ADVERTISEMENT

ಮರೇನಹಳ್ಳಿ ಗುಡ್ಡ | ಅನಾಥವಾಗಿದ್ದ ಅದಿರು: ದಶಕದ ಬಳಿಕ ಹರಾಜು

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 6:41 IST
Last Updated 19 ಸೆಪ್ಟೆಂಬರ್ 2025, 6:41 IST
ಜಗಳೂರು ಸಮೀಪದ ಮರೇನಹಳ್ಳಿ ಗುಡ್ಡದಲ್ಲಿ ಕಬ್ಬಿಣದ ಅದಿರು ದಾಸ್ತಾನು ಸಾಗಣೆ ಕಾರ್ಯ ಭರದಿಂದ ನಡೆಯುತ್ತಿದೆ 
ಜಗಳೂರು ಸಮೀಪದ ಮರೇನಹಳ್ಳಿ ಗುಡ್ಡದಲ್ಲಿ ಕಬ್ಬಿಣದ ಅದಿರು ದಾಸ್ತಾನು ಸಾಗಣೆ ಕಾರ್ಯ ಭರದಿಂದ ನಡೆಯುತ್ತಿದೆ    

ಜಗಳೂರು: ದಶಕದ ಹಿಂದೆ ತಾಲ್ಲೂಕಿನ ಮರೇನಹಳ್ಳಿ ಗುಡ್ಡದಲ್ಲಿ ಗಣಿಗಾರಿಕೆ ಮೂಲಕ ಹೊರ ತೆಗೆದಿದ್ದ 26,000 ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹರಾಜು ಹಾಕಿದ್ದು, ₹ 3.50 ಕೋಟಿ ಮೊತ್ತಕ್ಕೆ ಆಂಧ್ರ ಮೂಲದ ಕಂಪನಿಯೊಂದು  ಪಡೆದುಕೊಂಡಿದೆ.

ಅಂದಾಜು 15 ವರ್ಷಗಳ ಹಿಂದೆ ಮರೇನಹಳ್ಳಿ ಗುಡ್ಡದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಗೆ ಬಳ್ಳಾರಿ ಮೂಲದ ಮಹಾಬಲೇಶ್ವರ ಮೈನಿಂಗ್ ಇಂಡಸ್ಟ್ರೀಸ್ ಕಂಪನಿ ಸರ್ಕಾರದಿಂದ ಪರವಾನಗಿ ಪಡೆದಿತ್ತು. 2017ಕ್ಕೆ ಗುತ್ತಿಗೆ ಅವಧಿ ಮುಗಿದಿದ್ದರೂ ಗಣಿಗಾರಿಕೆ ಮುಂದುವರಿಸಿದ್ದರಿಂದ ಹಾಗೂ ಗಣಿಗಾರಿಕೆ ನಿಯಮ ಉಲ್ಲಂಘಿಸಿದ ಆರೋಪದಿಂದ ಗುತ್ತಿಗೆ ಅವಧಿಯನ್ನು ನವೀಕರಿಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ನಿರಾಕರಿಸಿತ್ತು.

ಗಣಿಗಾರಿಕೆ ಮೂಲಕ ಹೊರ ತೆಗೆದಿದ್ದ 26,000 ಮೆಟ್ರಿಕ್ ಟನ್‌ನಷ್ಟು ಅದಿರನ್ನು ಹೊರಗೆ ಸಾಗಿಸಲು 6 ತಿಂಗಳು ಕಾಲಾವಕಾಶ ನೀಡಿದ್ದರೂ ಅದಿರು ಸಾಗಣೆ ಮಾಡಿರಲಿಲ್ಲ. ಗುತ್ತಿಗೆಯನ್ನು ಮುಂದುವರಿಸಲು ಆದೇಶಿಸುವಂತೆ ಕೋರಿ ಮಹಾಬಲೇಶ್ವರ ಮೈನಿಂಗ್ ಇಂಡಸ್ಟ್ರೀಸ್ ಕಂಪನಿ ಹೈಕೋರ್ಟ್ ಮೆಟ್ಟಿಲೇರಿತ್ತು. ಆದರೆ, ಕಂಪನಿ ಪರವಾಗಿ ಯಾವುದೇ ಆದೇಶವಾಗಲಿಲ್ಲ. ಆದ್ದರಿಂದ ಇಲಾಖೆ ಅದಿರನ್ನು ಆಗ ಮುಟ್ಟುಗೋಲು ಹಾಕಿಕೊಂಡಿತ್ತು.

ADVERTISEMENT

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ರಾಜ್ಯ ನಿರ್ದೇಶಕರ ಕಚೇರಿ ಆನ್‌ಲೈನ್ ಮೂಲಕ ಅದಿರಿನ ಬಹಿರಂಗ ಹರಾಜಿಗೆ ಕ್ರಮ ಕೈಗೊಂಡಿತ್ತು. ಆಂಧ್ರ ಮತ್ತು ಕರ್ನಾಟಕ ಗಡಿ ಭಾಗದ ರಾಮಾಂಜನೇಯ ಇಸ್ಪಾತ್ ಕಂಪನಿ ಇತ್ತೀಚೆಗೆ ನಡೆದ ಹರಾಜಿನಲ್ಲಿ ₹ 3.50 ಕೋಟಿಗೆ 26,560 ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ತನ್ನದಾಗಿಸಿಕೊಂಡಿದೆ.

‘ರಾಮಾಂಜನೇಯ ಇಸ್ಪಾತ್ ಕಂಪನಿ ಹರಾಜಿನಂತೆ ಸರ್ಕಾರಕ್ಕೆ ₹ 3.50 ಕೋಟಿ ಪಾವತಿಸಿದೆ. ಮರೇನಹಳ್ಳಿ ಗುಡ್ಡದಲ್ಲಿರುವ 26,560 ಮೆಟ್ರಕ್ ಟನ್ ಅದಿರನ್ನು ಸಾಗಣೆ ಮಾಡಲು ಅನುಮತಿ ನೀಡಲಾಗಿದೆ. ಪ್ರಾರಂಭದಲ್ಲಿ 5,000 ಮೆಟ್ರಿಕ್ ಟನ್ ಅದಿರನ್ನು ಸಾಗಿಸಲು ಐಬಿಎಂ ದರದ ಅನ್ವಯ ₹ 19.60 ಲಕ್ಷ ರಾಜಧನವನ್ನು ಇಲಾಖೆಗೆ ಪಾವತಿಸಿದ್ದು, ಸದ್ಯ 5,000 ಮೆಟ್ರಿಕ್ ಟನ್ ಅದಿರನ್ನು ಸಾಗಿಸಲು ಅನುಮತಿ ನೀಡಲಾಗಿದೆ’ ಎಂದು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ರಶ್ಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಜಗಳೂರು ಸಮೀಪದ ಮರೇನಹಳ್ಳಿ ಗುಡ್ಡದಲ್ಲಿ ಕಬ್ಬಿಣದ ಅದಿರು ದಾಸ್ತಾನು ಸಾಗಣೆ ಕಾರ್ಯ ಭರದಿಂದ ನಡೆಯುತ್ತಿದೆ 

‘ಮಹಾಮಬಲೇಶ್ವರ ಮೈನಿಂಗ್ ಇಂಡಸ್ಟ್ರೀಸ್ ಕಂಪನಿ ಮರೇನಹಳ್ಳಿ ಗುಡ್ಡದಲ್ಲಿ ಗಣಿಗಾರಿಕೆ ಮೂಲಕ ಹೊರ ತೆಗೆದಿದ್ದ ಕಬ್ಬಿಣದ ಅದಿರನ್ನು ಗಣಿಗಾರಿಕೆ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ 2017ರಲ್ಲಿ ಇಲಾಖೆಯಿಂದ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಕಾರಣಾಂತರಗಳಿಂದ ಅದಿರನ್ನು ಬಹಿರಂಗ ಹರಾಜಿಗೆ ಒಳಪಡಿಸಿರಲಿಲ್ಲ. ಈಗ ಎಂ.ಎಸ್.ಟಿ.ಸಿ. ಪೋರ್ಟಲ್ ಮೂಲಕ ಕೇಂದ್ರ ಕಚೇರಿಯಿಂದ ಹರಾಜು ಪ್ರಕ್ರಿಯೆ ಕೈಗೊಂಡಿದೆ. ಅದಿರು ರಾಶಿ ಇರುವ ಸ್ಥಳದಲ್ಲಿ ತೂಕ ಯಂತ್ರವನ್ನು ಅಳವಡಿಸಿದ್ದು, ಪಾರದರ್ಶಕವಾಗಿ ಅದಿರು ವಿಲೇವಾರಿ ಕಾರ್ಯ ನಡೆಯುತ್ತಿದೆ’ ಎಂದು ವಿವರಿಸಿದ್ದಾರೆ.

‘ಈ ಬಗ್ಗೆ ಜಿಲ್ಲಾಧಿಕಾರಿ, ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗಿದೆ. ನಿತ್ಯವೂ ನಮ್ಮ ಅಧಿಕಾರಿ ಹಾಗೂ ಸಿಬ್ಬಂದಿ ಸ್ಥಳದಲ್ಲಿ ಹಾಜರಿದ್ದು, ಅದಿರು ವಿಲೇವಾರಿ ಮಾಡುತ್ತಿದ್ದಾರೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಜಗಳೂರು ಸಮೀಪದ ಮರೇನಹಳ್ಳಿ ಗುಡ್ಡದಲ್ಲಿ ಕಬ್ಬಿಣದ ಅದಿರು ದಾಸ್ತಾನು ಸಾಗಣೆ ಕಾರ್ಯ ಭರದಿಂದ ನಡೆಯುತ್ತಿದೆ 
‘ಅದಿರು ಸಾಗಣೆ; ಅಧಿಕೃತ ಮಾಹಿತಿ ಇಲ್ಲ’
‘ಮರೇನಹಳ್ಳಿ ಗುಡ್ಡದಲ್ಲಿ ದಾಸ್ತಾನು ಇರುವ ಕಬ್ಬಿಣದ ಅದಿರನ್ನು ನಾಲ್ಕು ದಿನಗಳಿಂದ ಗುಡ್ಡದಿಂದ ಹೊರಗೆ ರಾತ್ರಿ ವೇಳೆ ಸಾಗಿಸಲಾಗುತ್ತಿದೆ ಎಂಬ ಬಗ್ಗೆ ಅಧಿಕೃತವಾಗಿ ಮಾಹಿತಿ ಇಲ್ಲ. ಕೆಲವು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಆದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಯಾವುದೇ ಅಧಿಕಾರಿಗಳು ಖುದ್ದು ನನ್ನ ಗಮನಕ್ಕೆ ತಂದಿಲ್ಲ. ಕನಿಷ್ಠ ನನ್ನೊಂದಿಗೆ ಚರ್ಚಿಸಿಲ್ಲ. ಅದಿರು ತೆಗೆದ ಸ್ಥಳ ಕಂದಾಯ ಇಲಾಖೆ ವ್ಯಾಪ್ತಿಗೆ ಬರಲಿದ್ದು ಶೀಘ್ರವೇ ಸ್ಥಳ್ಕಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು’ ಎಂದು ತಹಶೀಲ್ದಾರ್ ಕಲೀಂ ಉಲ್ಲಾ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.