ADVERTISEMENT

ಜಗಳೂರು: ಸರ್ಕಾರಿ ಕಾರ್ಯಕ್ರಮದಲ್ಲೂ ಸಿಎಂ, ಸಚಿವರಿಂದ ‘ಕಮಲ’ ಅರಳಿಸುವ ಮಾತು

ಚುನಾವಣೆ ಕಹಳೆ ಮೊಳಗಿಸಿದ ಬಿಜೆಪಿ

ವಿನಾಯಕ ಭಟ್ಟ‌
Published 30 ಏಪ್ರಿಲ್ 2022, 3:56 IST
Last Updated 30 ಏಪ್ರಿಲ್ 2022, 3:56 IST
ಜಗಳೂರಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಭದ್ರಾ ಮೇಲ್ದಂಡೆ ಯೋಜನೆಯಿಂದ 9 ಕೆರೆಗಳಿಗೆ ನೀರು ತುಂಬಿಸುವ, ಹನಿ ನೀರಾವರಿ ಸೌಲಭ್ಯ ಕಲ್ಪಿಸುವ ಹಾಗೂ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬೃಹತ್‌ ಹೂವಿನ ಹಾರ ಹಾಕಿ ಸನ್ಮಾನಿಸಿದರು. ಶಾಸಕ ಎಸ್.ವಿ. ರಾಮಚಂದ್ರ, ಸಂಸದ ಜಿ.ಎಂ.ಸಿದ್ದೇಶ್ವರ, ಸಚಿವ ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಎನ್‌. ರವಿಕುಮಾರ್‌, ಎಂ.ಪಿ.ರೇಣುಕಾಚಾರ್ಯ, ಪ್ರೊ.ಲಿಂಗಣ್ಣ ಇದ್ದಾರೆ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಜಗಳೂರಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಭದ್ರಾ ಮೇಲ್ದಂಡೆ ಯೋಜನೆಯಿಂದ 9 ಕೆರೆಗಳಿಗೆ ನೀರು ತುಂಬಿಸುವ, ಹನಿ ನೀರಾವರಿ ಸೌಲಭ್ಯ ಕಲ್ಪಿಸುವ ಹಾಗೂ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬೃಹತ್‌ ಹೂವಿನ ಹಾರ ಹಾಕಿ ಸನ್ಮಾನಿಸಿದರು. ಶಾಸಕ ಎಸ್.ವಿ. ರಾಮಚಂದ್ರ, ಸಂಸದ ಜಿ.ಎಂ.ಸಿದ್ದೇಶ್ವರ, ಸಚಿವ ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಎನ್‌. ರವಿಕುಮಾರ್‌, ಎಂ.ಪಿ.ರೇಣುಕಾಚಾರ್ಯ, ಪ್ರೊ.ಲಿಂಗಣ್ಣ ಇದ್ದಾರೆ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ಜಗಳೂರು: ಭದ್ರಾ ಮೇಲ್ದಂಡೆ ಯೋಜನೆಯಿಂದ ಕೆರೆಗಳಿಗೆ ನೀರುಣಿಸುವ ಹಾಗೂ ಹನಿ ನೀರಾವರಿ ಸೌಲಭ್ಯ ಕಲ್ಪಿಸುವ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲು ಶುಕ್ರವಾರ ಇಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿಹಲವು ಸಚಿವರು–ಶಾಸಕರು ಮುಂಬರುವ ವಿಧಾನಸಭಾ ಚುನಾವಣೆಗೆ ‘ರಣ ಕಹಳೆ’ ಮೊಳಗಿಸಿದರು. ‘ಕಮಲ’ವನ್ನು ಅರಳಿಸಿ ಮತ್ತೆ ಅಧಿಕಾರಕ್ಕೆ ತನ್ನಿ ಎಂದು ಜನರ ಬಳಿ ‘ಮತ ಭಿಕ್ಷೆ’ಯನ್ನೂ ಕೇಳಿದರು.

ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷವಿದ್ದರೂ ಅಧಿಕಾರದಲ್ಲಿರುವ ಬಿಜೆಪಿಯು, ‘ಚುನಾವಣಾ ಪ್ರಚಾರ’ವನ್ನು ಆರಂಭಿಸಿರುವುದಕ್ಕೆ ಇಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮ ಸಾಕ್ಷಿಯಾಯಿತು.

ಕಾರ್ಯಕ್ರಮದ ಕೊನೆಗೆ ವೇದಿಕೆಗೆ ಬಂದ ಫಲಾನುಭವಿಗಳಿಗೆ ಸೌಲಭ್ಯದ ಪ್ರಮಾಣಪತ್ರವನ್ನು ವಿತರಿಸುವಂತೆ ನಿರೂಪಕರು ಹಲವು ಬಾರಿ ಕೋರಿಕೊಂಡರೂ ಕಿವಿಗೊಡದೆ ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರು ವೇದಿಕೆಯಿಂದ ನಿರ್ಗಮಿಸಿದರು.

ತಮ್ಮ ಸರ್ಕಾರದ ಸಾಧನೆಗಳನ್ನು ಬಣ್ಣಿಸಿದ ಬಸವರಾಜ ಬೊಮ್ಮಾಯಿ, ‘ಜಗಳೂರಿನ ಶಾಸಕ ಎಸ್‌.ವಿ. ರಾಮಚಂದ್ರ ಅವರನ್ನು ಕಳೆದ ಬಾರಿಗಿಂತಲೂ ಹೆಚ್ಚು ಮತಗಳಿಂದ ಆಯ್ಕೆ ಮಾಡಿ ಮತ್ತೊಮ್ಮೆ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು. ಜಗಳೂರಷ್ಟೇ ಅಲ್ಲ, ರಾಜ್ಯದ ಎಲ್ಲಾ ಕಡೆ ನಿಮ್ಮೆಲ್ಲರ ಆಶೀರ್ವಾದ ನಮಗೆ ಬೇಕು. ಕರ್ನಾಟಕವನ್ನು ಭಾರತದಲ್ಲೇ ನಂಬರ್‌ 1 ಮಾಡುತ್ತೇವೆ’ ಎಂದು ಪ್ರತಿಪಾದಿಸಿದರು. ಈ ವೇಳೆ ಕ್ಷೇತ್ರದ ಶಾಸಕರು ಮುಖ್ಯಮಂತ್ರಿಯ ಬಳಿ ಬಂದು ನಿಂತು ಸಭಿಕರತ್ತ ಬಾಗಿ ನಮಸ್ಕರಿಸಿದರು.

ಬಿಜೆಪಿ ಮುಖಂಡ ಬಿ.ಎಸ್‌. ಯಡಿಯೂರಪ್ಪ ಅವರು, ‘ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಸಂಚರಿಸುತ್ತೇನೆ. 150 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ. ರಾಮಚಂದ್ರ ಅವರ ಎದುರು ಚುನಾವಣೆಗೆ ಸ್ಪರ್ಧಿಸುವವರ ಠೇವಣಿ ಕಳೆದುಕೊಳ್ಳುವಂತೆ ಮಾಡಿ’ ಎಂದು ಮನವಿ ಮಾಡಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ವಿಧಾನ ಪರಿಷತ್‌ ಸದಸ್ಯ ಎನ್‌. ರವಿಕುಮಾರ್‌ ಅವರು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ‘ಸೌಲಭ್ಯ ಕಲ್ಪಿಸಿಕೊಟ್ಟ ಪಕ್ಷವನ್ನು ಮರೆಯಬಾರದು. ಕೇಂದ್ರದಲ್ಲಿ ಮೋದಿಯ ಕೈಬಲಪಡಿಸಲು ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುತ್ತೇವೆ ಎಂದು ಸಂಕಲ್ಪ ಮಾಡಿ’ ಎಂದು ಜನರ ಕೈಗಳನ್ನು ಮೇಲಕ್ಕೆತ್ತಿಸಿ ಘೋಷಣೆ ಕೂಗಿಸಿದರು.

‘ಜಗಳೂರಿನಲ್ಲಿ ರಾಮಚಂದ್ರ ಅವರು ಎಲ್ಲಿವರೆಗೆ ಸ್ಪರ್ಧಿಸಲು ಬಯಸುತ್ತಾರೋ ಅಲ್ಲಿವರೆಗೂ ಅವರನ್ನು ಬಿಟ್ಟು ಬೇರೆ ಯಾರಿಗೂ ಟಿಕೆಟ್‌ ಕೊಡುವುದಿಲ್ಲ. ನಿಮ್ಮೆಲ್ಲರ ಆಶೀರ್ವಾದ ಅವರಿಗೆ ಬೇಕು’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಘೋಷಿಸಿದರು.

ಇನ್ನೊಂದೆಡೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ‘ಒಂದು ಲಕ್ಷ ಮತಗಳ ಅಂತರದಿಂದ ರಾಮಚಂದ್ರ ಅವರನ್ನು ಗೆಲ್ಲಿಸುತ್ತೇವೆ ಎಂದು ಎರಡೂ ಕೈಯನ್ನೆತ್ತಿ ಘೋಷಣೆ ಕೂಗಿ’ ಎಂದು ಮನವಿ ಮಾಡಿದರು.

‘ನಿಮ್ಮೆಲ್ಲರ ಆಶೀರ್ವಾದ ಇರುವವರೆಗೂ ನಾನು ಹಿಂದೆ ತಿರುಗಿ ನೋಡುವುದಿಲ್ಲ’ ಎಂದು ಶಾಸಕ ರಾಮಚಂದ್ರ ಅವರು ಪ್ರೇಕ್ಷರತ್ತ ಕೈಮುಗಿದರು. ಸಚಿವರಾದ ಬೈರತಿ ಬಸವರಾಜ, ಮುರುಗೇಶ ನಿರಾಣಿ ಅವರೂ ಜಗಳೂರು ಶಾಸಕರ ಪರ ‘ಪ್ರಚಾರ’ ನಡೆಸಿದರು. ಜಗಳೂರು ಪಟ್ಟಣದ ತುಂಬೆಲ್ಲ ಬಿಜೆಪಿ ಧ್ವಜ
ಹಾಗೂ ಬಂಟಿಂಗ್ಸ್‌ಗಳು, ಪಕ್ಷದ ನಾಯಕರ ಕಟೌಟ್‌ಗಳು ರಾರಾಜಿಸುತ್ತಿರುವುದು ‘ಚುನಾವಣಾ ಪ್ರಚಾರ’ಕ್ಕೆ ನಾಂದಿ ಹಾಡಿದಂತೆ ಕಂಡುಬಂತು.

ರಸಮಂಜರಿ: ಶಾಸಕ ಎಸ್.ವಿ. ರಾಮಚಂದ್ರ ಅಭಿಮಾನಿ ಬಳಗದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಖ್ಯಾತ ಗಾಯಕರಾದ ಅರ್ಜುನ್‌ ಜನ್ಯ, ಚಂದನ್‌ ಶೆಟ್ಟಿ, ಅನುರಾಧಾ ಭಟ್‌ ಅವರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡುವ ಮೂಲಕ ಜನರನ್ನು ರಂಜಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.