ADVERTISEMENT

ದಾವಣಗೆರೆ: ಕಾರ್ಮಿಕರಿಗೆ ಬೀದಿ ಹೋರಾಟ ಅನಿವಾರ್ಯ

ಜೆಸಿಟಿಯು ಜಿಲ್ಲಾ ಸಮಾವೇಶದಲ್ಲಿ ಮುಖಂಡ ಚಂದ್ರಶೇಖರ ಮೇಟಿ ಅಭಿಮತ

​ಪ್ರಜಾವಾಣಿ ವಾರ್ತೆ
Published 11 ಮೇ 2025, 15:48 IST
Last Updated 11 ಮೇ 2025, 15:48 IST
<div class="paragraphs"><p>ದಾವಣಗೆರೆಯ&nbsp;ಪಂಪಾಪತಿ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ (ಜೆಸಿಟಿಯು) ಜಿಲ್ಲಾ ಸಮಾವೇಶವನ್ನು&nbsp;ಮುಖಂಡ ಚಂದ್ರಶೇಖರ ಮೇಟಿ ಉದ್ಘಾಟಿಸಿದರು.</p></div>

ದಾವಣಗೆರೆಯ ಪಂಪಾಪತಿ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ (ಜೆಸಿಟಿಯು) ಜಿಲ್ಲಾ ಸಮಾವೇಶವನ್ನು ಮುಖಂಡ ಚಂದ್ರಶೇಖರ ಮೇಟಿ ಉದ್ಘಾಟಿಸಿದರು.

   

ದಾವಣಗೆರೆ: ಚುನಾವಣೆಯಲ್ಲಿ ಆಡಳಿತ ಪಕ್ಷವನ್ನು ಸೋಲಿಸಿ ಮತ್ತೊಂದು ರಾಜಕೀಯ ಪಕ್ಷವನ್ನು ಅಧಿಕಾರಕ್ಕೆ ತಂದ ಮಾತ್ರಕ್ಕೆ ಕಾರ್ಮಿಕರ ಸಮಸ್ಯೆಗಳು ಬಗೆಹರಿಯುವುದಿಲ್ಲ. ಬೆಂಗಳೂರಿನ ಗಾರ್ಮೆಂಟ್ ಕಾರ್ಮಿಕರ ಮಾದರಿಯ ಬೀದಿ ಹೋರಾಟ ನಡೆಸಿದರೆ ಮಾತ್ರ ಪರಿಹಾರ ಸಾಧ್ಯ ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಮುಖಂಡ ಚಂದ್ರಶೇಖರ ಮೇಟಿ ಅಭಿಪ್ರಾಯಪಟ್ಟರು.

ಮೇ 20ರಂದು ಕರೆ ನೀಡಿರುವ ಅಖಿಲ ಭಾರತ ಮುಷ್ಕರದ ಅಂಗವಾಗಿ ಇಲ್ಲಿನ ಪಂಪಾಪತಿ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜೆಸಿಟಿಯು ಜಿಲ್ಲಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‘ದೇಶದ ಬಹುತೇಕ ರಾಜಕೀಯ ಪಕ್ಷಗಳು ಬಂಡವಾಳಶಾಹಿ ಪರವಾಗಿ ಕೆಲಸ ಮಾಡಲು ಉತ್ಸುಕವಾಗಿವೆ. ಅಧಿಕಾರದಲ್ಲಿದ್ದಾಗ ಬಂಡವಾಳಶಾಹಿ ಪರ ನೀತಿಗಳನ್ನು ರೂಪಿಸುತ್ತಿವೆ. ಆಡಳಿತ ಪಕ್ಷದ ಮೇಲಿನ ಸಿಟ್ಟಿನಿಂದ ಮತ್ತೊಂದು ಪಕ್ಷವನ್ನು ಚುನಾವಣೆಯಲ್ಲಿ ಬೆಂಬಲಿಸಿದರೆ ಅನುಕೂಲವಾಗದು. ಚುನಾವಣಾ ರಾಜಕಾರಣದಿಂದಲೇ ಕಾರ್ಮಿಕರಿಗೆ ನ್ಯಾಯ ಸಿಗಲಿದೆ ಎಂಬುದು ಭ್ರಮೆ’ ಎಂದು ಹೇಳಿದರು.

‘ಆರ್ಥಿಕ ಸಮಸ್ಯೆಗಳಿಗೆ ಸೀಮಿತವಾಗಿ ಹೋರಾಟಗಳನ್ನು ರೂಪಿಸುವುದರಿಂದಲೂ ಕಾರ್ಮಿಕರ ಸಮಸ್ಯೆ ಬಗೆಹರಿಯದು. ಸಮಾಜವನ್ನು ಶೋಷಣೆಯಿಂದ ಮುಕ್ತಿಗೊಳಿಸಲು ಹೋರಾಟ ಮಾಡಬೇಕು. ಸಮಾಜವಾದಿ ರಾಜ್ಯ ನಿರ್ಮಾಣದ ಪರಿಕಲ್ಪನೆಯ ಆಧಾರದ ಮೇರೆಗೆ ಹೋರಾಟ ರೂಪಿಸಬೇಕು’ ಎಂದು ಸಲಹೆ ನೀಡಿದರು.

‘ಜಾಗತೀಕರಣದ ಪರವಾಗಿ ವಕಾಲತ್ತು ವಹಿಸಿದ್ದ ಅಮೆರಿಕ ಇದನ್ನು ತಿರಸ್ಕರಿಸುತ್ತಿದೆ. ಆದರೆ, ಭಾರತದಲ್ಲಿ ಮಾತ್ರ ಖಾಸಗೀಕರಣದ ನೀತಿಗಳು ಬದಲಾಗುತ್ತಿಲ್ಲ. ಸಾರ್ವಜನಿಕ ಉದ್ದಿಮೆಗಳು ಕೂಡ ಖಾಸಗಿಯವರ ಪಾಲಾಗುತ್ತಿವೆ. ಇದರಿಂದ ಕಾರ್ಮಿಕರ ಉದ್ಯೋಗಕ್ಕೆ ಕುತ್ತು ಉಂಟಾಗುತ್ತಿದೆ. ಬ್ಯಾಂಕುಗಳು ಸೇರಿದಂತೆ ಎಲ್ಲೆಡೆ ಉದ್ಯೋಗದ ಅಭದ್ರತೆ ಶುರುವಾಗಿದೆ. ಗುತ್ತಿಗೆ ನೇಮಕಾತಿ ಪದ್ಧತಿ ವ್ಯಾಪಕವಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಕರ್ನಾಟಕ ಶ್ರಮಿಕ ಶಕ್ತಿ ಸಂಘಟನೆಯ ಜಿಲ್ಲಾ ಸಂಚಾಲಕ ಸತೀಶ್ ಅರವಿಂದ್, ‘ಕೇಂದ್ರ ಸರ್ಕಾರವನ್ನು ಎದುರಿಸಲು ಕಾರ್ಮಿಕರು ಶಕ್ತಿಶಾಲಿಯಾಗಬೇಕು. ಭಿನ್ನಾಭಿಪ್ರಾಯಗಳನ್ನು ತೊರೆದು ಕಾರ್ಮಿಕ ಸಂಘಟನೆಗಳು ಒಗ್ಗೂಡಬೇಕು. ಉತ್ತರ ಭಾರತದಲ್ಲಿ ದಕ್ಕಿದ ಹೋರಾಟದ ಪ್ರತಿಫಲ ದಕ್ಷಿಣ ಭಾರತದಲ್ಲಿಯೂ ಸಿಗುವಂತೆ ಆಗಬೇಕು’ ಎಂದರು.

‘ಕಾರ್ಮಿಕ ಮಸೂದೆಗಳು ಜಾರಿಯಾದರೆ ಗುಲಾಮಗಿರಿ ಪರಿಸ್ಥಿತಿ ನಿರ್ಮಾಣವಾಗುವ ಅಪಾಯವಿದೆ. ಕಾರ್ಮಿಕರ ಕಲ್ಯಾಣ ಮಂಡಳಿ ರದ್ದಾಗುವ ಸಾಧ್ಯತೆ ಇದೆ’ ಎಂದು ಸಿಐಟಿಯು ಜಿಲ್ಲಾ ಘಟಕದ ಸಂಚಾಲಕ ಆನಂದರಾಜ್ ಕಳವಳ ವ್ಯಕ್ತಪಡಿಸಿದರು.

ಸಿಪಿಐ ಮುಖಂಡ ಆವರಗೆರೆ ಚಂದ್ರು, ಜೆಸಿಟಿಯು ಸಂಚಾಲಕ ಆವರಗೆರೆ ಎಚ್.ಜಿ. ಉಮೇಶ್, ಪಂಪಾಪತಿ ಟ್ರಸ್ಟ್‌ನ ಯಲ್ಲಪ್ಪ, ಬ್ಯಾಂಕ್ ನೌಕರರ ಸಂಘದ ಮುಖಂಡ ಆಂಜನೇಯ, ಕಾರ್ಮಿಕ ಮುಖಂಡರಾದ ಪಾಲವ್ವನಹಳ್ಳಿ ಪ್ರಸನ್ನಕುಮಾರ್, ಐರಣಿ ಚಂದ್ರು ಹಾಜರಿದ್ದರು.

ಮೇ 20ರಂದು ನಡೆಯುವ ಮುಷ್ಕರ ಆಳುವ ವರ್ಗಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಬೇಕು. ಕಾರ್ಮಿಕರು ಒಗ್ಗೂಡಿ ಹೋರಾಟದಲ್ಲಿ ಪಾಲ್ಗೊಳ್ಳಬೇಕು.
–ಕೈದಾಳೆ ಮಂಜುನಾಥ, ಜಿಲ್ಲಾ ಘಟಕದ ಅಧ್ಯಕ್ಷ ಎಐಯುಟಿಯುಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.