ADVERTISEMENT

ಕಂದಾಚಾರ ತೊಲಗಿಸಲು ಶ್ರಮಿಸಿದ ದಾರ್ಶನಿಕ: ಶಾಸಕ ಕೆ.ಎಸ್‌. ಬಸವಂತಪ್ಪ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 6:06 IST
Last Updated 9 ನವೆಂಬರ್ 2025, 6:06 IST
ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಜಯಂತಿಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಶಾಸಕ ಕೆ.ಎಸ್‌. ಬಸವಂತಪ್ಪ ಪುಷ್ಪಾರ್ಚನೆ ಸಲ್ಲಿಸಿದರು
ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಜಯಂತಿಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಶಾಸಕ ಕೆ.ಎಸ್‌. ಬಸವಂತಪ್ಪ ಪುಷ್ಪಾರ್ಚನೆ ಸಲ್ಲಿಸಿದರು   

ದಾವಣಗೆರೆ: ಭಕ್ತ ಕನಕದಾಸರು ಜಾತಿ ಮತ್ತು ಧರ್ಮಗಳಲ್ಲಿನ ಕಂದಾಚಾರಗಳನ್ನು ಸಮಾಜದಿಂದ ತೊಲಗಿಸಲು ಪ್ರಯತ್ನಿಸಿದರು. ಆಳವಾದ ಜೀವನಾನುಭವ ಹೊಂದಿದ್ದ ಅವರು ಸಮಾಜ ಕಟ್ಟುವ ನಿಟ್ಟಿನಲ್ಲಿ ಸಾಕಷ್ಟು ಶ್ರಮಿಸಿದರು ಎಂದು ಶಾಸಕ ಕೆ.ಎಸ್‌. ಬಸವಂತಪ್ಪ ಅಭಿಪ್ರಾಯಪಟ್ಟರು.

ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಕನಕದಾಸರ ಜಯಂತಿಯಲ್ಲಿ ಅವರು ಮಾತನಾಡಿದರು.

‘ಕನಕದಾಸರು ರಚಿಸಿದ ಸಾಹಿತ್ಯ ಕೃತಿಗಳು ಸಮಾಜದ ಅಂಕು–ಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡಿವೆ. ‘ರಾಮಧಾನ್ಯ ಚರಿತೆ’ಯ ಮೂಲಕ ಸಮಾಜದ ಮೇಲು–ಕೀಳು ನಿರ್ಮೂಲನೆಗೆ ಶ್ರಮಿಸಿದರು. ಧಾನ್ಯಗಳಿಗೆ ಧ್ವನಿಯಾದ ಪರಿ ವಿಶಿಷ್ಟವಾಗಿದೆ’ ಎಂದು ಪ್ರತಿಪಾದಿಸಿದರು.

ADVERTISEMENT

‘ಉಡುಪಿಯ ಶ್ರೀಕೃಷ್ಣ ದೇಗುಲದಲ್ಲಿನ ಕನಕನ ಕಿಂಡಿ, ಮದ್ಯವನ್ನು ಜೇನುತುಪ್ಪವಾಗಿಸಿದ ಪವಾಡಗಳು ಸಮಾಜದ ಮೇಲೆ ಗಾಢ ಪ್ರಭಾವಬೀರಿವೆ. ಇತಿಹಾಸ ಹಾಗೂ ಪುರಾಣ ಪುರುಷರನ್ನು ದೇವರನ್ನಾಗಿ ಆರಾಧಿಸುವ ಪ್ರವೃತ್ತಿ ಹೆಚ್ಚಾಗಿದೆ. ಮಾನವತಾವಾದಿಗಳನ್ನು ವ್ಯಕ್ತಿಯಾಗಿಯೇ ಸ್ವೀಕರಿಸಬೇಕು. ಅವರು ಪ್ರತಿಪಾದಿಸಿದ ಮೌಲ್ಯಗಳನ್ನು ಪಾಲನೆ ಮಾಡಬೇಕು’ ಎಂದು ಸಲಹೆ ನೀಡಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ ಹೆಗಡೆ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌. ಶಿವಕುಮಾರ, ಅಬಕಾರಿ ಇಲಾಖೆಯ ಅಧಿಕಾರಿ ಚಿದಾನಂದ, ಡಿಡಿಪಿಐ ಕೊಟ್ರೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಸಮುದಾಯದ ಮುಖಂಡರಾದ ಎಚ್.ಬಿ. ಗೋಣೆಪ್ಪ, ಗುರುನಾಥ, ಪರಶುರಾಮ, ಎಸ್.ಎಸ್.ಗಿರೀಶ್ ಹಾಜರಿದ್ದರು.

ದಾರ್ಶನಿಕರ ಜಯಂತಿಗಳನ್ನು ಒಂದೇ ವೇದಿಕೆಯಲ್ಲಿ ಆಚರಿಸಬೇಕು. ಎಲ್ಲ ಸಮುದಾಯಗಳು ಒಟ್ಟಿಗೆ ಸೇರಿದಾಗ ಸಮಾನತೆ ಸಾಧ್ಯವಾಗಲಿದೆ
ಕೆ.ಎಸ್. ಬಸವಂತಪ್ಪ, ಶಾಸಕ

‘ಸಾಹಿತ್ಯ ಕೊಡುಗೆ ಅಪಾರ’

ಕನಕದಾಸರು ಕೀರ್ತನೆಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಭಕ್ತಿ ಹಾಗೂ ಜ್ಞಾನ ಬಲದಿಂದ ಜಾತಿ ವ್ಯವಸ್ಥೆ ವಿರುದ್ಧ ಧ್ವನಿಯೆತ್ತಿ ಸಾಮಾಜಿಕ ಮೌಲ್ಯ ಪ್ರತಿಪಾದಿಸಿ ದಾಸಶ್ರೇಷ್ಠರಾಗಿದ್ದಾರೆ ಎಂದು ಬಿಜೆಪಿ ಮುಖಂಡ ಯಶವಂತರಾವ್ ಜಾಧವ್ ಅಭಿಪ್ರಾಯಪಟ್ಟರು. ಇಲ್ಲಿನ ಗಡಿಯಾರ ಕಂಬದ ಬಳಿ ಕನಕದಾಸರ ಭಾವಚಿತ್ರಕ್ಕೆ ಶನಿವಾರ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು ‘ಕನಕದಾಸರು ಸಮಾಜದ ಅನಿಷ್ಟ ಪದ್ಧತಿಗಳ ವಿರುದ್ಧ ಧ್ವನಿಯತ್ತಿದರು. ಸಮಾಜವನ್ನು ತಿದ್ದುವ ಕೆಲಸ ಮಾಡಿದರು’ ಎಂದರು. ಬಿಜೆಪಿ ಮುಖಂಡರಾದ ಬಿ. ರಮೇಶ್ ನಾಯಕ್ ಆನೆಕೊಂಡ ಪುಟ್ಟಣ್ಣ ಶಿವನಗೌಡ ಪಾಟೀಲ್ ಗೋವಿಂದ ರಾಜ್ ತರಕಾರಿ ಶಿವು ನವೀನ ಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.