ADVERTISEMENT

ದಾವಣಗೆರೆ | 'ಸೌಲಭ್ಯ ನೈಜ ಫಲಾನುಭವಿಯ ಕೈತಪ್ಪದಿರಲಿ'

ಹೈಕೋರ್ಟ್‌ ನ್ಯಾಯಮೂರ್ತಿ ರವಿ ಹೊಸಮನಿ ಸಲಹೆ, ಕಾನೂನು ಸಲಹಾ ಕೇಂದ್ರಗಳಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 6:02 IST
Last Updated 27 ಸೆಪ್ಟೆಂಬರ್ 2025, 6:02 IST
ದಾವಣಗೆರೆ ಜಿಲ್ಲೆಯಲ್ಲಿ ಸ್ಥಾಪಿಸಿದ ಕಾನೂನು ಸಲಹಾ ಕೇಂದ್ರಗಳಿಗೆ ಹೈಕೋರ್ಟ್‌ ನ್ಯಾಯಮೂರ್ತಿ ರವಿ ಹೊಸಮನಿ ಅವರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಚಾಲನೆ ನೀಡಿದರು –ಪ್ರಜಾವಾಣಿ ಚಿತ್ರ
ದಾವಣಗೆರೆ ಜಿಲ್ಲೆಯಲ್ಲಿ ಸ್ಥಾಪಿಸಿದ ಕಾನೂನು ಸಲಹಾ ಕೇಂದ್ರಗಳಿಗೆ ಹೈಕೋರ್ಟ್‌ ನ್ಯಾಯಮೂರ್ತಿ ರವಿ ಹೊಸಮನಿ ಅವರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಚಾಲನೆ ನೀಡಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಸರ್ಕಾರಿ ಸೌಲಭ್ಯಗಳು ನೈಜ ಫಲಾನುಭವಿಗಳನ್ನು ತಲುಪದೇ ಇದ್ದರೆ ಉಳ್ಳವರು ಮತ್ತು ಇಲ್ಲದವರ ನಡುವಿನ ಅಂತರ ಹೆಚ್ಚಾಗುತ್ತದೆ. ಉಳ್ಳವರ ಬಳಿ ಸೌಲಭ್ಯಗಳು ಕ್ರೋಡೀಕರಣಗೊಳ್ಳುತ್ತವೆ. ಇದರಿಂದ ಸರ್ಕಾರದ ಆಶಯ, ಉದ್ದೇಶಗಳು ತಲೆಕೆಳಗಾಗುತ್ತವೆ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ರವಿ ಹೊಸಮನಿ ಅಭಿಪ್ರಾಯಪಟ್ಟರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಜಿಲ್ಲೆಯ 850ಕ್ಕೂ ಅಧಿಕ ಕಾನೂನು ಸಲಹಾ ಕೇಂದ್ರಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರಿ ಸೌಲಭ್ಯ, ಸೇವೆಯಿಂದ ಯಾರೊಬ್ಬರನ್ನೂ ಕೈಬಿಡಬಾರದು. ಎಲ್ಲರನ್ನೂ ಒಳಗೊಳ್ಳುವ ಪ್ರಯತ್ನ ನಡೆಯಬೇಕು. ಕಟ್ಟಕಡೆಯ ವ್ಯಕ್ತಿಗೂ ಸವಲತ್ತುಗಳು ಸಿಗುವಂತೆ ಆಗಬೇಕು. ನ್ಯಾಯ ಎಲ್ಲರಿಗೂ ಸಿಗುವಂತಹ ವ್ಯವಸ್ಥೆ ನಿರ್ಮಾಣ ಆಗಬೇಕು. ಹಕ್ಕು, ಸೌಲಭ್ಯಗಳ ಬಗ್ಗೆ ಮೊದಲು ಅರಿವು ಮೂಡಿಸಬೇಕು. ಅವುಗಳನ್ನು ಪಡೆಯುವ ಆಯ್ಕೆ ಪ್ರಜೆಗಳಿಗೆ ಇದೆ’ ಎಂದು ಪ್ರತಿಪಾದಿಸಿದರು.

‘ಶತಮಾನಗಳಿಂದ ನೋವು ಅನುಭವಿಸಿದವರು ಮೌನಕ್ಕೆ ಶರಣಾಗಿದ್ದಾರೆ. ಸರ್ಕಾರ ಎಷ್ಟೇ ಪ್ರಯತ್ನಿಸಿದರೂ ಸೌಲಭ್ಯ ತಲುಪಿಸಲು ಈವರೆಗೆ ಸಾಧ್ಯವಾಗಿಲ್ಲ. ಸಂವಿಧಾನಬದ್ಧ ಹಕ್ಕುಗಳ ಬಗ್ಗೆ ಗೊತ್ತಾಗಬೇಕು. ಆಗ ಅವುಗಳನ್ನು ಪಡೆಯುವ ನಿಟ್ಟಿನಲ್ಲಿ ಪ್ರಜೆಗಳು ಪ್ರಯತ್ನಿಸುವ ಸಾಧ್ಯತೆ ಇದೆ’ ಎಂದು ಹೇಳಿದರು.

‘ಮೂಲಭೂತ ಹಕ್ಕುಗಳನ್ನು ನ್ಯಾಯಾಲಯಕ್ಕೆ ಬಂದು ಪಡೆಯಲು ಎಲ್ಲರಿಗೂ ಸಾಧ್ಯವಿಲ್ಲ. ಅವರು ಇರುವ ಸ್ಥಳದಲ್ಲಿಯೇ ಹಕ್ಕುಗಳನ್ನು ತಲುಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ಕಾನೂನುಗಳನ್ನು ರೂಪಿಸಿದೆ’ ಎಂದರು.

‘ಸಂವಿಧಾನದ ರಾಜನಿರ್ದೇಶಕ ತತ್ವಗಳು ಹಾಗೂ ಪ್ರಸ್ತಾವನೆ ಅತ್ಯುತ್ತಮವಾಗಿವೆ. ಪ್ರಸ್ತಾವನೆ ಉತ್ತಮ ಕಾವ್ಯ ಕೂಡ ಹೌದು. ಅದರೊಳಗಿನ ಆಶಯ ಅತಿದೊಡ್ಡದು. ಪ್ರತಿಯೊಬ್ಬರೂ ಪಾಲ್ಗೊಂಡಾಗ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯ’ ಎಂದರು.

‘ಸರ್ಕಾರದ ಜನ ಕಲ್ಯಾಣ ಯೋಜನೆಗಳ ಕುರಿತು ಜಾಗೃತಿ ಮೂಡಿಸಿ ಅರ್ಹರಿಗೆ ತಲುಪುವಂತೆ ಮಾಡಲು ಗ್ರಾಮ ಮಟ್ಟದಿಂದ ಕಾನೂನು ಸಲಹಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಮಧ್ಯ ಕರ್ನಾಟಕದ ದಾವಣಗೆರೆಯಿಂದ ಮೊದಲ ಬಾರಿಗೆ ಇಂತದೊಂದು ಪ್ರಯತ್ನ ನಡೆಯುತ್ತಿದೆ. ಮನೆ, ಸುತ್ತಲಿನ ಪರಿಸರದಲ್ಲಿನ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಸಲಹಾ ಕೇಂದ್ರಕ್ಕೆ ತಲುಪಿಸಬಹುದು’ ಎಂದು ಹೇಳಿದರು.

‘ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಒಂದು ತಂಡವಾಗಿ ಕಾರ್ಯನಿರ್ವಹಿಸುತ್ತಿದೆ. ಪೋಕ್ಸೊ, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಮಹಿಳೆಯರ ರಕ್ಷಣೆ, ಅಪೌಷ್ಟಿಕತೆ, ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸಲಾಗಿದೆ. ಈ ಪ್ರಯತ್ನದ ಫಲವಾಗಿ ಪ್ರಸಕ್ತ ವರ್ಷ ಶೇ 30ರಷ್ಟು ಅಪಘಾತ ಪ್ರಕರಣ ನಿಯಂತ್ರಣಕ್ಕೆ ಬಂದಿವೆ’ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು.

ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶೆ ಡಿ.ಕೆ. ವೇಲಾ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಕರೆಣ್ಣವರ, ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗುರುಬಸವರಾಜ್ ಹಾಜರಿದ್ದರು.

850ಕ್ಕೂ ಹೆಚ್ಚು ಸಲಹಾ ಕೇಂದ್ರ ಕಾರ್ಯಾರಂಭ ಸಂವಿಧಾನಬದ್ಧ ಹಕ್ಕುಗಳ ಬಗ್ಗೆ ಮೂಡಲಿ ಅರಿವು ಸಲಹಾ ಕೇಂದ್ರಕ್ಕೆ ಸಮಸ್ಯೆಗಳನ್ನು ತಲುಪಿಸಬಹುದು

ಸೈಬರ್‌ ಅಪರಾಧ ಪ್ರಕರಣಗಳಲ್ಲಿ ಹಣ ಕಳೆದುಕೊಂಡವರಲ್ಲಿ ಬಹುಪಾಲು ಜನರು ಅಕ್ಷರಸ್ಥರು. ಕಾನೂನು ಅರಿವಿಲ್ಲದೇ ಠಾಣೆಗೆ ಬರಲು ಹಿಂಜರಿಯುತ್ತಾರೆ. ಇಂಥವರಿಗೂ ಸಲಹಾ ಕೇಂದ್ರ ಉಪಯುಕ್ತ
ಉಮಾ ಪ್ರಶಾಂತ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಲಹಾ ಕೇಂದ್ರ ತೆರೆದಿದ್ದರಿಂದ ವ್ಯಾಜ್ಯ ನಿರ್ವಹಣಾ ಸಮಿತಿಗೆ ಅನುಕೂಲ. ಗ್ರಾಮೀಣ ಪ್ರದೇಶದ ಜನರಿಗೆ ಕಾನೂನು ತಿಳಿವಳಿಕೆ ನೀಡಲು ಸಾಧ್ಯವಾಗಲಿದೆ
ಗಿತ್ತೆ ಮಾಧವ ವಿಠ್ಠಲರಾವ್‌ ಸಿಇಒ ಜಿಲ್ಲಾ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.