ADVERTISEMENT

ಸೈನಿಕರ ತ್ಯಾಗ, ಬಲಿದಾನ ನೆನೆವ ಕಾರ್ಯವಾಗಲಿ

ಕಾರ್ಗಿಲ್‌ ವಿಜಯ ದಿವಸ್‌–2019 ಕಾರ್ಯಕ್ರಮದಲ್ಲಿ ಆದರ್ಶ ಗೋಖಲೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2019, 9:54 IST
Last Updated 28 ಜುಲೈ 2019, 9:54 IST
ದಾವಣಗೆರೆಯ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ಪ್ರೇರಣಾ ಯುವ ಸಂಸ್ಥೆ ಆಯೋಜಿಸಿದ್ದ 20ನೇ ವರ್ಷದ ಕಾರ್ಗಿಲ್ ವಿಜಯ್ ದಿವಸ್ 2019 ಕಾರ್ಯಕ್ರಮದಲ್ಲಿ ಸಾಧನಾಶ್ರಮದ ಮಾತಾಯೋಗಾನಂದಮಯಿ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ನಿವೃತ್ತ ಯೋಧ ಎಂ. ಬಸಪ್ಪ, ಸಂಸ್ಥೆಯ ಎಸ್‌. ಟಿ. ವಿರೇಶ್, ವಾಗ್ಮಿ ಆದರ್ಶ ಗೋಖಲೆ, ಡಾ. ಶಾಂತಾ ಭಟ್ ಇದ್ದರು. –ಪ್ರಜಾವಾಣಿ ಚಿತ್ರ
ದಾವಣಗೆರೆಯ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ಪ್ರೇರಣಾ ಯುವ ಸಂಸ್ಥೆ ಆಯೋಜಿಸಿದ್ದ 20ನೇ ವರ್ಷದ ಕಾರ್ಗಿಲ್ ವಿಜಯ್ ದಿವಸ್ 2019 ಕಾರ್ಯಕ್ರಮದಲ್ಲಿ ಸಾಧನಾಶ್ರಮದ ಮಾತಾಯೋಗಾನಂದಮಯಿ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ನಿವೃತ್ತ ಯೋಧ ಎಂ. ಬಸಪ್ಪ, ಸಂಸ್ಥೆಯ ಎಸ್‌. ಟಿ. ವಿರೇಶ್, ವಾಗ್ಮಿ ಆದರ್ಶ ಗೋಖಲೆ, ಡಾ. ಶಾಂತಾ ಭಟ್ ಇದ್ದರು. –ಪ್ರಜಾವಾಣಿ ಚಿತ್ರ   

ದಾವಣಗೆರೆ: ‘ದೇಶಕ್ಕಾಗಿ ತಮ್ಮ ಜೀವನ ಮುಡುಪಿಟ್ಟ ಸೈನಿಕರ ತ್ಯಾಗ, ಬಲಿದಾನಗಳನ್ನು ನಮ್ಮ ಮಕ್ಕಳಿಗೆ ತಿಳಿಸುವ ಕಾರ್ಯವಾಗಬೇಕು’ ಎಂದು ವಾಗ್ಮಿ ಆದರ್ಶ ಗೋಖಲೆ ಹೇಳಿದರು.

ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಪ್ರೇರಣಾ ಯುವ ಸಂಸ್ಥೆ ಶನಿವಾರ ಹಮ್ಮಿಕೊಂಡಿದ್ದ ಕಾರ್ಗಿಲ್‌ ವಿಜಯ ದಿವಸ್‌–2019, ಹುತಾತ್ಮ ವೀರಯೋಧರಿಗೆ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸಿನಿಮಾ, ಮೊಬೈಲ್‌ ಎಬಿಸಿಡಿ ಹೇಳುವ ಇಂದಿನ ಮಕ್ಕಳಿಗೆ ಕ್ಷಾತ್ರ ತೇಜಸ್ಸಿನ ಭಾರತವನ್ನು ಕಟ್ಟಿದ ಹುತಾತ್ಮರನ್ನು ಎಬಿಸಿಡಿ ಮೂಲಕ ಮಕ್ಕಳಿಗೆ ಪರಿಚಯ ಮಾಡುವ ಕಾರ್ಯವನ್ನು ಪೋಷಕರು ಮಾಡಬೇಕು. ಎ ಎಂದರೆ ಅಬ್ಬಕ್ಕ, ಬಿ ಎಂದರೆ ಭಗತ್‌ಸಿಂಗ್‌, ಸಿ ಎಂದರೆ ಚಂದ್ರಶೇಖರ ಆಜಾದ್‌, ಡಿ ದಾದಾಭಾಯಿ ನವರೋಜಿ ಆಗಬೇಕು. ನಮ್ಮ ಮಕ್ಕಳಿಗೆ ಅವರ ಬಲಿದಾನ ತಿಳಿಸಬೇಕು’ ಎಂದು ಕರೆ ನೀಡಿದರು.

ADVERTISEMENT

ಮಕ್ಕಳಿಗೆ ಸಿನಿಮಾ, ಕ್ರೀಡಾ ತಾರೆಯರು ಹೀರೋಗಳಾಗಬಾರದು. ದೇಶಕ್ಕೆ ಪ್ರಾಣಾರ್ಪಣೆ ಮಾಡಿದ ಸೈನಿಕರು ನಮ್ಮ ಮಕ್ಕಳಿಗೆ ಹೀರೋಗಳಾಗಬೇಕು ಎಂದು ಕಿವಿಮಾತು ಹೇಳಿದರು.

‘ಭಾರತದ ಸೈನಿಕರ ಕಾರ್ಯವನ್ನು ಗುರುತಿಸುವ ಕಾರ್ಯಕ್ಕೆ ಪ್ರೇರಣೆ ನೀಡಿದ್ದು ಕಾರ್ಗಿಲ್‌ ಯುದ್ಧ. ಸೈನಿಕರು ವೃತ್ತಾಸುರನ ಸಂಹಾರಕ್ಕೆ ತನ್ನ ಬೆನ್ನುಮೂಳೆಯನ್ನು ನೀಡಿ ಲೋಕಕಲ್ಯಾಣ ಮಾಡಿದ ಧಧೀಚಿ ಪರಂಪರೆಯವರು. ನಾವು ಇಂದು ಮನೆಯಲ್ಲಿ ಕುಳಿತು ಧಾರಾವಾಹಿ ವೀಕ್ಷಿಸುತ್ತಾ ನಿರಾತಂಕವಾಗಿ ಬದುಕಿದ್ದೇವೆ ಎಂದರೆ ಅದಕ್ಕೆ ಸೈನಿಕರು ಕಾರಣ. ಶತ್ರು ರಾಷ್ಟ್ರಗಳು ನೀಡಿದ ಚಿತ್ರಹಿಂಸೆಯನ್ನು ಸಹಿಸಿಕೊಂಡು ದೇಶಕ್ಕಾಗಿ ಬಲಿದಾನ ಮಾಡಿದ ಅಸಂಖ್ಯ ಸೈನಿಕರನ್ನು ನೆನೆಯುವ ಕಾರ್ಯವಾಗಬೇಕು’ ಎಂದು ಹೇಳಿದರು.

‘ನಾವು ತಿನ್ನುವ ಒಂದೊಂದು ಅಗಳಿನಲ್ಲಿಯೂ ಸೌರಬ್‌ ಖಾಲಿಯಾ, ವಿಕ್ರಂ ಭಾತ್ರಾ, ಮನೋಜ್‌ಕುಮಾರ್ ಪಾಂಡೆಯಂತಹವರ ತ್ಯಾಗ, ಬಲಿದಾನ ಇದೆ. ಇದನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸಬೇಕು. ಒಂದು ದಿನ ಸಮಾರಂಭ ಮಾಡಿ ಭಾರತ್ ಮಾತಾಕಿ ಜೈ ಎಂದು ಮುಗಿಸುವುದಲ್ಲ. ಪ್ರತಿದಿನವೂ ಸೈನಿಕರ ತ್ಯಾಗವನ್ನು ನೆನಪಿಸಿಕೊಳ್ಳಬೇಕು’ ಎಂದರು.

ಬಹುತೇಕ ಸಂದರ್ಭಗಳಲ್ಲಿ ದೇಶಕ್ಕಾಗಿ ಮಡಿದ ಸೈನಿಕರ ಮಡದಿಯರು, ತಾಯಂದಿರ ತ್ಯಾಗ ವಿಜಯೋತ್ಸವದ ಸಂಭ್ರಮದಲ್ಲಿ ಕಾಣುವುದಿಲ್ಲ. ಅವರನ್ನು ನೆನಪು ಮಾಡಿಕೊಳ್ಳಬೇಕು. ಹಿಮಾಲಯದ ಪರ್ವತಗಳಲ್ಲಿ ದೇಶಕ್ಕಾಗಿ ಅನೇಕರ ರಕ್ತ ಹರಿದಿದೆ. ಅವರ ಬಗ್ಗೆ ಮಕ್ಕಳಿಗೆ ತಿಳಿಸಬೇಕು ಎಂದು ಸಲಹೆ ನೀಡಿದರು.

‘ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಲು ಅವಕಾಶ ಸಿಗಲಿಲ್ಲ ಎಂದು ನೊಂದು ನುಡಿಯುವ ಮಾಜಿ ಯೋಧರ ಅಪ್ರತಿಮ ರಾಷ್ಟ್ರಪ್ರೇಮವನ್ನು ನಾವು ಅರಿಯಬೇಕು. ಅವರ ಮಾತು ನಮಗೆ ಪ್ರೇರಣೆ ಆಗಬೇಕು. ಭಾರತವನ್ನು ಪ್ರಪಂಚದಲ್ಲಿ ಪ್ರಕಾಶಮಾನವಾಗಿ ಬೆಳಗುವಂತೆ ಮಾಡಲು ಇಂತಹ ಕಾರ್ಯಕ್ರಮಗಳು ಪ್ರೇರಣೆ ಆಗಬೇಕು. ದೇಶದ ಭವಿಷ್ಯ ಮಕ್ಕಳಲ್ಲಿದೆ’ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೇರಣಾ ಯುವ ಸಂಸ್ಥೆಯ ಅಧ್ಯಕ್ಷ ಎಸ್‌.ಟಿ. ವಿರೇಶ್‌, ‘20 ವರ್ಷದ ಹಿಂದೆ ಸಂಸ್ಥೆ ಆರಂಭವಾದಾಗ ಮೊದಲ ಕಾರ್ಯಕ್ರಮ ಕಾರ್ಗಿಲ್‌ ವಿಜಯೋತ್ಸವ ಇಲ್ಲೇ ಆಚರಿದ್ದೆವು. ಈಗ ಮತ್ತೆ ಅದೇ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಗಡಿ ಕಾಯುವ ಸೈನಿಕರನ್ನು ದಿನಕ್ಕೊಮ್ಮೆ ನೆನಪು ಮಾಡಿಕೊಳ್ಳಬೇಕು’ ಎಂದರು.

ಸಾಧನಾಶ್ರಮದ ಮಾತಾಯೋಗಾನಂದಮಯಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಮಾಜಿ ಸೈನಿಕರ ವಿವಿಧೋದ್ದೇಶ ಸಂಘದ ಅಧ್ಯಕ್ಷ ಸತ್ಯಪ್ರಕಾಶ್‌ ಎಂ.ಎನ್‌., ನಿವೃತ್ತ ಯೋಧ ಎಂ. ಬಸಪ್ಪ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.