ADVERTISEMENT

ರಾಜ್ಯ ಬ್ಯಾಡ್ಮಿಂಟನ್‌: ಆಡ್ರಿಯನ್‌, ನಿಧಿ ‍ಪ್ರಶಸ್ತಿಗೆ ‘ಡಬಲ್‌’ ಸಾಧನೆ

15, 17 ವರ್ಷದೊಳಗಿನವರ ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ಗೆ ತೆರೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 23:56 IST
Last Updated 18 ಅಕ್ಟೋಬರ್ 2025, 23:56 IST
ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದವರು ಟ್ರೋಫಿಯೊಂದಿಗೆ ಸಂಭ್ರಮಿಸಿದರು –ಪ್ರಜಾವಾಣಿ ಚಿತ್ರ 
ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದವರು ಟ್ರೋಫಿಯೊಂದಿಗೆ ಸಂಭ್ರಮಿಸಿದರು –ಪ್ರಜಾವಾಣಿ ಚಿತ್ರ    

ದಾವಣಗೆರೆ: ದಿಟ್ಟ ಆಟ ಆಡಿದ ಬೆಂಗಳೂರಿನ ಆಡ್ರಿಯನ್‌ ಎಡ್ವರ್ಡ್‌ ಮತ್ತು ನಿಧಿ ಆತ್ಮಾರಾಮ್‌ ಅವರು ಶನಿವಾರ ಇಲ್ಲಿ ಮುಕ್ತಾಯಗೊಂಡ 15 ಮತ್ತು 17 ವರ್ಷದೊಳಗಿನವರ ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ‘ಡಬಲ್‌’ ಸಾಧನೆ ಮಾಡಿದರು.

ರಾಜ್ಯ ಬ್ಯಾಡ್ಮಿಂಟನ್‌ ಸಂಸ್ಥೆ (ಕೆಬಿಎ) ಹಾಗೂ ದಾವಣಗೆರೆ ಜಿಲ್ಲಾ ಬ್ಯಾಡ್ಮಿಂಟನ್‌ ಸಂಸ್ಥೆಯ (ಡಿಡಿಬಿಎ) ಆಶ್ರಯದಲ್ಲಿ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 17 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್‌ ಹಾಗೂ ಡಬಲ್ಸ್‌ನಲ್ಲಿ ನಿಧಿ ಟ್ರೋಫಿ ಎತ್ತಿಹಿಡಿದರು. 15 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ ಮತ್ತು ಮಿಶ್ರ ಡಬಲ್ಸ್‌ನಲ್ಲಿ ಆಡ್ರಿಯನ್‌ ಪ್ರಶಸ್ತಿ ಜಯಿಸಿದರು. 

ಸಿಂಗಲ್ಸ್‌ ಫೈನಲ್‌ನಲ್ಲಿ ನಿಧಿಗೆ ಅಗ್ರ ಶ್ರೇಯಾಂಕಿತೆ ಹಿತೈಶ್ರೀ ಎಲ್‌.ರಾಜಯ್ಯ ಸವಾಲು ಎದುರಾಗಿತ್ತು. ಮೊದಲ ಗೇಮ್‌ನಲ್ಲಿ 17–21ರಿಂದ ನಿರಾಸೆ ಕಂಡ ನಿಧಿ, ನಂತರದ ಎರಡು ಗೇಮ್‌ಗಳಲ್ಲಿ ಪುಟಿದೆದ್ದರು. 21-17 ಮತ್ತು 21-16ರಿಂದ ಎದುರಾಳಿಯನ್ನು ಹಣಿದರು.

ADVERTISEMENT

ಡಬಲ್ಸ್‌ ವಿಭಾಗದ ಪ್ರಶಸ್ತಿ ಸುತ್ತಿನ ಪೈಪೋಟಿಯಲ್ಲಿ ನಿಧಿ ಹಾಗೂ ಸೆಲ್ವಸಮೃದ್ಧಿ ಸೆಲ್ವಪ್ರಭು ಜೊತೆಗೂಡಿ ಆಡಿದರು. ಈ ಜೋಡಿ 18-21, 21-17, 21-15 ರಿಂದ ದಿಶಾ ರವಿ ಭಟ್‌ ಮತ್ತು ತನ್ವಿ ಮುನೋತ್‌ ಅವರನ್ನು ಪರಾಭವಗೊಳಿಸಿತು.

ಮಿಶ್ರ ಡಬಲ್ಸ್‌ ಫೈನಲ್‌ನಲ್ಲಿ ಚಿರಾಗ್‌ ಪ್ರಕಾಶ್‌ ಮತ್ತು ತನ್ವಿ ಮುನೋತ್‌ 23-25, 21-11, 21-16 ರಿಂದ ಎರಡನೇ ಶ್ರೇಯಾಂಕದ ಆರ್‌.ಗೌರವ್‌ ಮತ್ತು ಸುಮೇಧಾ ಶ್ರೀನಿವಾಸ್‌ಗೆ ಆಘಾತ ನೀಡಿ ಟ್ರೋಫಿ ತಮ್ಮದಾಗಿಸಿಕೊಂಡರು.

ಯಶಸ್‌ಗೆ ಆಘಾತ ನೀಡಿದ ಆರವ್‌: 

17 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ ವಿಭಾಗದ ಪ್ರಶಸ್ತಿಯು ಆರವ್‌ ಬಾಸಕ್‌ ಪಾಲಾಯಿತು. ಬೆಂಗಳೂರಿನ ಆರವ್‌ 17-21, 21-13, 21-17ರಿಂದ 5ನೇ ಶ್ರೇಯಾಂಕಿತ ಆಟಗಾರ, ಚಿಕ್ಕಮಗಳೂರಿನ ಯಶಸ್‌ ಎಂ.ರೆಡ್ಡಿ ಅವರನ್ನು ಸೋಲಿಸಿದರು.  

ಡಬಲ್ಸ್‌ ವಿಭಾಗದ ಅಂತಿಮ ಘಟ್ಟದ ಹಣಾಹಣಿಯಲ್ಲಿ ಮೆಹುಲ್‌ ಮಾನವ್‌ ಮತ್ತು ಸಾತ್ವಿಕ್‌ ಎಸ್‌.ಪ್ರಭು 21-19, 21-12 ರಿಂದ ಆರ್‌.ಗೌರವ್ ಮತ್ತು ಹಾರ್ದಿಕ್‌ ಮೊಹಂತಿ ವಿರುದ್ಧ ಗೆದ್ದರು. 

ಆಡ್ರಿಯನ್‌ ಸಾಧನೆ: 15 ವರ್ಷದೊಳಗಿನವರ ಸಿಂಗಲ್ಸ್‌ ಫೈನಲ್‌ನಲ್ಲಿ ಮೂರನೇ ಶ್ರೇಯಾಂಕದ ಆಡ್ರಿಯನ್‌ 21-16, 21-14 ರಿಂದ ಈಶ್ವರ್‌ ಸಾಯಿ ಅವರನ್ನು ಪರಾಭವಗೊಳಿಸಿದರು.

ಮಿಶ್ರ ಡಬಲ್ಸ್‌ನ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಆಡ್ರಿಯನ್‌ ಮತ್ತು ಸುಪ್ರಿತಾ ದೀಪಕ್‌ 21-17, 21-13ರಿಂದ ಲಕ್ಷ್‌ ರಾಘು ಮತ್ತು ಅವನಿ ಕುಲಕರ್ಣಿ ವಿರುದ್ಧ ವಿಜಯಿಯಾದರು. 

ಬಾಲಕರ ಡಬಲ್ಸ್‌ ಫೈನಲ್‌ನಲ್ಲಿ ಆರ್ಯನ್‌ ರಾಘವನ್‌ ಮತ್ತು ಚಿರಂತ್‌ ರಾಜ್‌ ಬಿ.ಆರ್‌ 21-12, 26-24 ರಿಂದ ಗೌತಮ್‌ ಎಸ್‌.ನಾಯರ್‌ ಮತ್ತು ಸಿದ್ದಾರ್ಥ್‌ ಎಸ್‌.ನಾಯರ್‌ ಅವರನ್ನು ಸೋಲಿಸಿದರು. 

ಮಹಿತಾ ಚಾಂಪಿಯನ್‌

15 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್‌ ವಿಭಾಗದಲ್ಲಿ ಬೆಂಗಳೂರು ಗ್ರಾಮಾಂತರದ ಮಹಿತಾ ನಾಯ್ಡು ಸೂರಿಶೆಟ್ಟಿ ಚಾಂಪಿಯನ್‌ ಆದರು.  ಫೈನಲ್‌ನಲ್ಲಿ ಮಹಿತಾ 22-20 21-17 ರಿಂದ ಬೆಂಗಳೂರಿನ ಅದಿತಿ ಸುಶಾಂತ್‌ ಅವರನ್ನು ಪರಾಭವಗೊಳಿಸಿದರು. ಬಾಲಕಿಯರ ಡಬಲ್ಸ್‌ ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಎರಡನೇ ಶ್ರೇಯಾಂಕದ ಕೀರ್ತಿ ಬಾಲಾಜಿ ಮತ್ತು ಶ್ರಿಯಾ ಜೋಶಿ 21-13 21-14 ರಿಂದ ಬೆಂಗಳೂರಿನ ಕಂಡಿಬಿಲ್ಲಾ ಶ್ರೇಯಾ ಮತ್ತು ಶ್ರೀನಾಗಲಕ್ಷ್ಮಿ ಅವರನ್ನು ಮಣಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.