
ದಾವಣಗೆರೆ: ‘ಕನಕದಾಸರು ತಮ್ಮ ಸಾಹಿತ್ಯದ ಮೂಲಕ ಜನರ ಮನಸ್ಸು ಮತ್ತು ಹೃದಯದಲ್ಲಿದ್ದ ಕಲ್ಮಶ ತೊಳೆದು ದಾಸರಲ್ಲಿಯೇ ಶ್ರೇಷ್ಠ ದಾಸರಾಗಿ ಹೊರಹೊಮ್ಮಿದರು’ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಅಭಿಪ್ರಾಯಪಟ್ಟರು.
ಇಲ್ಲಿನ ಅಭಿನವ ರೇಣುಕಾ ಮಂದಿರದಲ್ಲಿ ಕುರುಬ ಸಮುದಾಯದಿಂದ ಶನಿವಾರ ಏರ್ಪಡಿಸಿದ್ದ ದಾಸಶ್ರೇಷ್ಠ ಕನಕದಾಸರ 538ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಜ್ಞಾನದ ಮೂಲಕ ಜಾಗೃತಿ ಮೂಡಿಸಿದ ಕನಕದಾಸರು ಸಮಾಜದ ಅಂಧಃಕಾರ ತೊಳೆಯುವುದರ ಜತೆಗೆ ದಾಸ್ಯ, ಅಸ್ಪೃಶ್ಯತೆ, ಅಸಮಾನತೆ ಮತ್ತು ಮಡಿವಂತಿಕೆ ವಿರುದ್ಧ ಧ್ವನಿ ಎತ್ತಿದರು’ ಎಂದು ಹೇಳಿದರು.
‘ಹಾವೇರಿ ಜಿಲ್ಲೆಯ ಬಾಡಾದಲ್ಲಿ ಹುಟ್ಟಿದ ತಿಮ್ಮಪ್ಪ ನಾಯಕ ಕನಕನಾಗಿ ಬೆಳೆದು ಇಡೀ ವಿಶ್ವಕ್ಕೆ ಪರಿಚಿತರಾದರು. ಕನಕದಾಸರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿರುವ ಅಂಧಃಕಾರ ತೊಳೆಯಲು ಎಲ್ಲರೂ ಪ್ರಯತ್ನಿಸೋಣ’ ಎಂದರು.
‘ಕನಕದಾಸರು ನಮಗೆ ಸ್ವಾಭಿಮಾನದ ಪಾಠ ಹೇಳಿದ್ದಾರೆ. ಕನಕದಾಸರಿಗೆ ಗೌರವ ತಂದುಕೊಡಬೇಕಾದರೆ ಸ್ವಾಭಿಮಾನದಿಂದ ಬದುಕಬೇಕು. ಆದರೆ, ನಾವು ಸ್ವಾಭಿಮಾನ ಬಿಟ್ಟು ರಾಜೀಯಾಗಿರುವುದರಿಂದ ದೊಡ್ಡ ಸ್ಥಾನಕ್ಕೆ ಏರಲು ಸಾಧ್ಯವಾಗುತ್ತಿಲ್ಲ’ ಎಂದು ಇನ್‌ಸೈಟ್ಸ್ ಐಎಎಸ್ ಸಂಸ್ಥೆಯ ಸಂಸ್ಥಾಪಕ ಜಿ.ಬಿ.ವಿನಯಕುಮಾರ್ ಬೇಸರಿಸಿದರು.
‘ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾನಾ ಕಾರ್ಯಗಳ ಮೂಲಕ ಸಮುದಾಯಕ್ಕೆ ಘನತೆ ಮತ್ತು ಗೌರವ ತುಂದುಕೊಟ್ಟಿದ್ದಾರೆ. ಅಲ್ಲದೆ, ನಮ್ಮವರು ಮುಖ್ಯಮಂತ್ರಿ ಆಗಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಪ್ರಧಾನಿ ಆಗಬಹುದು ಎನ್ನುವುದನ್ನು ತೋರಿಸುವ ಸಾಮರ್ಥ್ಯ ನಮ್ಮಲ್ಲಿದೆ. ಆದ್ದರಿಂದ ಎಲ್ಲರೂ ಸ್ವಾಭಿಮಾನದಿಂದ ಬದುಕಬೇಕು’ ಎಂದು ಹೇಳಿದರು.
ಹದಡಿಯ ಮುರಳಿಧರ ಸ್ವಾಮೀಜಿ, ಉದಯಶಂಕರ ಒಡೆಯರ್ ಸಾನ್ನಿಧ್ಯ ವಹಿಸಿದ್ದರು.
‘ಧೂಡಾ’ ಅಧ್ಯಕ್ಷ ದಿನೇಶ್ ಶೆಟ್ಟಿ, ಬಯಲುಸೀಮೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಈಡಿಗ ಸಮುದಾಯದ ಮುಖಂಡ ಎ.ನಾಗರಾಜ್, ವೀರಶೈವ ಸಮುದಾಯದ ಮುಖಂಡ ದೇವರಮನಿ ಶಿವರಾಜ್, ಕುರುಬ ಸಮುದಾಯದ ಮುಖಂಡರಾದ ಜೆ.ಎನ್. ಶ್ರೀನಿವಾಸ್, ಎಚ್.ಬಿ. ಗೋಣೆಪ್ಪ, ಪರಶುರಾಮಪ್ಪ, ಜಿ.ಸಿ. ನಿಂಗಪ್ಪ, ಭೈರೇಶ್, ಜಯಣ್ಣ, ಎಸ್.ಎಸ್. ಗಿರೀಶ್, ಕೆ.ಪ್ರಸನ್ನಕುಮಾರ್, ಸುನಂದಮ್ಮ, ಸುಧಾ ಇಟ್ಟಿಗುಡಿ ಮಂಜುನಾಥ್, ಪುಷ್ಪಾ ಆನಂದ್, ಎಸ್.ಟಿ. ಅರವಿಂದ ಹಾಲೇಕಲ್ಲು, ಬಿ.ನಿಂಗರಾಜ್ ಮತ್ತಿತರರಿದ್ದರು.
ಕನಕದಾಸರು ಹಾಕಿಕೊಟ್ಟ ಮಾರ್ಗದಲ್ಲಿ ಸಮುದಾಯ ಸಾಗಬೇಕು. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ ಮಹಾತ್ವಾಕಾಂಕ್ಷಿಗಳನ್ನಾಗಿ ಬೆಳೆಸಬೇಕೇ ಹೊರತು ಯಾವುದೇ ಕಾರಣಕ್ಕೂ ಅಲ್ಪತೃಪ್ತರನ್ನಾಗಿಸಬಾರದುಜಿ.ಬಿ.ವಿನಯಕುಮಾರ್ ಇನ್‌ಸೈಟ್ಸ್ ಐಎಎಸ್ ಸಂಸ್ಥೆಯ ಸಂಸ್ಥಾಪಕ
‘ಕನಕದಾಸರು ವೈಚಾರಿಕ ಚಿಂತನೆಯ ಸಾಕಾರಮೂರ್ತಿ’
ಉಪನ್ಯಾಸ ನೀಡಿದ ಮುದೇಗೌಡ್ರು ಪದವಿ ಕಾಲೇಜಿನ ಪ್ರಾಂಶುಪಾಲ ಮಾರುತಿ ಶಾಲೆಮನೆ ‘ಕನಕದಾಸರು ವೈಚಾರಿಕ ಚಿಂತನೆಯ ಸಾಕಾರಮೂರ್ತಿ. ಭವರೋಗದಲ್ಲಿ ಬಿದ್ದು ಒದ್ದಾಡುವ ಜೀವಿಗಳನ್ನು ನಿರಾಳತೆಗೊಳಿಸಿದ ಸಂತ. ಇವತ್ತು ನಾವು ಕನಕನ ಮೂರ್ತಿಯನ್ನು ಪೂಜಿಸುತ್ತಿದ್ದೇವೆ. ಆದರೆ ಅವರ ವಿಚಾರಗಳು ಮೂಲೆಗೆ ಬಿದ್ದಿವೆ. ಅವರ ವಿಚಾರದ ಬೆಳಕು ಮನೆ ಮನೆಗಳಲ್ಲಿ ಬೆಳಗಿದಾಗ ಮಾತ್ರ ಅವರ ಜಯಂತಿ ಆಚರಿಸಿದ್ದು ಸಾರ್ಥಕವಾಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.