ADVERTISEMENT

ಬಂದ್ ಇಲ್ಲ: ಮಹಿಷಿ ವರದಿ ಜಾರಿಗೊಳಿಸಲು ಆಗ್ರಹಿಸಿ ಜಾಥಾ

ಪ್ರತಿಭಟನೆಗೆ ಸೀಮಿತ * ದೈನಂದಿನ ಕಾರ್ಯಗಳಿಗೆ ಅಡ್ಡಿ ಇಲ್ಲ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 14:24 IST
Last Updated 13 ಫೆಬ್ರುವರಿ 2020, 14:24 IST
ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಿ ಕನ್ನಡಿಗರಿಗೆ ಶೇ 80ರಷ್ಟು ಉದ್ಯೋಗಾವಕಾಶ ನೀಡಬೇಕು ಎಂದು ಒತ್ತಾಯಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಗುರುವಾರ ಜಯದೇವ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಯಿತು
ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಿ ಕನ್ನಡಿಗರಿಗೆ ಶೇ 80ರಷ್ಟು ಉದ್ಯೋಗಾವಕಾಶ ನೀಡಬೇಕು ಎಂದು ಒತ್ತಾಯಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಗುರುವಾರ ಜಯದೇವ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಯಿತು   

ದಾವಣಗೆರೆ: ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಿ ಕನ್ನಡಿಗರಿಗೆ ಶೇ 80ರಷ್ಟು ಉದ್ಯೋಗಾವಕಾಶ ನೀಡಬೇಕು ಎಂದು ಒತ್ತಾಯಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ಮತ್ತು ಜಾಥಾ ಗುರುವಾರ ನಡೆಯಿತು. ದಾವಣಗೆರೆಯಲ್ಲಿ ಬಂದ್‌ಗೆ ಯಾವುದೇ ಸಂಘಟನೆಗಳು ಬೆಂಬಲ ನೀಡದೇ ಇದ್ದಿದ್ದರಿಂದ ಜನಜೀವನ, ವ್ಯಾಪಾರ ವಹಿವಾಟುಗಳು ಎಂದಿನಂತೆ ಇದ್ದವು.

ಕೇರಳ, ತಮಿಳುನಾಡು, ಮರಾಠಿ, ತೆಲುಗಿ, ಬಿಹಾರಿ, ನೇಪಾಳಿಗಳ ಫಲಕವನ್ನು ಕುತ್ತಿಗೆಗೆ ಹಾಕಿಕೊಂಡು ಇಲ್ಲಿನ ಎಲ್ಲ ಉದ್ಯೋಗಗಳನ್ನು ಪಡೆದು ಸಮೃದ್ಧರಾಗಿದ್ದು, ಕನ್ನಡಿಗ ಮಾತ್ರ ಉದ್ಯೋಗವಿಲ್ಲದೇ ಕಂಗಾಲಾಗಿದ್ದಾನೆ ಎಂಬುದನ್ನು ಪ್ರತಿಭಟನಕಾರರು ಜಯದೇವ ಸರ್ಕಲ್‌ನಲ್ಲಿ ತೋರಿಸಿದರು.

1986ರಲ್ಲಿ ಡಾ. ಸರೋಜಿನಿ ಮಹಿಷಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ಬಂದ ಎಲ್ಲ ಮುಖ್ಯಮಂತ್ರಿಗಳು ಈ ವರದಿಯ ಬಗ್ಗೆ ನಿರ್ಲಕ್ಷ್ಯ ತೋರಿದಿದ್ದಾರೆ. ಇದರ ವಿರುದ್ಧ ನಿರಂತರ ಹೋರಾಟ ಮಾಡುತ್ತಾ ಬಂದಿದ್ದರೂ ರಾಜ್ಯದಲ್ಲಿ ಸ್ಥಳೀಯರಿಗೆ ಮೀಸಲಾತಿ ನೀಡಿಲ್ಲ ಎಂದು ಪ್ರತಿಭಟನಕಾರರು ಆರೋಪಿಸಿದರು.

ADVERTISEMENT

ರಾಜ್ಯದಲ್ಲಿ ಸರ್ಕಾರಿ ವಲಯದ ಉದ್ಯಮಗಳಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಚೇರಿಗಳಲ್ಲಿ, ಬ್ಯಾಂಕ್‌ ಸಹಿತ ಎಲ್ಲ ಹಣಕಾಸು ಸಂಸ್ಥೆಗಳಲ್ಲಿ ಶೇ 100 ಉದ್ಯೋಗಗಳನ್ನು ಕನ್ನಡಿಗರಿಗೇ ನೀಡಬೇಕು. ಖಾಸಗಿ ಉದ್ಯಮಗಳಲ್ಲಿ, ಮಾಹಿತಿ ತಂತ್ರಜ್ಞಾನ ಸಹಿತ ವಿವಿಧ ಎಲ್ಲ ಸಂಸ್ಥೆಗಳಲ್ಲಿ ಶೇ 80ರಷ್ಟು ಮೀಸಲಾತಿ ನೀಡಬೇಕು. ಉನ್ನತ ವೇತನ ಹುದ್ದೆಗಳಿಗೆ ಎನ್‌ಇಎನ್‌ ಮೂಲಕ ಕೇಂದ್ರ ಸರ್ಕಾರ ಕನ್ನಡಿಗರಿಗೆ ಶೇ 65 ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.

ನೆರೆ ರಾಜ್ಯಗಳಾದ ಆಂಧ್ರ, ಮಹಾರಾಷ್ಟ್ರ, ತಮಿಳುನಾಡು, ಒಡಿಶಾಗಳು ಶೇ 75ರಷ್ಟು ಉದ್ಯೋಗ ಅವಕಾಶಗಳನ್ನು ಸ್ಥಳೀಯರಿಗೆ ನೀಡಿದೆ. ಕರ್ನಾಟಕದಲ್ಲಿ ಕನ್ನಡಿಗರ ಹಿತ ಕಾಪಾಡಲು ಸರ್ಕಾರಗಳು ಮುಂದಾಗಬೇಕು ಎಂದು ಒತ್ತಾಯಿಸಿದರು.

ಕನ್ನಡಪರ ಸಂಘಟನೆಗಳ ಒಕ್ಕೂಟದ ಗೌರವ ಅಧ್ಯಕ್ಷ ಕೆ.ಜಿ. ಯಲ್ಲಪ್ಪ, ಅಧ್ಯಕ್ಷ ಅವಿನಾಶ್, ಕಾರ್ಯದರ್ಶಿ ಎನ್‌.ಎಚ್‌. ಹಾಲೇಶ್‌, ಹೋರಾಟಗಾರರಾದ ಕೆ.ಜಿ. ಶಿವಕುಮಾರ್‌, ಟಿ. ಶಿವಕುಮಾರ್‌, ಕೆ.ಬಿ. ರುದ್ರೇಶ್‌, ಶುಭಮಂಗಳ, ಸೌಮ್ಯ, ಜಯಲಕ್ಷ್ಮೀ, ವೀಣಾ, ಬಲ್ಲೂರು ರವಿಕುಮಾರ್‌, ಅವರೂ ಇದ್ದರು.

ಜಯದೇವ ಸರ್ಕಲ್‌ನಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಜಾಥಾ ನಡೆಸಿ ಉಪ ವಿಭಾಗಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.