ತ್ಯಾವಣಿಗೆ: ದಶಕಗಳ ಬೇಡಿಕೆಯಾಗಿದ್ದ ಗ್ರಾಮ ಠಾಣಾ ವಿಸ್ತರಣಾ ಕಾರ್ಯಕ್ಕೆ ಕೊನೆಗೂ ಕಾಲ ಕೂಡಿ ಬಂದಿದೆ. ಕಾರಿಗನೂರು ಗ್ರಾಮದಲ್ಲಿ ಗ್ರಾಮ ಠಾಣಾ ವಿಸ್ತರಣೆಗಾಗಿ ಇದೇ ಮೊದಲ ಬಾರಿಗೆ ಸರ್ವೆ ಕಾರ್ಯ ಕೈಗೊಳ್ಳಲಾಗಿದೆ.
ಗ್ರಾಮ ಠಾಣಾದಿಂದ ಹೊರಗಿರುವ ಸ್ವತ್ತುಗಳಿಗೆ ಇ–ಸ್ವತ್ತು ಅಥವಾ ಇ–ಆಸ್ತಿ ಸಿಗದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಮನೆ ಕಟ್ಟಿಕೊಳ್ಳಲು, ಖರೀದಿ ಅಥವಾ ಮಾರಾಟ ಮಾಡಲು ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಪಡೆಯುವುದು ತ್ರಾಸದಾಯಕವಾಗಿತ್ತು.
ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ರಾಜ್ಯದಲ್ಲಿ ಗ್ರಾಮ ಠಾಣಾ ವಿಸ್ತರಣೆ ಆಗಿರಲಿಲ್ಲ. ಮಹಾರಾಷ್ಟ್ರದಲ್ಲಿ 5 ವರ್ಷಕ್ಕೊಮ್ಮೆ ಗ್ರಾಮ ಠಾಣಾ ವಿಸ್ತರಣೆ ಮಾಡಲಾಗುತ್ತಿದೆ. ರಾಜ್ಯದಲ್ಲಿಯೂ ಗ್ರಾಮ ಠಾಣಾ ವಿಸ್ತರಣೆಯ ಒತ್ತಾಯ ಕೇಳಿಬಂದಿತ್ತು. ಗ್ರಾಮೀಣ ಪ್ರದೇಶದ ಜನರು ಇ– ಸ್ವತ್ತು ಪಡೆಯಲು ಅನುಭವಿಸುವ ಸಮಸ್ಯೆಯನ್ನು ಮನಗಂಡಿದ್ದ ರೈತ ಮುಖಂಡ ತೇಜಸ್ವಿ ಪಟೆಲ್ ಅವರು ಕಂದಾಯ ಸಚಿವ ಕೃಷ್ಣ ಬೈರೇಗೌಡ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಗ್ರಾಮ ಠಾಣಾ ವಿಸ್ತರಣೆಯ ಅಗತ್ಯತೆ ಬಗ್ಗೆ ಪತ್ರದ ಮೂಲಕ ಒತ್ತಾಯಿಸಿದ್ದರು.
ಇದರ ಫಲವಾಗಿ ಚನ್ನಗಿರಿ ತಾಲ್ಲೂಕು ಕಾರಿಗನೂರು ಗ್ರಾಮದಲ್ಲಿ ಸರ್ವೆ ಕಾರ್ಯ ಕೈಗೊಳ್ಳಲಾಗಿದೆ. ಇದರಿಂದ ಗ್ರಾಮಸ್ಥರಲ್ಲಿ ಹೊಸತೊಂದು ಆಶಾಭಾವ ಚಿಗುರೊಡೆದಿದೆ.
‘2013ರಲ್ಲಿ ಜಾರಿಗೆ ಬಂದ ಇ–ಸ್ವತ್ತು ಪದ್ಧತಿಯಲ್ಲಿ ಗ್ರಾಮ ಠಾಣಾದಿಂದ ಹೊರಗಿರುವ ಆಸ್ತಿಗಳ ವ್ಯವಹಾರಕ್ಕೆ ಕಾನೂನಿನಡಿ ಯಾವುದೇ ಮಾನ್ಯತೆ ಇಲ್ಲ. ಇದರಿಂದ ಗ್ರಾಮೀಣ ಪ್ರದೇಶದ ಜನರಿಗೆ ತುಂಬಾ ತೊಂದರೆಯಾಗುತ್ತಿತ್ತು. ಈಗ ಗ್ರಾಮ ಠಾಣಾ ವಿಸ್ತರಣೆಗೆ ಚಾಲನೆ ಸಿಕ್ಕಿದೆ. ರಾಜ್ಯದಲ್ಲಿ ಕಾರಿಗನೂರು ಗ್ರಾಮದಿಂದಲೇ ಈ ಕಾರ್ಯ ಶುರುವಾಗಿದೆ’ ಎಂದು ತೇಜಸ್ವಿ ಪಟೇಲ್ ತಿಳಿಸಿದರು.
‘ಜಿಲ್ಲಾಧಿಕಾರಿ ಸೂಚನೆಯಂತೆ ತಹಶೀಲ್ದಾರ್, ಎಡಿಎಲ್ಆರ್ ಆಸಕ್ತಿ ತೋರಿದ್ದರಿಂದ ಗ್ರಾಮ ಠಾಣಾ ವಿಸ್ತರಣೆಗೆ ಚಾಲನೆ ದೊರೆತಿದೆ. ಗ್ರಾಮ ಠಾಣಾ ವಿಸ್ತರಣೆ ಮಾಡದಿದ್ದರೆ ಹೋರಾಟದ ಹಾದಿ ಹಿಡಿಯುವುದಾಗಿ ಈ ಹಿಂದೆ ಗ್ರಾಮ ಸಭೆಯಲ್ಲಿ ಎಚ್ಚರಿಕೆ ನೀಡಲಾಗಿತ್ತು’ ಎಂದು ಸ್ಮರಿಸಿದರು.
ಸರ್ವೆಯರ್ ಸಿದ್ದಲಿಂಗಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೋಪಾಲಕೃಷ್ಣ, ಕಂದಾಯಾಧಿಕಾರಿ ಬಸಣ್ಣ, ಲೆಕ್ಕಾಧಿಕಾರಿ ಬಸವರಾಜ್, ಗ್ರಾಮ ಪಂಚಾಯಿತಿ ಸದಸ್ಯರಾದ ಸಂದೀಪ್, ಕಿರಣ್, ಪ್ರವೀಣ್ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.