ಜಗಳೂರು: ‘ಜಿಲ್ಲೆಯಲ್ಲಿ ಅತ್ಯಂತ ಹಿಂದುಳಿದಿರುವ ಜಗಳೂರು ವಿಧಾನಸಭಾ ಕ್ಷೇತ್ರವನ್ನು ವಿಶೇಷ ಅನುದಾನಗಳ ಮೂಲಕ ಸಮಗ್ರವಾಗಿ ಅಭಿವೃದ್ಧಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಭರವಸೆ ನೀಡಿದರು.
ತಾಲ್ಲೂಕಿನ ತಮಲೇಹಳ್ಳಿ ಗ್ರಾಮದ ಕೆರೆಗೆ ಶುಕ್ರವಾರ ಗಂಗಾಪೂಜೆ ಮತ್ತು ಬಾಗಿನ ಅರ್ಪಿಸಿ ಮಾತನಾಡಿದರು.
‘ಕಳೆದ ಲೋಕಸಭಾ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಮಂದಗತಿಯಲ್ಲಿ ಅಭಿವೃದ್ಧಿಯ ಹೆಜ್ಜೆ ಹಾಕುತ್ತಿರುವ ಜಗಳೂರು ಹಾಗೂ ಹರಪನಹಳ್ಳಿ ಕ್ಷೇತ್ರಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನಗಳನ್ನು ಒದಗಿಸಿ, ಅಭಿವೃದ್ದಿಯತ್ತ ಕೈಹಿಡಿದು ಸಾಗಿಸುವೆ. ವಿವಿಧ ಯೋಜನೆಗಳಡಿ ಮಹಿಳೆಯರು ಸಾಲ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲೀಕರಣರಾಗಬೇಕು. ಆದಿಕರ್ಮ ಯೋಜನೆಯಡಿ ತಾಲ್ಲೂಕಿನ 24 ಗ್ರಾಮಗಳಲ್ಲಿನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಹಿಳೆಯರನ್ನು ಆಯ್ಕೆ ಮಾಡಲಾಗಿದ್ದು, ₹7 ಕೋಟಿ ಅನುದಾನ ಮೀಸಲಿರಿಸಲಾಗಿದೆ’ ಎಂದು ಮಾಹಿತಿ ನೀಡಿದರು.
‘ಪಾಳೇಗಾರರ ಕಾಲಘಟ್ಟದಲ್ಲಿ ಖಡ್ಗ ಹಿಡಿದು ಹೋರಾಡಿ ಸಾಮ್ರಾಜ್ಯಕ್ಕೆ ಅಧಿಪತಿಯಾಗುತ್ತಿದ್ದರು. ಇಂದು ಲೇಖನಿ ಹಿಡಿದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉನ್ನತ ಹುದ್ದೆಗಳ ಸಿಂಹಾಸನ ಪಡೆಯಬೇಕಾಗಿದೆ. ಗ್ರಾಮದಲ್ಲಿ ಮೂವರು ಉನ್ನತ ಹುದ್ದೆ ಅಲಂಕರಿಸಿರುವುದು ಗ್ರಾಮದ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಸ್ಫೂರ್ತಿಯಾಗಿದೆ. ಪೋಷಕರು ಸಂಸ್ಕಾರಯುತ ಶಿಕ್ಷಣಕೊಡಿಸಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪರೀಕ್ಷೆಗಳನ್ನು ಎದುರಿಸಿ ಉನ್ನತ ಪದವಿಗೇರಲು ಪ್ರೇರೇಪಿಸಬೇಕು’ ಎಂದರು.
‘ನಾನು ಜನಿಸಿದ್ದು ಚಿಕ್ಕಮ್ಮನಹಟ್ಟಿ ಗ್ರಾಮವಾದರೂ, ನನಗೆ ಅನ್ನ, ನೀರು, ಪ್ರೀತಿ ಕೊಟ್ಟು ಈ ಮಟ್ಟಕ್ಕೆ ಬೆಳೆಸಿದ್ದು ತಮಲೇಹಳ್ಳಿ ಗ್ರಾಮ. ಇಲ್ಲಿನ ನನ್ನ ಸ್ನೇಹಿತರ ಒಡನಾಟ ಹಾಗೂ ಸಕಾಲಿಕ ನೆರವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ’ ಎಂದು ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.
‘ಈ ಹಿಂದೆ ನಾನು ಶಾಸಕನಾಗಿದ್ದ ಅವಧಿಯಲ್ಲಿ ಸಿರಿಗೆರೆ ಶ್ರೀಗಳ ಕಾಳಜಿಯಿಂದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ 57 ಕೆರೆ ತುಂಬಿಸುವ ಯೋಜನೆಯನ್ನು ಸೇರ್ಪಡೆಗೊಳಿಸಿದ್ದರಿಂದ ಇಂದು ಈ ಭಾಗದ ಕೆರೆಗಳು ತುಂಬುವ ಮೂಲಕ ತಾಲ್ಲೂಕಿನ ಚಿತ್ರಣವೇ ಬದಲಾಗುತ್ತಿದೆ’ ಎಂದು ಮಾಜಿ ಶಾಸಕ ಎಚ್.ಪಿ. ರಾಜೇಶ್ ತಿಳಿಸಿದರು.
‘ಗ್ರಾಮದಲ್ಲಿ ನೌಕರರ ಸಂಘದಿಂದ ಡಿಜಿಟಲ್ ಗ್ರಂಥಾಲಯ ನಿರ್ಮಾಣ, ವಸತಿಶಾಲೆ, ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ, ಮಹಿಳೆಯರಿಗೆ ಉದ್ಯೋಗ ತರಬೇತಿ ಹಾಗೂ ಜನ ಜಾಗೃತಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ, ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಗ್ರಾಮಸ್ಥರು ಒಟ್ಟಾಗಿ ಸಹಕರಿಸುತ್ತಿದ್ದಾರೆ’ ಎಂದು ಚಿತ್ರದುರ್ಗ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಶಿವಕುಮಾರ್ ದಂಡಿನ ಹೇಳಿದರು.
ತಾಲ್ಲೂಕಿನ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಮುಸ್ಟೂರು ಓಂಕಾರೇಶ್ವರ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ , ಡಾ.ಟಿ.ಆರ್.ಪ್ರಕಾಶಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಪಿ.ಪಾಲಯ್ಯ, ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್, ನಿವೃತ್ತ ಅಧಿಕಾರಿ ಚಿಕ್ಕಮ್ಮನಹಟ್ಟಿ ಮಾರಣ್ಣ, ನಿವೃತ್ತ ಡಿವೈಎಸ್‌ಪಿ ಪ್ರಹ್ಲಾದ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ ಅಂಜಿನಪ್ಪ, ಸದಸ್ಯರಾದ ತಿಮ್ಮಕ್ಕ, ಬೊಮ್ಮಯ್ಯ, ಚೌಡಮ್ಮ, ಕಮಲಮ್ಮ, ಹನುಮಂತಪ್ಪ, ತೋರಣಗಟ್ಟೆ ತಿಪ್ಪೇಸ್ವಾಮಿ, ಬುಳ್ಳೇನಹಳ್ಳಿ ನಾಗರಾಜ್., ಡಿ ಆರ್. ಹನುಮಂತಪ್ಪ, ಮಹೇಶ್ವರಪ್ಪ, ಶಿವನಗೌಡ, ಮುಖಂಡರಾದ ಷಂಷೀರ್ ಅಹಮ್ಮದ್, ಸುಭಾಷ್ ಚಂದ್ರಬೋಸ್, ಶ್ರೀನಿವಾಸ್, ಮಾರುತಿ, ರಮೇಶ್, ಅಂಜಿನಪ್ಪ, ಸಿದ್ದಪ್ಪ, ಪಲ್ಲಾಗಟ್ಟೆ ಶೇಖರಪ್ಪ, ಮಧುಸೂದನ್ ಮತ್ತು ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.