ADVERTISEMENT

ಚನ್ನಗಿರಿ| ಬಿಜೆಪಿ ರೋಡ್ ಶೋ ಮೊಟಕು, ವಾಗ್ವಾದ

ಚನ್ನಗಿರಿ: ಟಿಕೆಟ್‌ ಆಕಾಂಕ್ಷಿಗಳ ಬೆಂಬಲಿಗರ ನಡುವೆ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 19:11 IST
Last Updated 19 ಮಾರ್ಚ್ 2023, 19:11 IST
ಚನ್ನಗಿರಿ ಪಟ್ಟಣದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ಭಾನುವಾರ ನಡೆದ ರೋಡ್ ಶೋ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಸಂಸದ ಜಿ.ಎಂ. ಸಿದ್ದೇಶ್ವರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಬಿಜೆಪಿ ಟಿಕೆಟ್ ಆಕಾಂಕ್ಷಿ ಮಾಡಾಳ್ ಮಲ್ಲಿಕಾರ್ಜುನ್ ಇದ್ದರು.
ಚನ್ನಗಿರಿ ಪಟ್ಟಣದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ಭಾನುವಾರ ನಡೆದ ರೋಡ್ ಶೋ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಸಂಸದ ಜಿ.ಎಂ. ಸಿದ್ದೇಶ್ವರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಬಿಜೆಪಿ ಟಿಕೆಟ್ ಆಕಾಂಕ್ಷಿ ಮಾಡಾಳ್ ಮಲ್ಲಿಕಾರ್ಜುನ್ ಇದ್ದರು.   

ಚನ್ನಗಿರಿ (ದಾವಣಗೆರೆ): ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಅಂಗವಾಗಿ ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ಪಕ್ಷದ ಮುಖಂಡರ ರೋಡ್ ಶೋ, ಬಣ ರಾಜಕೀಯದವರ ವಾಗ್ದಾದ, ಗಲಾಟೆಯಿಂದಾಗಿ ಅರ್ಧಕ್ಕೆ ಮೊಟಕುಗೊಂಡಿತು.

ಕ್ಷೇತ್ರದ ಬಿಜೆಪಿ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ ಮತ್ತು ಆಕಾಂಕ್ಷಿ ಶಿವಕುಮಾರ್ ಬೆಂಬಲಿಗರ ನಡುವಿನ ವಾಗ್ವಾದಕ್ಕೆ ಕಾರ್ಯಕ್ರಮ ನೆಪವಾಯಿತು.

ಲೋಕಾಯುಕ್ತ ದಾಳಿ ಪ್ರಕರಣದ ಬಳಿಕ ತುಮ್ಕೋಸ್ ಮಾಜಿ ಅಧ್ಯಕ್ಷ ಎಚ್.ಎಸ್.ಶಿವಕುಮಾರ್ ಅವರ ಹೆಸರು ಮುನ್ನೆಲೆಗೆ ಬಂದಿದೆ. ಶಿವಕುಮಾರ್‌ ಬೆಂಬಲಿಗರು ರೋಡ್‌ ಶೋ ವಾಹನದಲ್ಲಿ ನಿಲ್ಲಲು ಅವಕಾಶ ಕೋರಿದ್ದು ವಾಗ್ವಾದಕ್ಕೆ ನಾಂದಿಯಾಯಿತು.

ADVERTISEMENT

ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಸಂಸದ ಜಿ.ಎಂ. ಸಿದ್ದೇಶ್ವರ ಹಾಗೂ ಶಾಸಕ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ಮಾಡಾಳ್ ಮಲ್ಲಿಕಾರ್ಜುನ ರೋಡ್ ಶೋ ವಾಹನ ಹತ್ತಿ ನಿಂತಿದ್ದ ಸಂದರ್ಭ ಬಸ್ ನಿಲ್ದಾಣದ ಬಳಿ ಎಚ್.ಎಸ್. ಶಿವಕುಮಾರ್ ಅವರ ನೇತೃತ್ವದಲ್ಲಿ ಬೆಂಬಲಿಗರ ದಂಡು ‘ನಮ್ಮನ್ನೂ ಹತ್ತಿಸಿಕೊಳ್ಳಬೇಕು’ ಎಂದು ಪಟ್ಟು ಹಿಡಿದರು.

ಸಂಸದರ ವಾಹನ ತಡೆದು ಘೋಷಣೆ: ಆಗ ಬಿಜೆಪಿ ನಾಯಕರು ಬಸ್ ನಿಲ್ದಾಣದ ಬಳಿಯೇ ರೋಡ್ ಶೋ ಮೊಟಕುಗೊಳಿಸಿ ವಾಹನದಿಂದ ಇಳಿದು ತಮ್ಮ ವಾಹನಗಳಲ್ಲಿ ಹೋಗಲು ಸಿದ್ಧವಾದಾಗ ಸಂಸದರ ಕಾರು ತಡೆದ ಶಿವಕುಮಾರ್ ಬೆಂಬಲಿಗರು ಪರ ಘೋಷಣೆ ಕೂಗಿದರು.

ಬಳಿಕ ಪೊಲೀಸರು ಮಧ್ಯ ಪ್ರವೇಶಿಸಿ ಸಂಸದರ ವಾಹನ ಮುಂದಕ್ಕೆ ಹೋಗಲು ಅನುವು ಮಾಡಿಕೊಟ್ಟರು. ಈ ವೇಳೆ ಕೆಲವರು ಕಾರಿನ ಹಿಂಭಾಗದ ಗಾಜು ಒಡೆದರು. ರೋಡ್ ಶೋ ಸ್ಥಗಿತವಾದರೂ ಕೆಲ ದೂರ ಎರಡು ಬಣದವರು ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿದರು.

ಮೆರವಣಿಗೆಗಾಗಿ 10,000ಕ್ಕೂ ಅಧಿಕ ಕಾರ್ಯಕರ್ತರು ಬಂದಿದ್ದು, ಮಾಡಾಳ್ ಮಲ್ಲಿಕಾರ್ಜುನ್ ಬೆಂಬಲಿ ಗರು ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಎಚ್.ಎಸ್.ಶಿವಕುಮಾರ್ ಅವರು ಮುಖಂಡರಿಗೆ ಶುಭಾಶಯ ಕೋರಿ ಅಳವಡಿಸಿದ್ದ ಫ್ಲೆಕ್ಸ್ ಅನ್ನು ಇದೇ ವೇಳೆ ಕೆಲವರು ಹರಿದು ಹಾಕಿದ್ದರಿಂದ ಪಟ್ಟಣದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.