
ಜಗಳೂರು: ಪ್ರತಿಯೊಬ್ಬ ಕನ್ನಡಿಗನಿಗೆ ಬಾಲ್ಯದಿಂದಲೇ ಕನ್ನಡ ನಾಡು, ನುಡಿ ಹಾಗೂ ಭಾಷಾ ಅಸ್ಮಿತೆಯ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ಎಂದು ಎನ್.ಎಂ.ಕೆ. ಶಾಲೆಯ ಕಾರ್ಯದರ್ಶಿ ಎನ್.ಎಂ.ಲೋಕೇಶ್ ಹೇಳಿದರು.
ಪಟ್ಟಣದ ಎನ್.ಎಂ.ಕೆ. ಶಾಲೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭವ್ಯ ಇತಿಹಾಸ ಹೊಂದಿರುವ ಕನ್ನಡ ಭಾಷೆಗೆ ದೇಶದ ಪ್ರಾದೇಶಿಕ ಭಾಷೆಗಳಲ್ಲೇ ವಿಶೇಷ ಮಹತ್ವವಿದೆ. ಹೆತ್ತ ತಾಯಿಗೆ ಸಮಾನವಾದ ಗೌರವವಿದೆ. ವ್ಯಾವಹಾರಿಕತೆ, ವೃತ್ತಿಜೀವನಕ್ಕೆ ಅನ್ಯಭಾಷೆಗಳು ಅನಿವಾರ್ಯ. ಆದರೆ ಪ್ರತಿಯೊಬ್ಬ ಕನ್ನಡಿಗರ ಮನೆ, ಮನಗಳಲ್ಲಿ ಕನ್ನಡ ಭಾಷಾಭಿಮಾನ ಮೆರೆಯಬೇಕು ಎಂದು ಆಶಿಸಿದರು.
ಕನ್ನಡ ಭಾಷೆ, ನೆಲ, ಜಲ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದೆ. ಇತ್ತೀಚೆಗೆ ಪಾಲಕರಲ್ಲಿ ಆಂಗ್ಲಭಾಷೆಯ ವ್ಯಾಮೋಹ ಹೆಚ್ಚಾಗುತ್ತಿದೆ. ಮಕ್ಕಳ ಭವಿಷ್ಯಕ್ಕೆ ಆಂಗ್ಲಭಾಷೆಯು ಪೂರಕವಾಗಿ ಇರಬೇಕೇ ವಿನಾ ಮಾತೃಭಾಷೆಯನ್ನು ಕಡೆಗಣಿಸಬಾರದು ಎಂದು ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಎನ್.ಎಂ. ಹಾಲಸ್ವಾಮಿ ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳು ರೂಪಿಸಿದ್ದ ಕನ್ನಡ ರಥ, ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳಾದ ಜಲಾಶಯ, ತಾಜ್ ಮಹಲ್, ಅಂಬಾರಿ, ಕೊಂಡುಕುರಿ ಅಭಯಾರಣ್ಯ, ಕವಿಮನೆ, ಪಕ್ಷಿ, ಪ್ರಾಣಿಗಳ ಮಾದರಿಗಳು ಗಮನ ಸೆಳೆದವು.
ವಿದ್ಯಾರ್ಥಿಗಳ ಛದ್ಮವೇಷದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.