ADVERTISEMENT

ಕಾಂಗ್ರೆಸ್‌ ಪ್ರಭಾವ ಹೆಚ್ಚಿರುವಲ್ಲಿ ಜೆಡಿಎಸ್‌ನಿಂದ ಬಿಜೆಪಿಗೆ ಬೆಂಬಲ: ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2021, 2:29 IST
Last Updated 8 ಡಿಸೆಂಬರ್ 2021, 2:29 IST
ಬಿ.ಎಸ್. ಯಡಿಯೂರಪ್ಪ
ಬಿ.ಎಸ್. ಯಡಿಯೂರಪ್ಪ   

ದಾವಣಗೆರೆ: ‘ಕಾಂಗ್ರೆಸ್ ಪ್ರಭಾವ ಹೆಚ್ಚಿರುವ ಕಡೆಗಳಲ್ಲಿ ಜೆಡಿಎಸ್ ಪಕ್ಷದ ಸ್ಥಳೀಯ ನಾಯಕರು ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸ ನನಗಿದೆ’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಇಲ್ಲಿನ ಜಿಎಂಐಟಿ ಗೆಸ್ಟ್ ಹೌಸ್‍ನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜೆಡಿಎಸ್ ಸ್ಪರ್ಧೆ ಮಾಡದ ಕಡೆಗಳಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ಈಗಾಗಲೇ ನಾವು ಬೆಂಬಲ ಕೇಳಿದ್ದು, ಬೆಂಬಲಿಸುವುದು, ಬಿಡುವುದು ಆ ಪಕ್ಷದ ವರಿಷ್ಟರಿಗೆ ಬಿಟ್ಟ ವಿಚಾರ’ ಎಂದರು.

ಆಯಾ ಜಿಲ್ಲೆಗಳ ಜೆಡಿಎಸ್‌ ಮುಖಂಡರಿಗೆ ‌ನಿರ್ಧರಿಸುವ ಅವಕಾಶವನ್ನು ನೀಡಿರುವುದರಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ 15 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುವುದು ನಿಶ್ಚಿತ ಎಂದು ತಿಳಿಸಿದರು.

ADVERTISEMENT

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಬಿ.ವೈ. ವಿಜಯೇಂದ್ರಗೆ ಸಚಿವ ಸ್ಥಾನ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಸಲಹೆ, ಸೂಚನೆ ನೀಡಿಲ್ಲ. ಕೇಂದ್ರದ ನಾಯಕರು, ಪಕ್ಷದ ವರಿಷ್ಟರು ಈ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುತ್ತಾರೆ. ರಾಜ್ಯದ ಎಲ್ಲ ಕಡೆಗೆ ನಾನು ಸಂಚಾರ ಮಾಡಿ, ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರದ ಜೊತೆಗೆ ಬಿಜೆಪಿ ಸಂಘಟನೆಗೆ ಒತ್ತು ನೀಡಿದ್ದೇನೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ವಿರೋಧಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿನಿಧಿಸಿರುವ ಕ್ಷೇತ್ರ ಬಾದಾಮಿಯಲ್ಲಿ ಆಗಿರುವ ಬೆಳವಣಿಗೆಗಳನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಸಿದ್ದರಾಮಯ್ಯ ಕ್ಷೇತ್ರದ ಗೊಂದಲದ ವಿಚಾರದಲ್ಲಿ ನಾನು ಪ್ರತಿಕ್ರಿಯಿಸುವುದಿಲ್ಲ. ಕಾದು ನೋಡೋಣ’ ಎಂದು ತಿಳಿಸಿದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರಕ್ಕೆ ಸಚಿವ ಸ್ಥಾನ ನೀಡುವ ಬಗ್ಗೆ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ’ ಎಂದು ಶಿವಮೊಗ್ಗದ ಸಂಸದ ಬಿ.ವೈ.ರಾಘವೇಂದ್ರ ಸುದ್ದಿಗಾರರಿಗೆ ತಿಳಿಸಿದರು.

‘ವಿಧಾನ ಪರಿಷತ್ ಚುನಾವಣೆಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ರಾಜ್ಯದಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ ಮೇಲ್ಮನೆಯಲ್ಲೂ ನಾವು ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸದಲ್ಲಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.