
ನ್ಯಾಮತಿ ತಾಲ್ಲೂಕು ಸೂರಗೊಂಡನಕೊಪ್ಪದ ಭಾಯಾಗಡ್‌ನಲ್ಲಿ ಸಂತ ಸೇವಾಲಾಲ್ ಮತ್ತು ಮರಿಯಮ್ಮ ಜಯಂತ್ಯುತ್ಸವದ ಮೂರನೇ ದಿನ ಭಾನುವಾರ ಹೋಮಕುಂಡಕ್ಕೆ ಅಪಾರ ಭಕ್ತರ ಸಮ್ಮುಖದಲ್ಲಿ ಪೂರ್ಣಾಹುತಿ ಅರ್ಪಿಸಲಾಯಿತು
ಭಾಯಾಗಡ್ (ನ್ಯಾಮತಿ): ತಾಲ್ಲೂಕಿನ ಸೂರಗೊಂಡನಕೊಪ್ಪದ ಭಾಯಾಗಡ್‌ನಲ್ಲಿ ಸಂತ ಸೇವಾಲಾಲ್ ಅವರ 287ನೇ ಜಯಂತ್ಯುತ್ಸವಕ್ಕೆ ಭಾನುವಾರ ಹೋಮಕ್ಕೆ ಪೂರ್ಣಾಹುತಿ ಅರ್ಪಿಸುವುದರೊಂದಿಗೆ ತೆರೆ ಬಿದ್ದಿತು.
ಹೋಮಕುಂಡದ ಆವರಣಕ್ಕೆ ಆಲಂಕೃತ ಪಲ್ಲಕ್ಕಿಯಲ್ಲಿ ಮರಿಯಮ್ಮ ಮತ್ತು ಸೇವಾಲಾಲ್ ಉತ್ಸವ ಮೂರ್ತಿಗಳನ್ನು ಕರೆತರಲಾಯಿತು. ವಿವಿಧ ಬಣ್ಣದ ರಂಗೋಲಿ, ಹೂವಿನಿಂದ ಆಲಂಕರಿಸಿದ್ದ ಹೋಮಕುಂಡಕ್ಕೆ (ಭೋಗ್) ಒಂಬತ್ತು ವಿವಿಧ ಮರದ ಚಕ್ಕೆಗಳು, ತುಪ್ಪ ತುಂಬಿದ ಇರುಮುಡಿ ಕಾಯಿಗಳನ್ನು ಜೋಡಿಸಿ, ಕರ್ಪೂರದ ಮೂಲಕ ಕುಂಡವನ್ನು ಬೆಳಗಿಸಿ, ಗೋಧಿ ಪಾಯಸ ಮತ್ತು ತುಪ್ಪವನ್ನು ನೈವೇದ್ಯವಾಗಿ ಅರ್ಪಿಸಲಾಯಿತು.
ಸೇವಾಲಾಲ್ ದೇವಸ್ಥಾನದ ಆರ್ಚಕ ಸೇವ್ಯಾನಾಯ್ಕ, ಮರಿಯಮ್ಮ ದೇವಸ್ಥಾನದ ಆರ್ಚಕ ಮಂಜುನಾಥ ನಾಯ್ಕ ಮತ್ತು ವಿವಿಧ ಸಾಧು ಸಂತರು ಪೂಜಾ ವಿಧಿ ನೆರವೇರಿಸಿದರು. ಹೋಮಕುಂಡದ ಬಳಿ ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಅಧ್ಯಕ್ಷ ರುದ್ರಪ್ಪ ಲಮಾಣಿ, ಮಹಾಮಠ ನಿರ್ವಾಹಣಾ ಸಮಿತಿ ಅಧ್ಯಕ್ಷ ಎನ್. ಹನುಮಂತನಾಯ್ಕ, ತಾಂಡಾ ಅಭಿವೃದ್ದಿ ನಿಗಮದ ಅಧ್ಯಕ್ಷ ಎನ್. ಜಯದೇವ ನಾಯ್ಕ, ವ್ಯವಸ್ಥಾಪಕ ನಿರ್ದೇಶಕ ಎನ್.ರಾಜು, ಮಹಾಮಠ ಸಮಿತಿ ಪ್ರಧಾನ ಕಾರ್ಯದರ್ಶಿ ಎನ್. ಅರುಣಕುಮಾರ, ಹರಪನಹಳ್ಳಿ ಹೀರಾಲಾಲ್, ಶಿವರಾಂನಾಯ್ಕ, ಸುರೇಂದ್ರನಾಯ್ಕ, ಮಾರುತಿನಾಯ್ಕ, ಸಾಲಬಾಳು ಗೋಪಾಲನಾಯ್ಕ, ಭೋಜ್ಯನಾಯ್ಕ, ಪ್ರತಿಷ್ಠಾನದ ಯೋಜನಾ ನಿರ್ದೇಶಕ ಜೆ.ಹರೀಶ, ಮಹಾಮಠ ಸಮಿತಿ ವ್ಯವಸ್ಥಾಪಕ ಸೇವ್ಯಾನಾಯ್ಕ ಹಾಗೂ ಸಾವಿರಾರು ಭಕ್ತರು ಉಪಸ್ಥಿತರಿದ್ದರು.
ಮಹಾರಾಷ್ಟ್ರ, ತೆಲಂಗಾಣ, ರಾಜಸ್ಥಾನ, ಗೋವಾ ರಾಜ್ಯದಿಂದಲೂ ವಿವಿಧ ವಾಹನಗಳ ಮೂಲಕ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಶನಿವಾರ ರಾತ್ರಿ ಜಾಗರಣೆ, ಭಜನೆ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಭಕ್ತರು, ಭಾನುವಾರ ಭೋಗ್ ಕಾರ್ಯಕ್ರಮದ ನಂತರ ತಮ್ಮ ಊರುಗಳಿಗೆ ವಾಪಸಾಗುತ್ತಿರುವ ದೃಶ್ಯ ಕಂಡುಬಂತು.
ಮೂರನೇ ದಿನವೂ ಭಕ್ತರ ದಂಡು: ಉತ್ಸವದ ಮೂರನೇ ದಿನ ಶಿವರಾತ್ರಿ ಹಬ್ಬ ಬಂದಿರುವುದರಿಂದ ವಿವಿಧ ಭಾಗಗಳಿಂದ ಹೆಚ್ಚಿನ ಭಕ್ತರು ವಾಹನಗಳ ಮೂಲಕ ಭಾಯಾಗಡ್‌ಗೆ ಆಗಮಿಸಿ ಸೇವಾಲಾಲರ ದರ್ಶನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.