ADVERTISEMENT

ರೈತರ ಹೋರಾಟ ಬೆಂಬಲಿಸಿ 25ಕ್ಕೆ ಕನ್ನಡಪರ ಸಂಘಟನೆಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 8:24 IST
Last Updated 23 ಸೆಪ್ಟೆಂಬರ್ 2020, 8:24 IST
ಎಪಿಎಂಸಿ, ಭೂಸುಧಾರಣೆ ಹಾಗೂ ಕಾರ್ಮಿಕ ಕಾಯ್ದೆ ತಿದ್ದುಪಡಿ ವಿರೋಧಿಸಿ ದಾವಣಗೆರೆ ಜಿಲ್ಲಾ ಕನ್ನಡಪರ ಸಂಘಟನೆಗಳ ಒಕ್ಕೂಟವು ಸೆಪ್ಟೆಂಬರ್‌ 25ರಂದು ಹಮ್ಮಿಕೊಂಡಿರುವ ಪ್ರತಿಭಟನಾ ಮೆರವಣಿಗೆ ಕುರಿತು ಒಕ್ಕೂಟದ ಗೌರವಾಧ್ಯಕ್ಷ ಕೆ.ಜಿ.ಯಲ್ಲಪ್ಪ ಬುಧವಾರ ಮಾಹಿತಿ ನೀಡಿದರು.
ಎಪಿಎಂಸಿ, ಭೂಸುಧಾರಣೆ ಹಾಗೂ ಕಾರ್ಮಿಕ ಕಾಯ್ದೆ ತಿದ್ದುಪಡಿ ವಿರೋಧಿಸಿ ದಾವಣಗೆರೆ ಜಿಲ್ಲಾ ಕನ್ನಡಪರ ಸಂಘಟನೆಗಳ ಒಕ್ಕೂಟವು ಸೆಪ್ಟೆಂಬರ್‌ 25ರಂದು ಹಮ್ಮಿಕೊಂಡಿರುವ ಪ್ರತಿಭಟನಾ ಮೆರವಣಿಗೆ ಕುರಿತು ಒಕ್ಕೂಟದ ಗೌರವಾಧ್ಯಕ್ಷ ಕೆ.ಜಿ.ಯಲ್ಲಪ್ಪ ಬುಧವಾರ ಮಾಹಿತಿ ನೀಡಿದರು.   

ದಾವಣಗೆರೆ: ಎಪಿಎಂಸಿ, ಭೂಸುಧಾರಣೆ ಹಾಗೂ ಕಾರ್ಮಿಕ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ದಾವಣಗೆರೆ ಜಿಲ್ಲಾ ಕನ್ನಡಪರ ಸಂಘಟನೆಗಳ ಒಕ್ಕೂಟವು ಸೆಪ್ಟೆಂಬರ್‌ 25ರಂದು ಬೆಳಿಗ್ಗೆ 11.30ಕ್ಕೆ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ.

‘ಕೇಂದ್ರ ಹಾಗೂ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜನರ ಮೇಲೆ ಕಾಯ್ದೆಯನ್ನು ಹೇರುವುದನ್ನು ಖಂಡಿಸಿ ರೈತರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ಸೆ.25ರಂದು ದಾವಣಗೆರೆ ಜಿಲ್ಲೆಯ 19 ವಿವಿಧ ಕನ್ನಡಪರ ಸಂಘಟನೆಗಳು ವಿನೂತನವಾಗಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿವೆ. ಅಂದು ಅಂಬೇಡ್ಕರ್‌ ವೃತ್ತದಿಂದ ಮೆರವಣಿಗೆ ಹೊರಟು ಜಯದೇವ ವೃತ್ತದ ಮೂಲಕ ಉಪವಿಭಾಗಾಧಿಕಾರಿ ಕಚೇರಿಗೆ ತಲುಪಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು’ ಎಂದು ಜಿಲ್ಲಾ ಕನ್ನಡಪರ ಸಂಘಟನೆಗಳ ಒಕ್ಕೂಟದ ಗೌರವಾಧ್ಯಕ್ಷ ಕೆ.ಜಿ.ಯಲ್ಲಪ್ಪ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಈಚೆಗೆ ಒಕ್ಕೂಟದ ಸಾಮಾನ್ಯ ಸಭೆ ನಡೆಸಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ರೈತರಿಗೆ ಬೆಂಬಲ ನೀಡಿ ಒಕ್ಕೂಟದಿಂದ ಈ ವರ್ಷದ ಮೊದಲ ಹೋರಾಟ ನಡೆಸುತ್ತಿದ್ದೇವೆ. ಜಿಲ್ಲೆಯ ಎಲ್ಲಾ ಕನ್ನಡಪರ ಸಂಘಟನೆಗಳು ಒಟ್ಟಾಗಿ ಶಕ್ತಿ ಪ್ರದರ್ಶಿಸಿದರೆ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸಾಧ್ಯ ಎಂಬ ಕಾರಣಕ್ಕೆ ಒಕ್ಕೂಟ ರಚಿಸಿಕೊಂಡಿದ್ದೇವೆ’ ಎಂದು ಯಲ್ಲಪ್ಪ ತಿಳಿಸಿದರು.

ADVERTISEMENT

ಬಂದ್‌ಗೆ ಬೆಂಬಲವಿಲ್ಲ: ‘ಲಾಕ್‌ಡೌನ್‌ನಿಂದಾಗಿ ದೇಶದಾದ್ಯಂತ ದುಡಿಮೆ ಇಲ್ಲದೆ ಜನ ತತ್ತರಿಸಿ ಹೋಗಿದ್ದಾರೆ. ಹೀಗಿರುವಾಗ ಮತ್ತೆ ನಾವು ಬಂದ್‌ ಮಾಡಿದರೆ ಎರಡು ಹೊತ್ತಿನ ಊಟಕ್ಕೂ ಜನರಿಗೆ ತೊಂದರೆಯಾಗಲಿದೆ. ಹೀಗಾಗಿ ರೈತ ಸಂಘಟನೆಗಳು ಕರೆ ನೀಡಿರುವ ಬಂದ್‌ಗೆ ನಾವು ಬೆಂಬಲ ನೀಡುತ್ತಿಲ್ಲ. ರೈತರ ಹೋರಾಟಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಶುಕ್ರವಾರ ನಾವೂ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

ಜಿಲ್ಲಾ ಕನ್ನಡಪರ ಸಂಘಟನೆಗಳ ಒಕ್ಕೂಟದ ಕಾರ್ಯಾಧ್ಯಕ್ಷ ಅವಿನಾಶ ವಿ., ಅಧ್ಯಕ್ಷ ಎನ್‌.ಎಚ್‌. ಹಾಲೇಶ್‌, ಪ್ರಧಾನ ಕಾರ್ಯದರ್ಶಿ ಕೆ.ಎನ್‌. ವೆಂಕಟೇಶ್‌, ಮುಖಂಡರಾದ ಎಸ್‌. ರಾಜು, ಸಾಧಿಕ್‌ ಅವರೂ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.