
ಕಡರನಾಯ್ಕನಹಳ್ಳಿ: ಬೀದಿ ಬದಿಯ ವ್ಯಾಪಾರಿಗಳಿಗೆ ಹಲವು ಸಮಸ್ಯೆಗಳಿವೆ. ನಮ್ಮಿಂದ ನಗರದ ಅಭಿವೃದ್ಧಿಗೆ ಅಡ್ಡಿ ಎಂಬ ಆಪಾದನೆ ದೂರವಾಗಬೇಕು ಎಂದು ಭರಮಪ್ಪ ಶಿವಣ್ಣನವರ ಹೇಳಿದರು.
ಸಮೀಪದ ಉಕ್ಕಡಗಾತ್ರಿ ಗ್ರಾಮದಲ್ಲಿ ಸೋಮವಾರ ನಡೆದ ಗ್ರಾಮ ಪಂಚಾಯಿತಿ ಮಟ್ಟದ ಬೀದಿ ಬದಿ ವ್ಯಾಪಾರಸ್ಥರ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು .
ಬಡತನ ರೇಖೆಗಿಂತ ಕೆಳಗಿರುವ ಬೀದಿ ಬದಿ ವ್ಯಾಪಾರಿಗಳಿಗೆ ಸೂಕ್ತ ಸ್ಥಳಾವಕಾಶ, ವಸತಿಯನ್ನು ಗ್ರಾಮಾಡಳಿತ ಒದಗಿಸಬೇಕು ಎಂದು ಬೀದಿ ಬದಿ ವ್ಯಾಪಾರಿಗಳ ಸಂಘದ ಗೌರವಾಧ್ಯಕ್ಷ ಮಂಜುನಾಥ್ ದೊಡ್ಮನಿ ತಿಳಿಸಿದರು.
ಉಕ್ಕಡಗಾತ್ರಿ ಒಂದು ಪ್ರೇಕ್ಷಣೀಯ ಸ್ಥಳವಾಗಿದ್ದು, ಪ್ರತಿ ನಿತ್ಯ ಕರಿಬಸವೇಶ್ವರ ಅಜ್ಜಯ್ಯನ ದರ್ಶನಕ್ಕೆ ನೂರಾರು ಭಕ್ತರು ಬರುತ್ತಾರೆ. ಬೀದಿ ಬದಿ ವ್ಯಾಪಾರಿಗಳು ತ್ಯಾಜ್ಯವನ್ನು ಕಸವಿಲೇವಾರಿ ವಾಹನಕ್ಕೆ ನೀಡಬೇಕು. ನೈರ್ಮಲ್ಯ ಮುಕ್ತ ಗ್ರಾಮವನ್ನಾಗಿಸಲು ಸಹಕರಿಸಬೇಕು ಎಂದು ಕರಿಬಸವೇಶ್ವರ ಅಜ್ಜಯ್ಯನ ಗದ್ದುಗೆ ಟ್ರಸ್ಟ್ ಕಾರ್ಯದರ್ಶಿ ಎಸ್. ಸುರೇಶ್ ಹೇಳಿದರು.
ಕೈದಾಳ ಮಂಜುನಾಥ್ ಬೀದಿ ಬದಿ ವ್ಯಾಪಾರಿಗಳಿಗೆ ಕಾನೂನು ಅರಿವಿನ ಬಗ್ಗೆ ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ಕಟಿಗೇರ ಕಾರ್ಯಕ್ರಮ ಉದ್ಘಾಟಿಸಿದರು. ವೈದ್ಯ ನಾಗರಾಜ್ ಜಿಗಳಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಂದ್ರಗೌಡ ಜಿಗಳೇರ, ಶಂಕ್ರಪ್ಪ ಕಮದೋಡ್, ಬೀದಿ ಬದಿ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷೆ ರಾಧಾ, ಕಾರ್ಯದರ್ಶಿ ಚಂದ್ರಶೇಖರ್ ಪೂಜಾರಿ, ಶೈಲಾ ಕೋಟಿಮನೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.