ADVERTISEMENT

ಕಾರ್ಗಿಲ್ ವಿಜಯ ದಿವಸ: ಯೋಧರ ಸಾಹಸಕ್ಕೆ ನಮನ

ಪ್ರೇರಣಾ ಸಂಸ್ಥೆ, ಭಾರತ ಸೇವಾದಳದಿಂದ ಸೈನಿಕರ ಸ್ಮರಣೆ, ಬುಲೆಟ್‌ ಬೈಕ್‌ ರ್‍ಯಾಲಿ l ಜಿಲ್ಲೆಯ ವಿವಿಧೆಡೆ ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2019, 10:10 IST
Last Updated 28 ಜುಲೈ 2019, 10:10 IST
ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ದಾವಣಗೆರೆಯಲ್ಲಿ ಪ್ರೇರಣಾ ಸಂಸ್ಥೆಯಿಂದ ಶುಕ್ರವಾರ ಬೈಕ್ ರ‍್ಯಾಲಿ ನಡೆಯಿತು (ಎಡಚಿತ್ರ) ಬಸವಾಪಟ್ಟಣದ ಬಾಪೂಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ಕಾರ್ಗಿಲ್‌ ವಿಜಯೋತ್ಸವದ 20ನೇ ವರ್ಷದ ಸಮಾರಂಭದಲ್ಲಿ ಶಾಲಾ ಮಕ್ಕಳು ರಾಷ್ಟ್ರಧ್ವಜ ಹಿಡಿದು ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.
ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ದಾವಣಗೆರೆಯಲ್ಲಿ ಪ್ರೇರಣಾ ಸಂಸ್ಥೆಯಿಂದ ಶುಕ್ರವಾರ ಬೈಕ್ ರ‍್ಯಾಲಿ ನಡೆಯಿತು (ಎಡಚಿತ್ರ) ಬಸವಾಪಟ್ಟಣದ ಬಾಪೂಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ಕಾರ್ಗಿಲ್‌ ವಿಜಯೋತ್ಸವದ 20ನೇ ವರ್ಷದ ಸಮಾರಂಭದಲ್ಲಿ ಶಾಲಾ ಮಕ್ಕಳು ರಾಷ್ಟ್ರಧ್ವಜ ಹಿಡಿದು ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.   

ದಾವಣಗೆರೆ: ಪ್ರೇರಣಾ ಯುವ ಸಂಸ್ಥೆಯಿಂದ 20ನೇ ವರ್ಷದ ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಶುಕ್ರವಾರ ಬುಲೆಟ್‌ ಬೈಕ್‌ ರ‍್ಯಾಲಿ ನಡೆಯಿತು.

ಅಭಿನವ ರೇಣುಕಾ ಮಂದಿರದಿಂದ ಆರಂಭವಾದ ಈ ರ‍್ಯಾಲಿಗೆ ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ಒ.ಬಿ. ಶಶಿಕಾಂತ್ ಚಾಲನೆ ನೀಡಿ ‘45 ದಿನಗಳ ಕಾಲ ನಡೆದ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದೆ. ಸೈನಿಕರು ತಮ್ಮ ಹಾಗೂ ಕುಟುಂಬದ ಹಿತಾಸಕ್ತಿಯನ್ನು ಬದಿಗೊತ್ತಿ ಹೋರಾಟ ಮಾಡಿದ್ದಾರೆ. ಸೈನಿಕರ ಬಲಿದಾನದಿಂದಾಗಿ ದೇಶ ಉಳಿಯುತ್ತದೆ. ದೇಶದ ಮೇಲೆ ಅಭಿಮಾನ ಇದ್ದರೆ ಯಾವುದಾದರೂ ದೇಶದ್ರೋಹಿ ಚಟುವಟಿಕೆಗಳು ಕಂಡು ಬಂದರೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಕೊಟ್ಟರೆ ಅದನ್ನು ತಡೆಯಬಹುದು’ ಎಂದರು.

ಮಾಜಿ ಸೈನಿಕರ ಸಂಘದ ಖಜಾಂಚಿ ದಾಸಪ್ಪ ಮಾತನಾಡಿ, ‘20 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತನಾಗಿದ್ದೇನೆ. ಅಂದಿನ ಸೈನಿಕರಿಗೆ ಅತ್ಯಾಧುನಿಕ ಉಪಕರಣಗಳು ಇರಲಿಲ್ಲ. ಇದರಿಂದ ತುಂಬಾ ಕಷ್ಟ ಇತ್ತು. ಆದರೆ ಈಗ ಬುಲೆಟ್‌ಪ್ರೂಫ್‌ ಜಾಕೆಟ್, ಲೈಟ್‌ವೇಟ್‌ ಗನ್‌ಗಳನ್ನು ಸರ್ಕಾರ ನೀಡಿದ್ದು, ಶತ್ರುಗಳನ್ನು ಎದುರಿಸಲು ಸೈನಿಕರಿಗೆ ಹೆಚ್ಚಿನ ಬಲ ಬಂದಂತಾಗಿದೆ. ಸುಧಾರಿತ ಉಪಕರಣಗಳ ವ್ಯವಸ್ಥೆ ಇರುವುದರಿಂದ ಶತ್ರುಗಳನ್ನು ಸುಲಭವಾಗಿ ಮಟ್ಟ ಹಾಕಬಹುದು’ ಎಂದರು.

ADVERTISEMENT

ಪ್ರೇರಣಾ ಯುವ ಸಂಸ್ಥೆಯ ಅಧ್ಯಕ್ಷ ಎಸ್‌.ಟಿ.ವೀರೇಶ್‌ ಮಾತನಾಡಿ, ‘ದೇಶಕ್ಕಾಗಿ ಸೇವೆ ಸಲ್ಲಿಸಿ ಹುತಾತ್ಮರಾದ ಸೈನಿಕರನ್ನು ಸ್ಮರಿಸುವುದಕ್ಕಾಗಿ ಈ ಬೃಹತ್ ಬೈಕ್‌ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

150ಕ್ಕೂ ಹೆಚ್ಚು ಬುಲೆಟ್‌ ಬೈಕ್‌ಗಳಲ್ಲಿ ಪ್ರೇರಣಾ ಯುವ ಸಂಸ್ಥೆಯ ಕಾರ್ಯಕರ್ತರು ರಾಷ್ಟ್ರಧ್ವಜ ಹಿಡಿದು ‘ಜೈ ಜವಾನ್, ಜೈ ಕಿಸಾನ್’ ಎಂಬ ಘೋಷಣೆ ಕೂಗುತ್ತ ಪಿ.ಬಿಯ ರಸ್ತೆಯ ಅರುಣ ಸರ್ಕಲ್, ವಿನೋಬಾನಗರ 2 ಮೇನ್‌, ಟ್ಯಾಂಕ್ ಪಾರ್ಕ್‌, ಗುಂಡಿ ಸರ್ಕಲ್‌, ಬಾಪೂಜಿ ಹೈಸ್ಕೂಲ್, ಆಂಜನೇಯ ಟೆಂಪಲ್, ಗಾಂಧಿ ಪ್ರತಿಮೆ, ವಿದ್ಯಾನಗರ, ಡಬ್ಬಲ್ ರಿಂಗ್ ರೋಡ್‌, ಜಯದೇವ ಸರ್ಕಲ್, ಲಾಯರ್ ರಸ್ತೆ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಪ್ರವಾಸಿ ಮಂದಿರ ರಸ್ತೆಯ ಮೂಲಕ ಸಾಗಿ ಹೈಸ್ಕೂಲ್ ಮೈದಾನದಲ್ಲಿ ಕೊನೆಗೊಂಡಿತು.

ಪ್ರೇರಣಾ ಯುವ ಸಂಸ್ಥೆಯ ಗೌತಮ್ ಜೈನ್, ಪಿ.ಸಿ.ಶ್ರೀನಿವಾಸ್, ಶಿವನಗೌಡ ಪಾಟೀಲ, ಶ್ರೀಧರ್ ಪಾಲ್ಗೊಂಡಿದ್ದರು.

ರಂಜಿತ್‌ಮಲ್ ಗಾಂಧಿ ಎಜುಕೇಶನಲ್ ಟ್ರಸ್ಟ್‌: ರಂಜಿತ್‌ಮಲ್ ಗಾಂಧಿ ಎಜುಕೇಶನಲ್ ಟ್ರಸ್ಟ್‌ನ ಆರ್‌.ಜಿ. ಪಿಯು ಮತ್ತು ಆರ್.ಜಿ. ಪದವಿ ಕಾಲೇಜಿನ ವಿದ್ಯಾರ್ಥಿಗಳು ಕಾರ್ಗಿಲ್ ವಿಜಯ ದಿವಸ ಆಚರಿಸಿದರು.

ವಿ ದ್ಯಾಸಂಸ್ಥೆಯ ಅಧ್ಯಕ್ಷೆ ಎಸ್‌.ಆರ್. ಗಾಂಧಿ ಚಾಲನೆ ನೀಡಿ‘ ಸೈನಿಕರು ಗಡಿಯಲ್ಲಿ ಭದ್ರತೆ ಒದಗಿಸುತ್ತಿದ್ದಾರೆ. ದೇಶದ ಒಳಗೆ ನಾವು ಶಿಸ್ತುಬದ್ಧ, ಪ್ರಾಮಾಣಿಕವಾಗಿ ಇರಬೇಕು. ಆಂತರಿಕವಾಗಿ ನಾವು ರಕ್ಷಿಸಿದರೆ, ದೇಶದ ಹೊರೆಗೆ ಸೈನಿಕರು ರಕ್ಷಿಸುತ್ತಿದ್ದಾರೆ. ವಿದ್ಯಾರ್ಥಿಗಳು ಯೋಧರು ಇದ್ದ ಹಾಗೆ ಶಿಸ್ತು ರೂಢಿಸಿಕೊಳ್ಳಬೇಕು’ ಎಂದರು.

‘ಆರ್.ಜಿ. ಕಾಲೇಜಿನಿಂದ ಶಾಮನೂರು ರಸ್ತೆಗಾಗಿ ಬಾಪೂಜಿ ಬ್ಯಾಂಕ್ ಸಮುದಾಯ ಭವನ, ಲಕ್ಷ್ಮಿ ಫ್ಲೋರ್‌ಮಿಲ್ ಮಾರ್ಗವಾಗಿ ಗುಂಡಿ ಮಹದೇವಪ್ಪ ವೃತ್ತದವರೆಗೆ ಮೌನ ಮೇರವಣಿಗೆ ನಡೆಯಿತು. ಗುಂಡಿ ಸರ್ಕಲ್ ಬಳಿ ಮೇಣದ ಬತ್ತಿ ಹಚ್ಚಿ ಹುತಾತ್ಮ ಸೈನಿಕರಿಗೆ ಸಂತಾಪ ಸೂಚಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಸಿ. ಸುನಿಲ್ ಕುಮಾರ್ ಮತ್ತು ಉಪ ಪ್ರಾಂಶುಪಾಲ ಎಂ.ಎಸ್‌. ವಿಜಯ್ ಹಾಗೂ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.