ADVERTISEMENT

ಜಗಳೂರು| ಮುಸ್ಲಿಂ ಸಮಾಜ ಮುಖ್ಯವಾಹಿನಿಗೆ ಬರಬೇಕು: ಶಾಸಕ  ಬಿ.ದೇವೇಂದ್ರಪ್ಪ

ಬಡತನ ಶಿಕ್ಷಣಕ್ಕೆ ಅಡ್ಡಿಯಾಗಬಾರದು:

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 7:38 IST
Last Updated 11 ಫೆಬ್ರುವರಿ 2026, 7:38 IST
ಜಗಳೂರಿನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಶಾಸಕ ಬಿ. ದೇವೇಂದ್ರಪ್ಪ ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಭಾಗವಹಿಸಿದ್ದರು
ಜಗಳೂರಿನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಶಾಸಕ ಬಿ. ದೇವೇಂದ್ರಪ್ಪ ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಭಾಗವಹಿಸಿದ್ದರು   

ಜಗಳೂರು: ಶ್ರಮ ಜೀವಿಗಳಾದ ಮುಸ್ಲಿಂ ಧರ್ಮೀಯರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ‌ ಹೇಳಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ವಿಧಾನಸಭಾ ಕ್ಷೇತ್ರದ ವಕ್ಫ್ ಸಂಸ್ಥೆಗಳ ದುರಸ್ಥಿ, ಜೀರ್ಣೋದ್ದಾರ, ನವೀಕರಣ ಹಾಗೂ ಇತರೆ ಕಾಮಗಾರಿಗಳಿಗೆ ಅನುದಾನ ವಿತರಣಾ ಸಮಾರಂಭದಲ್ಲಿ ಮಂಗಳವಾರ ಮಾತನಾಡಿದರು.

‘ಮುಸ್ಲಿಂ ಸಮುದಾಯದಲ್ಲಿ ಸಾಕಷ್ಟು ಪ್ರತಿಭಾನ್ವಿತ ಮಕ್ಕಳಿದ್ದಾರೆ. ಬಡತನ ಮುಂತಾದ ಕಾರಣಗಳಿಂದಾಗಿ ಬಹುತೇಕರು ಶಿಕ್ಷಣವನ್ನು ಮೊಟಕುಗೊಳಿಸುತ್ತಿರುವುದು ನೋವಿನ ಸಂಗತಿ. ಸಂಕಷ್ಟದಲ್ಲಿ ಸಿಲುಕಿರುವವರು, ದೀನ ದಲಿತರು, ಅನಾಥರು, ಅಂಗವಿಕಲರು, ನೊಂದವರಿಗೆ ನೆರವು ನೀಡುವ ವಿನೂತನ ಕಾರ್ಯಕ್ರಮ ರೂಪಿಸಿದ್ದೇವೆ. ಸಮಾಜದಲ್ಲಿ ಉದಾರವಾಗಿ ಸಹಾಯಹಸ್ತ ಚಾಚುವ ಕೈಗಳು ನೋವಿಗೂ ಸಾಂತ್ವನ ಹೇಳಲಿವೆ’ ಎಂದರು.

ಸಚಿವ ಜಮೀರ್ ಅವರ ಸಹಕಾರದಿಂದ ತಾಲ್ಲೂಕಿನ ವ್ಯಾಸಗೊಂಡನಹಳ್ಳಿ ಬಳಿ ₹16‌ ಕೋಟಿ ವೆಚ್ಚದಲ್ಲಿ ಅಲ್ಪ ಸಂಖ್ಯಾತರ ವಸತಿಶಾಲೆಯ ಸುಸಜ್ಜಿತ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಇದೇ ಮೊದಲ ಬಾರಿಗೆ ವಕ್ಫ್ ಸಂಸ್ಥೆ ಅಭಿವೃದ್ಧಿಗೆ ₹2.15 ಕೋಟಿ, ಅಲ್ಪಸಂಖ್ಯಾತರ ಕಾಲೊನಿಗಳ ಮೂಲಸೌಕರ್ಯಕ್ಕೆ ₹5 ಕೋಟಿ ಅನುದಾನ ಮಂಜೂರಾಗಿದೆ ಎಂದು ಕೆಪಿಸಿಸಿ ಎಸ್.ಟಿ. ವಿಭಾಗದ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೀರ್ತಿಕುಮಾರ್ ಹೇಳಿದರು.

ADVERTISEMENT

ದೇಶದಲ್ಲಿ ಕೆಲವರಿಂದ ಅರಾಜಕತೆ ಸೃಷ್ಟಿಯಾಗಿದ್ದು ಮತ್ತೊಬ್ಬರ ತಪ್ಪುಗಳಿಗೆ ಮುಸ್ಲಿಂ ಸಮುದಾಯವನ್ನೇ ಗುರಿಯನ್ನಾಗಿಸಿ ಕೋಲಾಹಲ ಸೃಷ್ಟಿಸುವ ಹುನ್ನಾರ ನಡೆಯುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಪಿ. ಪಾಲಯ್ಯ ಆರೋಪಿಸಿದರು.

ಆರ್ಥಿಕ ತಜ್ಞ ಗೋವಿಂದರಾವ್ ವರದಿಯಲ್ಲಿ ಅತ್ಯಂತ ಹಿಂದುಳಿದ ಜಗಳೂರು ತಾಲ್ಲೂಕು ಕೈಬಿಟ್ಟುಹೋಗಿದ್ದು, ಶಾಸಕರು ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸಬೇಕು ಎಂದು ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್ ಒತ್ತಾಯಿಸಿದರು.

ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಗಳಿಸಿದ ಸಮ್ರೀನ್ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳು, ಸಮುದಾಯದವ ಸರ್ಕಾರಿ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಮುಖಂಡರಾದ ಷಕೀಲ್ ಅಹ್ಮದ್, ಷಂಸುದ್ದೀನ್, ಇಮಾಂ ಅಲಿ, ಖಲಂದರ್ ಖಾನ್, ಬರ್ಕತ್ ಅಲಿ, ದಾದಾಪೀರ್ ಶೇಕ್, ಫರ್ವೀಜ್ ಖಾನ್, ಲುಕ್ಮಾನ್ ಖಾನ್, ಮಾದಿಹಳ್ಳಿ ಸೈಯದ್ ಅಹಮ್ಮದ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.