
ಹೊನ್ನಾಳಿ: ‘ನಾವು ಜಾಗೃತಿಯಾಗದಿದ್ದರೆ ಈ ಸಮಾಜಕ್ಕೆ ಕವಡೆ ಕಾಸಿನ ಕಿಮ್ಮತ್ತು ಇರುವುದಿಲ್ಲ’ ಎಂದು ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.
ಬುಧವಾರ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಕುರುಬರ ಸಂಘದ ತಾಲ್ಲೂಕು ಘಟಕ ಏರ್ಪಡಿಸಿದ್ದ 538ನೇ ಕನಕದಾಸರ ಜಯಂತ್ಯುತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಸ್ವಾಮೀಜಿಗಳ, ಚಿಂತಕರ ಮಾತುಗಳನ್ನು ಕುಳಿತು ಕೇಳುವ ಸಂಸ್ಕೃತಿ, ಸಂಸ್ಕಾರವನ್ನು ಯಾರು ಅಳವಡಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಯಾವ ಸಮಾಜವೂ ಜಾಗೃತಿಯಾಗಲಾರದು. ಯಾವ ಸಮಾಜ ಶೈಕ್ಷಣಿಕವಾಗಿ ಪ್ರಬಲವಾಗಿರುತ್ತದೋ ಅಂತಹ ಸಮಾಜ ಮಾತ್ರ ಸಹಜವಾಗಿ ಎಲ್ಲ ರಂಗಗಳಲ್ಲಿ ಬಲಿಷ್ಠವಾಗಿರುತ್ತದೆ’ ಎಂದು ಹೇಳಿದರು.
‘ಸಂಘಟನೆ ಬಲಿಷ್ಠವಾಗಿರದಿದ್ದರೆ ಯಾವ ಸೌಲಭ್ಯಗಳನ್ನು ನಾವು ಪಡೆಯಲಾಗುವುದಿಲ್ಲ. ನಮ್ಮಲ್ಲಿ ಒಗ್ಗಟ್ಟಿದ್ದರೆ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಸಿಗುತ್ತದೆ, ಇಲ್ಲವಾದರೆ ಏನೂ ಸಿಗುವುದಿಲ್ಲ’ ಎಂದು ಹೇಳಿದರು.
ಸಮಾರಂಭ ಉದ್ಘಾಟಿಸಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಮಾತನಾಡಿ, ‘ಅಪಮಾನ, ನೋವುಗಳನ್ನು ಸಹಿಸಿ ತಮ್ಮ ಸತ್ಕಾರ್ಯ, ಸನ್ನಡತೆಗಳಿಂದ ಮೇಲೆ ಬರುವ ಗುಣವನ್ನು ಮಹಿಳೆಯರು ಕನಕದಾಸರ ಜೀವನದಿಂದ ತಿಳಿದುಕೊಳ್ಳಬೇಕಾಗಿದೆ’ ಎಂದರು.
‘ಹೆಣ್ಣುಮಕ್ಕಳು ಮೇಲೆ ಬರುವ ಪ್ರಯತ್ನ ಮಾಡಿದರೆ ಕೊನೆಯಲ್ಲಿ ಅವರ ವಿರುದ್ಧ ಚಾರಿತ್ರ್ಯವಧೆಯ ಅಸ್ತ್ರ ಪ್ರಯೋಗ ಮಾಡುತ್ತಾರೆ. ಆದರೆ, ಒಂದು ಹೆಣ್ಣು ಮನೆ ಕಾಯುವಂತೆ, ಶಕ್ತಿದೇವತೆ ದುರ್ಗಾಮಾತೆ ಊರು ಕೇರಿಗಳನ್ನು ಕಾಯುತ್ತಾಳೆ. ನಿಮ್ಮ ರಕ್ಷಣೆಗೆ ಪೊಲೀಸ್ ಮತ್ತು ಮಹಿಳಾ ಆಯೋಗ ಇದ್ದೇ ಇರುತ್ತದೆ’ ಎಂದು ತಿಳಿಸಿದರು.
ರಾಜ್ಯ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ‘ಸಮಾಜದ ಸಂಘಟನೆ ಹಾಗೂ ಅಭಿವೃದ್ಧಿಗೆ ಮಠಗಳು ಅವಿಶ್ರಾಂತವಾಗಿ ಶ್ರಮಿಸುತ್ತಿವೆ. ಸಮಾಜದವರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವ ನಮ್ಮ ಗುರುಗಳಿಗೆ ಸಮಾಜದ ಬೆಂಬಲಬೇಕು. ಗುರುಗಳ ಶ್ರಮ ಮತ್ತು ಉದ್ದೇಶಗಳನ್ನು ಸಮಾಜದ ಬಂಧುಗಳು ಅರ್ಥಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿದರು. ಶಿವಮೊಗ್ಗದ ಲಿಂಗದಹಳ್ಳಿ ಹಾಲಪ್ಪ ಉಪನ್ಯಾಸ ನೀಡಿದರು. ಕಾರ್ಯಾಧ್ಯಕ್ಷ ಧರ್ಮಪ್ಪ ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಎಂ.ಆರ್. ಮಹೇಶ್, ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್, ಶ್ರೀದೇವಿ ಧರ್ಮಪ್ಪ, ಅಧ್ಯಕ್ಷ ಎಂ.ಸಿ. ಮೋಹನ್ ಮಾತನಾಡಿದರು.
ಉಪವಿಭಾಗಾಧಿಕಾರಿ ಎಚ್.ಬಿ. ಚನ್ನಪ್ಪ, ಪುರಸಭೆ ಮುಖ್ಯಾಧಿಕಾರಿ ಟಿ.ಲೀಲಾವತಿ. ಬಿಇಒ ಕೆ.ಟಿ.ನಿಂಗಪ್ಪ, ಎಇಇ ಹರೀಶ್, ಮುಖಂಡರಾದ ಎಚ್.ಎ. ನರಸಿಂಹಪ್ಪ, ಪ್ರಕಾಶ್ ಆರುಂಡಿ, ಹಾಲುಮತ ಸಮಾಜದ ಪಂಕಜಾ ಅರುಣ್, ಸೌಮ್ಯಾ, ಸಿಪಿಐ ಸುನಿಲ್ ಕುಮಾರ್, ಎಚ್.ಬಿ.ಅಣ್ಣಪ್ಪ, ಹರಳಹಳ್ಳಿ ಬೆನಕಪ್ಪ, ಕುಂಬಳೂರು ವಾಗೀಶ್ ಉಪಸ್ಥಿತರಿದ್ದರು.
ಮಹಿಳೆಯರು ಪೂರ್ಣಕುಂಭದೊಂದಿಗೆ ಸ್ವಾಮೀಜಿಯನ್ನು ಸ್ವಾಗತಿಸಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತಂದರು. ಡೊಳ್ಳುಕುಣಿತ, ಮಂಗಳವಾದ್ಯಗಳೊಂದಿಗೆ ಅದ್ದೂರಿ ಮೆರವಣಿಗೆ ನಡೆಯಿತು. ಸಾವಿರಾರು ಜನ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಸಾವಿರಾರು ಜನರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.