ADVERTISEMENT

ಲೋಕ ಸುತ್ತಿ, ಸಮಾಜ ಕಟ್ಟಿದರು

ಜಯದೇವಶ್ರೀ 69ನೇ ಸ್ಮರಣೋತ್ಸವದಲ್ಲಿ ಬಸವಪ್ರಭು ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 5:11 IST
Last Updated 20 ಸೆಪ್ಟೆಂಬರ್ 2025, 5:11 IST
ದಾವಣಗೆರೆಯ ಶಿವಯೋಗಾಶ್ರಮದಲ್ಲಿ ಜಯದೇವ ಸ್ವಾಮೀಜಿಯವರ 69ನೇ ವರ್ಷದ ಸ್ಮರಣೋತ್ಸವದ ಅಂಗವಾಗಿ ರಥೋತ್ಸವ ಹಾಗೂ ವಚನಗ್ರಂಥ ಮೆರವಣಿಗೆ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ನೇತೃತ್ವದಲ್ಲಿ ಶುಕ್ರವಾರ ನಡೆಯಿತು –ಪ್ರಜಾವಾಣಿ ಚಿತ್ರ
ದಾವಣಗೆರೆಯ ಶಿವಯೋಗಾಶ್ರಮದಲ್ಲಿ ಜಯದೇವ ಸ್ವಾಮೀಜಿಯವರ 69ನೇ ವರ್ಷದ ಸ್ಮರಣೋತ್ಸವದ ಅಂಗವಾಗಿ ರಥೋತ್ಸವ ಹಾಗೂ ವಚನಗ್ರಂಥ ಮೆರವಣಿಗೆ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ನೇತೃತ್ವದಲ್ಲಿ ಶುಕ್ರವಾರ ನಡೆಯಿತು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಮುರುಘಾ ಮಠದ 17 ನೇ ಪೀಠಾಧಿಪತಿಯಾಗಿದ್ದ ಜಯದೇವ ಸ್ವಾಮೀಜಿ ಲೋಕವನ್ನು ಸುತ್ತಿ ಸಮಾಜ ಕಟ್ಟಿದರು. ಈ ಮೂಲಕ ಸುಭದ್ರ ದೇಶ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದರು ಎಂದು ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿನ ಶಿವಯೋಗಿ ಮಂದಿರದಲ್ಲಿ ಜಯದೇವ ಸ್ವಾಮೀಜಿ ಅವರ 69ನೇ ಸ್ಮರಣೋತ್ಸವದ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ರಥೋತ್ಸವ ಹಾಗೂ ವಚನಗ್ರಂಥ ಮೆರವಣಿಗೆಯಲ್ಲಿ ಅವರು ಮಾತನಾಡಿದರು.

‘ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲು ಪರಿಶ್ರಮಪಟ್ಟರು. ಬಡವರ ಬದುಕಿಗೆ ಬೆಳಕಿನ ಉತ್ಸಾಹ ತುಂಬಿದರು. ಅವರ ಜೀವನೋತ್ಸಾಹ ಸಮಾಜಮುಖಿ ಕಾರ್ಯಗಳಿಗೆ ಪ್ರೇರಣೆ ನೀಡಿತು’ ಎಂದು ಕೊಂಡಾಡಿದರು.

ADVERTISEMENT

‘ಜಯದೇವ ಸ್ವಾಮೀಜಿ 1903ರಲ್ಲಿ ಮುರುಘಾ ಮಠದ ಪೀಠಾಧ್ಯಕ್ಷರಾದರು. ಆಗ ದೇಶದಲ್ಲಿದ್ದ ಅನಕ್ಷರತೆ, ಬಡತನ ನಿರ್ಮೂಲನೆಗೆ ದೃಢ ಸಂಕಲ್ಪ ಮಾಡಿದರು. ಶಿಕ್ಷಣಕ್ಕಾಗಿ ಉಚಿತ ಪ್ರಸಾದನಿಲಯಗಳನ್ನು ಸ್ಥಾಪಿಸಿದರು. ಇಂತಹ ಪ್ರಸಾದ ನಿಲಯಗಳು ದಾವಣಗೆರೆ, ಚಿತ್ರದುರ್ಗ, ತುಮಕೂರು, ತಿಪಟೂರು, ಅರಸೀಕೆರೆ, ಧಾರವಾಡ, ಕಾಶಿ, ಕೊಲ್ಲಾಪುರ, ಸಾಂಗ್ಲಿ, ಪುಣೆ ಸೇರಿದಂತೆ ಹಲವು ಸ್ಥಳಗಳಲ್ಲಿವೆ’ ಎಂದರು.

‘ವಿದ್ಯಾರ್ಥಿಗಳೆಂದರೆ ಪೂಜ್ಯರಿಗೆ ಅಪಾರ ಪ್ರೀತಿ. ಶೈಕ್ಷಣಿಕ ಕ್ರಾಂತಿಯ ಮೂಲಕ ದೇಶದ ಏಳಿಗೆಗೆ ಶ್ರಮಿಸಿದ ಮಹಾತ್ಮರು. ಜಾತೀಯತೆ, ಅಸ್ಪೃಶ್ಯತೆಯನ್ನು ಕಿತ್ತು ಹಾಕಿ ಸಮ ಸಮಾಜವನ್ನು ಕಟ್ಟಲು ಪ್ರಯತ್ನಿಸಿದರು. ಆಸ್ಪತ್ರೆ ನಿರ್ಮಾಣಕ್ಕೆ ಮೈಸೂರು ಸಂಸ್ಥಾನಕ್ಕೆ ದೇಣಿಗೆ ನೀಡಿದ್ದರು. ಹೀಗಾಗಿ, ಜಯದೇವಶ್ರೀ ಅವರಿಗೆ ನವಕೋಟಿ ನಾರಾಯಣ ಬಿರುದು ನೀಡಿ ಗೌರವಿಸಲಾಗಿತ್ತು’ ಎಂದು ಸ್ಮರಿಸಿದರು.

‘ಕರ್ನಾಟಕದ ಏಕೀಕರಣ ಹೋರಾಟದಲ್ಲಿ ಜಯದೇವಶ್ರೀ ಪಾತ್ರ ದೊಡ್ಡದು. ಸತ್ಕಾರ್ಯಗಳಿಂದ ಅವರು ಸದಾಕಾಲವೂ ಜೀವಂತವಾಗಿದ್ದಾರೆ. ಪೂಜ್ಯರ ಸಾಧನೆ ಪ್ರತಿಯೊಬ್ಬರಿಗೆ ಪ್ರೇರಣೆಯಾಗಬೇಕು. ಸತ್ಕಾರ್ಯಗಳನ್ನು ಮಾಡಬೇಕು’ ಎಂದು ಸಲಹೆ ನೀಡಿದರು.

ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಕಲಬುರಗಿ ಸಿದ್ಧಬಸವ ಕಬೀರ ಸ್ವಾಮೀಜಿ, ಬಸವ ಮಹಾಂತ ಸ್ವಾಮೀಜಿ, ಶಿರಸಂಗಿ ಶಿವಾನಂದ ಸ್ವಾಮೀಜಿ, ಬೇಲೂರು ಮಹಾಂತ ಬಸವಲಿಂಗ ಸ್ವಾಮೀಜಿ, ಐರಣಿ ಪ್ರಭುಲಿಂಗ ಸ್ವಾಮೀಜಿ, ಮೈಸೂರಿನ ಮಾತೆ ಜಯದೇವಿ, ಮಾತೆ ಚಿನ್ಮಯಿ ಹಾಜರಿದ್ದರು.

ವಚನಗ್ರಂಥ ಮೆರವಣಿಗೆ

ಜಯದೇವ ಸ್ವಾಮೀಜಿ ಸ್ಮರಣೋತ್ಸವದ ಅಂಗವಾಗಿ ರಥೋತ್ಸವ ಹಾಗೂ ವಚನಗ್ರಂಥಗಳ ಮೆರವಣಿಗೆ ಶಿವಯೋಗಾಶ್ರಮದ ಆವರಣದಲ್ಲಿ ಶುಕ್ರವಾರ ಜರುಗಿತು. ರಥದಲ್ಲಿ ಜಯದೇವ ಸ್ವಾಮೀಜಿ ಭಾವಚಿತ್ರವನ್ನು ಇಟ್ಟು ಪುಷ್ಪಾರ್ಚನೆ ಮಾಡಲಾಯಿತು. ವಿವಿಧ ಮಠಾಧೀಶರ ನೇತೃತ್ವದಲ್ಲಿ ಭಕ್ತರು ರಥವನ್ನು ಎಳೆದರು. ಬಸವಾದಿ ಶರಣರ ವಚನಗ್ರಂಥಗಳ ಮೆರವಣಿಗೆಯಲ್ಲಿ ಕಲಾತಂಡಗಳು ಗಮನ ಸೆಳೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.