಯ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಬಿ. ದೇವೇಂದ್ರಪ್ಪ ಎಚ್ಚರಿಕೆ ನೀಡಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪಹಣಿ ಹೊಂದಿರುವ ರೈತರಿಗೆ ₹2 ಲಕ್ಷದಿಂದ ₹3 ಲಕ್ಷ ಸಾಲಮಂಜೂರಾತಿ ಆಗಿದ್ದರೂ, ಫಲಾನುಭವಿಗಳಿಗೆ ಕೇವಲ ₹50,000 ಕೊಟ್ಟಿರುವ ಬಗ್ಗೆ ಸಾಕಷ್ಟು ದೂರು ಬಂದಿವೆ. ಸಣ್ಣ ಹಿಡುವಳಿದಾರರಿಗೆ ನ್ಯಾಯಯುತ ಸಾಲ ಸೌಲಭ್ಯ‌ ತಲುಪಬೇಕು. ಅವ್ಯವಹಾರ ನಡೆದಿರುವುದು ದಾಖಲೆ ಸಮೇತ ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಹಕಾರ ಇಲಾಖೆ ಅಧಿಕಾರಿ ಹರೀಶ್ ಅವರಿಗೆ ಎಚ್ಚರಿಕೆ ನೀಡಿದರು.

ADVERTISEMENT

‘ಪಟ್ಟಣದ ಮಧ್ಯೆ ಹಾದುಹೋಗಿರುವ ಮಲ್ಪೆ-ಮೊಳಕಾಲ್ಮುರು ಹೆದ್ದಾರಿ ವಿಸ್ತರಣೆಗೆ ಶೀಘ್ರವೇ ಕ್ರಮ ಕೈಗೊಳ್ಳಬೇಕು. ಈ ಹಿಂದೆಯೇ ವಿಸ್ತರಣೆಯಾಗಿದ್ದರೆ ಬಸ್ ಚಕ್ರಗಳಿಗೆ ಸಿಲುಕಿ ಇಬ್ಬರು ಮೃತಪಡುತ್ತಿರಲಿಲ್ಲ. ಲೋಕೋಪಯೋಗಿ ಇಲಾಖೆ ಇನ್ನಾದರೂ ಮಾರ್ಕಿಂಗ್ ಕಾರ್ಯ ಪೂರ್ಣಗೊಳಿಸಿ, ರಸ್ತೆ ವಿಸ್ತರಣೆ ಕಾಮಗಾರಿ ಟೆಂಡರ್ ಪ್ರಕ್ರಿಯೆ ಆರಂಭಿಸಬೇಕು. ಹಳೆಯ ತಾಲ್ಲೂಕು ಆಸ್ಪತ್ರೆ ಕಟ್ಟಡವನ್ನು ಕೂಡಲೇ ನೆಲಸಮಗೊಳಿಸಲು ಟೆಂಡರ್ ಪ್ರಕ್ರಿಯೆ ಕೈಗೊಳ್ಳಿ’ ಎಂದು ಲೋಕೋಪಯೋಗಿ ಇಲಾಖೆ ಎಇಇ ನಾಗರಾಜ್ ಅವರಿಗೆ ಶಾಸಕರು ಸೂಚಿಸಿದರು.

ಪೊಲೀಸ್ ಠಾಣೆಯಿಂದ ಕೂಗಳತೆ ದೂರದಲ್ಲಿ ಇಬ್ಬರು ವ್ಯಕ್ತಿಗಳು ಬಸ್ ಕೆಳಗೆ ಸಿಲುಕಿ ಮೃತಪಟ್ಟ ಅರ್ಧ ಗಂಟೆ ಕಳೆದರೂ ಪೊಲೀಸರು ಸ್ಥಳಕ್ಕೆ ಬರಲಿಲ್ಲ. ಪೊಲೀಸ್ ಇಲಾಖೆಯ ಈ ರೀತಿಯ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ತಾಲ್ಲೂಕಿನ ಮೂಡಲ ಮಾಚಿಕರೆ ಸಮೀಪದ ಜಿನಿಗಿ ಹಳ್ಳಕ್ಕೆ ₹4 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಬ್ರಿಡ್ಜ್ ಕಮ್ ಬ್ಯಾರೇಜ್‌ನ ಎತ್ತರ ಕಡಿಮೆಯಾಗಿದ್ದು, ಸಾಕಷ್ಟು ನೀರು ಸಂಗ್ರಹ ಆಗುವುದಿಲ್ಲ ಎಂದು ಆ ಭಾಗದ ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನೀರು ನಿಲ್ಲದಿದ್ದರೆ ಬ್ಯಾರೇಜ್ ಕಟ್ಟಿ ಪ್ರಯೋಜನವೇನು ಎಂದು ದೇವೇಂದ್ರಪ್ಪ ಪ್ರಶ್ನಿಸಿದರು. ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ರಾಘವೇಂದ್ರ ಪ್ರತಿಕ್ರಿಯಿಸಿ, 9 ಅಡಿ ಎತ್ತರದ ಬ್ಯಾರೇಜ್ ನಿರ್ಮಿಸಲಾಗಿದ್ದು, ತಾಂತ್ರಿಕವಾಗಿ ಸರಿ ಇದೆ ಎಂದರು.

ತಾಲ್ಲೂಕಿನಲ್ಲಿ ಈ ಬಾರಿ ವಾಡಿಕೆಗಿಂತ ಶೇ 100ರಷ್ಟು ಹೆಚ್ಚು ಮಳೆಯಾಗಿದೆ. 59,900 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು, ಬೆಳೆಗಳು ಉತ್ತಮವಾಗಿವೆ. ಅತಿವೃಷ್ಟಿಯಿಂದ ಅಂದಾಜು 100 ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿದೆ ಎಂದು ಕೃಷಿ ಇಲಾಖೆ ಸಾಹಯಕ ನಿರ್ದೇಶಕಿ ಶ್ವೇತಾ ಹೇಳಿದರು.

ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಕೊಟ್ರೇಶ್, ತಾಲ್ಲೂಕು ಪಂಚಾಯಿತಿ ಅಧಿಕಾರಿ ಕೆಂಚಪ್ಪ, ಬಿಇಒ ಹಾಲಮೂರ್ತಿ, ಅರಣ್ಯ ಇಲಾಖೆ ಅಧಿಕಾರಿಗಳಾದ ಶ್ರೀನಿವಾಸ್, ಜ್ಯೋತಿ, ಮಹೇಶ್ವರಪ್ಪ, ಬೆಸ್ಕಾಂ ಎಇಇ ಸುಧಾಮಣಿ, ಪಿಆರ್‌ಇಡಿ ಇಲಾಖೆ ಎಇಇ ಶಿವಮೂರ್ತಿ ಇದ್ದರು.

ಜಗಳೂರಿನಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ಬಿ. ದೇವೇಂದ್ರಪ್ಪ ಮಾತನಾಡಿದರು
ಜಗಳೂರಿನಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ಬಿ. ದೇವೇಂದ್ರಪ್ಪ ಮಾತನಾಡಿದರು

ಶಿಥಿಲಾವಸ್ಥೆಯಲ್ಲಿ 300 ಶಾಲಾ ಕೊಠಡಿಗಳು  ರಸ್ತೆ ವಿಸ್ತರಣೆ ಪ್ರಕ್ರಿಯೆ ಚುಕುರುಗೊಳಿಸಲು ಸೂಚನೆ

ತಾಲ್ಲೂಕಿನಲ್ಲಿ ಪಿಡಿಓಗಳ ನಡವಳಿಕೆ ಮತ್ತು ಕಾರ್ಯವೈಖರಿ ನಿರಾಸೆ ತಂದಿದೆ. ಸಾರ್ವಜನಿಕರನ್ನು ಅನಗತ್ಯವಾಗಿ ಅಲೆದಾಡಿಸದೆ ಆತ್ಮಸಾಕ್ಷಿಯಿಂದ ಕರ್ತವ್ಯ ನಿರ್ವಹಿಸಬೇಕು. ಎಚ್ಚೆತ್ತುಕೊಂಡು ಕೆಲಸಮಾಡಿ
- ಬಿ. ದೇವೇಂದ್ರಪ್ಪ ಶಾಸಕ
ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿನ ಸರ್ಕಾರಿ ಜಮೀನುಗಳನ್ನು ಆಯಾ ಇಲಾಖೆಗಳೇ ಹದ್ದುಬಸ್ತು ಮಾಡಿಕೊಳ್ಳಬೇಕು. ಎಲ್ಲ ಸಮಸ್ಯೆಗಳಿಗೂ ತಹಶೀಲ್ದಾರ್ ಕಚೇರಿಯತ್ತ ಕಡೆ ಬೆರಳು ತೋರಿಸುವುದು ಸರಿಯಲ್ಲ
-ಸಯ್ಯದ್ ಕಲೀಂ ಉಲ್ಲಾ ತಹಶೀಲ್ದಾರ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.