ADVERTISEMENT

Karnataka Budget 2025: ದಾವಣಗೆರೆ ಜಿಲ್ಲೆಗಿಲ್ಲ ಮಹತ್ವದ ಯೋಜನೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2025, 8:32 IST
Last Updated 8 ಮಾರ್ಚ್ 2025, 8:32 IST
   

ದಾವಣಗೆರೆ: ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಈ ಬಾರಿಯೂ ಜಿಲ್ಲೆಗೆ ಯಾವುದೇ ಮಹತ್ವದ ಯೋಜನೆಗಳ ಘೋಷಣೆಯಾಗಿಲ್ಲ. ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾಗಿದ್ದ ಜವಳಿ ಪಾರ್ಕ್‌, ಐಟಿ ಪಾರ್ಕ್‌, ವಿಮಾನ ನಿಲ್ದಾಣ, ಮೆಕ್ಕೆಜೋಳ ಸಂಸ್ಕರಣಾ ಘಟಕ, ಭದ್ರಾ ನಾಲೆಗಳ ಆಧುನೀಕರಣ ಕಾಮಗಾರಿಗೆ ಅನುದಾನ ಸೇರಿದಂತೆ ಯಾವುದೇ ಬೇಡಿಕೆಗೆ ಮನ್ನಣೆ ಸಿಕ್ಕಿಲ್ಲ.

ಜಗಳೂರು ಕೆರೆ ತುಂಬಿಸುವ ಯೋಜನೆ, ವೃತ್ತಿ ರಂಗಭೂಮಿ ರಂಗಾಯಣದ ಅಭಿವೃದ್ಧಿಗೆ ಅನುದಾನ ಹೊರತುಪಡಿಸಿದರೆ ಮಹತ್ವದ ಯೋಜನೆಗಳು ಘೋಷಣೆಯಾಗದಿರುವುದಕ್ಕೆ ಜಿಲ್ಲೆಯ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಜಿಲ್ಲೆಗೆ ಸಿಕ್ಕಿದ್ದೇನು:

ADVERTISEMENT

*ಚಿಗಟೇರಿ ಜಿಲ್ಲಾ ಆಸ್ಪತ್ರೆ ಸೇರಿದಂತೆ ಇತರೆ ಜಿಲ್ಲೆಗಳ ಒಟ್ಟು 8 ತಾಲ್ಲೂಕು ಆಸ್ಪತ್ರೆಗಳನ್ನು ₹ 650 ಕೋಟಿ ವೆಚ್ಚದಲ್ಲಿ ನವೀಕರಣ.

*ಹರಿಹರ ತಾಲ್ಲೂಕಿನ ಕೊಂಡಜ್ಜಿಯ ವೃತ್ತಿ ರಂಗಭೂಮಿ ರಂಗಾಯಣದಲ್ಲಿ ₹ 3 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ, ವೃತ್ತಿ ರಂಗಾಯಣ ಸಮುಚ್ಛಯ ಹಾಗೂ ಥಿಯೇಟರ್‌ ಮ್ಯೂಸಿಯಂ ನಿರ್ಮಾಣ.

* ರಾಜ್ಯದಲ್ಲಿ ಪ್ರಸ್ತುತ ಐದು ಬಾಂಬ್‌ ಪತ್ತೆ ಮತ್ತು ನಿಷ್ಕ್ರಿಯ ದಳಗಳು ಕಾರ್ಯನಿರ್ವಹಿಸುತ್ತಿದ್ದು, ಈ ವರ್ಷದಿಂದ ದಾವಣಗೆರೆಯಲ್ಲೂ ಬಾಂಬ್‌ ಪತ್ತೆ ಮತ್ತು ನಿಷ್ಕ್ರಿಯ ದಳಗಳನ್ನು ಸ್ಥಾಪಿಸಲಾಗುವುದು.

* ಬಂಜಾರ ಸಮುದಾಯದ ಪ್ರಮುಖ ಧಾರ್ಮಿಕ ಕೇಂದ್ರವಾದ ಜಿಲ್ಲೆಯ ಸಂತ ಸೇವಾಲಾಲ್ ಪುಣ್ಯಕ್ಷೇತ್ರದ ಸೂರಗೊಂಡನಕೊಪ್ಪದಲ್ಲಿ ಒಂದು ವಸತಿ ಶಾಲೆಯನ್ನು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್)ದ ವತಿಯಿಂದ ಆರಂಭಿಸಲಾಗುವುದು.

* ಜಗಳೂರು ಕೆರೆ ತುಂಬಿಸುವ ಯೋಜನೆ

* ಹೊನ್ನಾಳಿ ತಾಲ್ಲೂಕಿನ ಬೆನಕನಹಳ್ಳಿ, ನ್ಯಾಮತಿ ತಾಲ್ಲೂಕಿನ ಗೋವಿನಕೋವಿಯಲ್ಲಿ ಕೆರೆ ತುಂಬಿಸುವ ಯೋಜನೆ

*ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಲು ಕಟ್ಟಡ ಮತ್ತು ಇತರೆ
ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ರಾಜ್ಯದ 31 ಜಿಲ್ಲೆಗಳಲ್ಲಿ 6ನೇ ತರಗತಿಯಿಂದ 12 ತರಗತಿವರೆಗಿನ ವಸತಿ ಶಾಲೆಗಳ ನಿರ್ಮಾಣ.

* ರಾಜ್ಯದಲ್ಲಿ ವಾಹನ ಸಂಚಾರ ಮೇಲ್ವಿಚಾರಣೆ ಮಾಡಲು ಮತ್ತು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಹಚ್ಚಿ ನಿಯಂತ್ರಿಸಲು ದಾವಣಗೆರೆ ಸೇರಿದಂತೆ ಇತರೆ 9 ಜಿಲ್ಲೆಗಳ ಒಟ್ಟು 60 ಸ್ಥಳಗಳಲ್ಲಿ ₹ 50 ಕೋಟಿ ವೆಚ್ಚದಲ್ಲಿ ವಿದ್ಯುನ್ಮಾನ ಕ್ಯಾಮೆರಾ ಅಳವಡಿಕೆ.

* ಜಿಲ್ಲಾ ಕೇಂದ್ರ ದಾವಣಗೆರೆ ಸೇರಿದಂತೆ ಇತರೆ ಜಿಲ್ಲೆಗಳಲ್ಲಿರುವ ಹಿಂದುಳಿದ ವರ್ಗಗಳ ಮೆಟ್ರಿಕ್‌ ನಂತರದ ವಿದ್ಯಾರ್ಥಿನಿಲಯಗಳಲ್ಲಿ ನಿಲಯಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮತ್ತು ವೃತ್ತಿ ಮಾರ್ಗದರ್ಶನಕ್ಕೆ ತರಬೇತಿ.

ಇವು ಹೊರತುಪಡಿಸಿ ಜಿಲ್ಲೆಗೆ ಯಾವುದೇ ಪ್ರಮುಖ ಯೋಜನೆಗಳ ಪ್ರಸ್ತಾವವೇ ಆಗಿಲ್ಲ. ಬಜೆಟ್‌ನಲ್ಲಿ ಯಾವುದಾದರೂ ಘೋಷಣೆ ಮಾಡಬೇಕು ಎಂಬ ಕಾಟಾಚಾರಕ್ಕೆ ಜಿಲ್ಲೆಯನ್ನು ಪ್ರಸ್ತಾಪಿಸಲಾಗಿದೆ ಎಂದು ರೈತ ಮುಖಂಡರು, ಹೋರಾಟಗಾರರು ಬೇಸರ ವ್ಯಕ್ತಪಡಿಸಿದ್ದಾರೆ.

ಬಜೆಟ್: ಇವರು ಹೀಗಂತಾರೆ

ಸಮೃದ್ಧಿಯ ಪ್ರತೀಕ

ನಾವು ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದು, ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ಬಜೆಟ್ ಸಮೃದ್ಧಿಯ ಪ್ರತೀಕವಾಗಿದೆ. ಬಿಜೆಪಿಯವರ ಬಜೆಟ್ ರೀತಿ ನಮ್ಮದು ಇಲ್ಲ. ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಏನೂ ಕೊಡುಗೆ ನೀಡಿಲ್ಲ.

– ಶಾಮನೂರು ಶಿವಶಂಕರಪ್ಪ, ಶಾಸಕ

ಅಭಿವೃದ್ಧಿಗೆ ಪೂರಕ

ಬಜೆಟ್‌ ಅಭಿವೃದ್ಧಿಗೆ ಪೂರಕವಾಗಿದೆ. ಜಿಲ್ಲಾ ಆಸ್ಪತ್ರೆ ನವೀಕರಣ, ಸೂರಗೊಂಡನಕೊಪ್ಪದಲ್ಲಿ ವಸತಿ ಶಾಲೆ ಆರಂಭಿಸುತ್ತಿರುವುದು ಉತ್ತಮ ನಿರ್ಧಾರ. ತುಮಕೂರು-ದಾವಣಗೆರೆ ಸೇರಿದಂತೆ 9 ವಿವಿಧ ರೈಲ್ವೆ ಯೋಜನೆಗಳಿಗೆ ಮಂಜೂರಾತಿ ನೀಡುವ ಮೂಲಕ ರಾಜ್ಯ ಮತ್ತು ಜಿಲ್ಲೆಯನ್ನು ಸಮೃದ್ಧಿಯತ್ತ ತೆಗೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು.

ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ವಸತಿ ಶಾಲೆಗಳನ್ನು ನಿರ್ಮಿಸುವುದಾಗಿ ಹೇಳಿರುವುದು ಸ್ವಾಗತಾರ್ಹ.

–ಎಸ್.ಎಸ್‌. ಮಲ್ಲಿಕಾರ್ಜುನ್‌, ಜಿಲ್ಲಾ ಉಸ್ತುವಾರಿ ಸಚಿವ

ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ.

ದಾವಣಗೆರೆ ಜಿಲ್ಲಾ ಆಸ್ಪತ್ರೆ ನವೀಕರಣ, ವೃತ್ತಿರಂಗಭೂಮಿ ರಂಗಾಯಣಕ್ಕೆ ₹ 3 ಕೋಟಿ ಅನುದಾನ, ಕೆರೆ ತುಂಬಿಸುವ ಯೋಜನೆಗಳಿಗೆ ಅನುದಾನ ನೀಡಿರುವುದು ಉತ್ತಮ ನಿರ್ಧಾರ. ಹಲವು ಮಹತ್ವದ ಘೋಷಣೆಯಾಗಿದ್ದು, ರಾಜ್ಯದ ಅಭಿವೃದ್ಧಿಗೆ ಸಹಕಾರಿಯಾಗಿದೆ.

ಡಾ. ಪ್ರಭಾ ಮಲ್ಲಿಕಾರ್ಜುನ್‌, ಸಂಸದೆ

ಮತ ಹಾಕಿದವರಿಗೆ ಅನ್ಯಾಯ

ಮುಖ್ಯಮಂತ್ರಿ ಸಿದ್ದರಾಮಯ್ಯ ತುಷ್ಟೀಕರಣದ ಬಜೆಟ್ ಮಂಡಿಸಿದ್ದಾರೆ. ಅತಿ ಹೆಚ್ಚು ಸಾಲ ಮಾಡಿದ ಕೀರ್ತಿ ‘ಸಾಲರಾಮಯ್ಯ’ ಅವರಿಗೆ ಸಲ್ಲುತ್ತದೆ. ಈ ಮೂಲಕ ಇಡೀ ರಾಜ್ಯವನ್ನು ಅಧೋಗತಿಗೆ ತಳ್ಳಿದ ಬಜೆಟ್ ಇದು. ಜಿಲ್ಲೆಗೆ ಯಾವುದೇ ವಿಶೇಷ ಅನುದಾನ ನೀಡದೆ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಮತ ನೀಡಿದವರಿಗೆ ಅನ್ಯಾಯ ಮಾಡಿದ ಬಜೆಟ್‌.

–ರಾಜಶೇಖರ ನಾಗಪ್ಪ, ಅಧ್ಯಕ್ಷ,ಬಿಜೆಪಿ ಜಿಲ್ಲಾ ಘಟಕ

ಜನರಿಗೆ ಆರ್ಥಿಕ ಹೊರೆ

ಬಜೆಟ್‌ನಲ್ಲಿ ಆರ್ಥಿಕ ಸುಧಾರಣೆ, ಆರ್ಥಿಕ ಸಬಲೀಕರಣದತ್ತ ರಾಜ್ಯವನ್ನು ತೆಗೆದುಕೊಂಡು ಹೋಗುವ ಯಾವುದೇ ಕ್ರಮ ಇಲ್ಲ. ಇದು ಜನರ ಮೇಲೆ ಆರ್ಥಿಕ ಹೊರೆ ಹೇರಿರುವ ಮತ್ತೊಂದು ಜನ ವಿರೋಧಿ, ನಿರಾಶಾದಾಯಕ ಬಜೆಟ್.

ಬಜೆಟ್‌ನಲ್ಲಿ ಶಿಕ್ಷಣಕ್ಕೆ ಶೇ 2ರಷ್ಟು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಶೇ 1ರಷ್ಟು ಅನುದಾನ ನೀಡಲಾಗಿದೆ. ನೀರಾವರಿ, ಗ್ರಾಮೀಣ ಅಭಿವೃದ್ಧಿ, ಕೃಷಿಗೆ ಪೂರಕವಾಗಿ ಯಾವುದೇ ಅನುದಾನ ನೀಡಿಲ್ಲ.

–ಕೆ. ಪ್ರಸನ್ನ ಕುಮಾರ್, ಪಾಲಿಕೆ ಮಾಜಿ ಸದಸ್ಯ

ವಿಶ್ವ ಕನ್ನಡ ಸಮ್ಮೇಳನದ ಪ್ರಸ್ತಾವವಿಲ್ಲ

ಬಜೆಟ್‌ನಲ್ಲಿ ದಾವಣಗೆರೆಯಲ್ಲಿ ಮೂರನೇ ವಿಶ್ವ ಕನ್ನಡ ಸಮ್ಮೇಳನ ನಡೆಸುವ ಕುರಿತಾಗಿ ಯಾವುದೇ ಘೋಷಣೆ ಮಾಡಿಲ್ಲ. ಇದು ಸಮಸ್ತ ಕನ್ನಡಿಗರಿಗೆ ಬೇಸರ ತಂದ ಬಜೆಟ್. ಮಧ್ಯ ಕರ್ನಾಟಕದ ಜನರಿಗೆ ಮಾಡಿದ ಮೋಸ ಇದು.

–ಬಿ.ವಾಮದೇವಪ್ಪ, ಅಧ್ಯಕ್ಷ,ಕಸಾಪ ಜಿಲ್ಲಾ ಘಟಕ

ರೈತ ವಿರೋಧಿ; ಕಣ್ಣೊರೆಸುವ ತಂತ್ರ

ಭದ್ರಾ ಕಾಲುವೆಗಳ ಆಧುನೀಕರಣದ ಪ್ರಸ್ತಾಪವಿಲ್ಲ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಆವರ್ತ ನಿಧಿಯ ಪ್ರಸ್ತಾವ ಇಲ್ಲ. ಅನುಗ್ರಹ ಯೋಜನೆಯಡಿ ಪರಿಹಾರದ ಮೊತ್ತ ಏರಿಕೆ ಮಾಡಿರುವುದು ಕುರಿಗಾರರ, ಪಶು ಪಾಲಕರ ಕಣ್ಣು ಒರೆಸುವ ಕುತಂತ್ರ. ಇದು ರೈತ ವಿರೋಧಿ ಬಜೆಟ್.

–ಬಿ.ಎಂ. ಸತೀಶ್ ಕೊಳೇನಹಳ್ಳಿ, ಬಿಜೆಪಿ ಜಿಲ್ಲಾ ಘಟಕದ ವಕ್ತಾರ

ಜಿಲ್ಲೆಗೆ ನಿರಾಸೆ ತಂದ ಬಜೆಟ್

ಜಿಲ್ಲೆಯ ಜನರಿಗೆ ಉದ್ಯೋಗ ಸೃಷ್ಟಿಗೆ ಅಗತ್ಯವಿದ್ದ ಎಸ್ಇಝಡ್‌, ಫುಡ್‌ ಪಾರ್ಕ್‌, ಜವಳಿ ಪಾರ್ಕ್ ಘೋಷಣೆ ಮಾಡಿಲ್ಲ. ಜಿಲ್ಲೆಯ ಜನರಿಗೆ ಉದ್ಯೋಗ ಸೃಷ್ಟಿಗೆ ಬೇಕಾದ ಯೋಜನೆಗಳ ಘೋಷಣೆ ಇಲ್ಲ. ಬೃಹತ್‌ ಕೈಗಾರಿಕೆ ಘಟಕಗಳ ಆರಂಭಕ್ಕೆ ಲ್ಯಾಂಡ್‌ ಬ್ಯಾಂಕ್‌ ಮಂಜೂರು ಮಾಡಿಲ್ಲ. ಜಿಲ್ಲೆಗೆ ನಿರಾಸೆ ತಂದ ಬಜೆಟ್‌ ಇದು.

–ರೋಹಿತ್ ‌ಎಸ್. ಜೈನ್, ಕಾರ್ಯದರ್ಶಿ, ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘ

ಅಭಿವೃದ್ಧಿ ಕೇಂದ್ರಿತ: ಹೊರೆ ಇಲ್ಲ

ರೈತರು, ಶ್ರಮಿಕರು, ಮಹಿಳೆಯರು, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತರು ಸೇರಿದಂತೆ ವಿವಿಧ ವರ್ಗಗಳ ಅಭ್ಯುದಯಕ್ಕೆ ಹೊಸ ಕಾರ್ಯಕ್ರಮಗಳನ್ನು ನೀಡಲಾಗಿದೆ. ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಗೂ ಹೆಚ್ಚು ಆದ್ಯತೆ ನೀಡಲಾಗಿದೆ. ಹೊರೆ ಇರದ ಬಜೆಟ್.

–ಪ್ರೊ ಭೀಮಣ್ಣ ಸುಣಗಾರ, ನಿವೃತ್ತ ಪ್ರಾಧ್ಯಾಪಕ

ಕಟ್ಟಕಡೆಯ ವ್ಯಕ್ತಿಗೂ ನ್ಯಾಯ

ಬಜೆಟ್‌ನಲ್ಲಿ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಲಾಗಿದೆ. ಸಮ ಸಮಾಜದ ಆಶಯಕ್ಕೆ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಗುತ್ತಿಗೆದಾರರಿಗೆ ₹ 2 ಕೋಟಿಯವರಿಗೆ ಗುತ್ತಿಗೆ ವಿಸ್ತರಣೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾರ್ಯಕ್ರಮಗಳಿಗೆ ₹ 42,018 ಕೋಟಿ ಮೀಸಲಿಟ್ಟಿರುವುದು ಸ್ವಾಗತಾರ್ಹ.

ಡಿ. ಬಸವರಾಜ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ

ವೈದ್ಯಕೀಯ ಕಾಲೇಜಿಗೆ ಮಂಜೂರಾತಿ ಇಲ್ಲ

ಬಜೆಟ್ ಮಧ್ಯ ಕರ್ನಾಟಕದ ಪಾಲಿಗೆ ನಿರಾಶಾದಾಯಕ. ಜಿಲ್ಲೆಯ ಸಾವಿರಾರು ಯುವಕ–ಯುವತಿಯರಿಗೆ ಉದ್ಯೋಗ ಸೃಷ್ಟಿ‌ಗಾಗಿ ಯಾವುದೇ ಕೈಗಾರಿಕೆಗಳನ್ನು ಘೋಷಿಸಿಲ್ಲ. ರೈತರ ಬಹುದಿನಗಳ ಬೇಡಿಕೆಯಾದ ಮೆಕ್ಕೆಜೋಳ ಸಂಸ್ಕರಣಾ ಘಟಕ‌ವನ್ನು ಮಂಜೂರು ಮಾಡಿಲ್ಲ. ಮುಖ್ಯವಾಗಿ ಸರ್ಕಾರಿ ವೈದ್ಯಕೀಯ ಕಾಲೇಜನ್ನೂ ಮಂಜೂರು ಮಾಡಿಲ್ಲ.

–ಕೆ.ಜಿ. ಯಲ್ಲಪ್ಪ, ವಿಶ್ವ ಕರವೇ ರಾಜ್ಯ ಘಟಕದ ಅಧ್ಯಕ್ಷ

ದಲಿತ ವಿರೋಧಿ; ಏನನ್ನೂ ಹೇಳಿಲ್ಲ

ದಾವಣಗೆರೆ ವಿಮಾನ ನಿಲ್ದಾಣದ ಪ್ರಸ್ತಾಪವಿಲ್ಲ. ಜವಳಿ ಉದ್ಯಮ ಅಭಿವೃದ್ಧಿ, ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಬಗ್ಗೆ ಏನೂ ಹೇಳಿಲ್ಲ. ಎಸ್‌ಸಿಎಸ್‌ಪಿ-ಟಿಎಸ್‌ಪಿ ಅನುದಾನ ಸಮರ್ಪಕವಾಗಿ ಬಳಸುವ ಬಗ್ಗೆ ಪ್ರಸ್ತಾವ ಮಾಡಿಲ್ಲ. ಏನನ್ನು ಹೇಳಿಲ್ಲ. ಇದು ದಲಿತ ವಿರೋಧಿ ಬಜೆಟ್.

–ಹೆಗ್ಗೆರ ರಂಗಪ್ಪ, ರಾಜ್ಯ ಸಂಘಟನಾ ಸಂಚಾಲಕ, ಕದಸಂಸ

ಉತ್ತಮವಾದ ಬಜೆಟ್

ಉತ್ತಮವಾದ ಬಜೆಟ್ ಇದು. ಗ್ಯಾರಂಟಿ ಯೋಜನೆಗಳಿಗೆ ಬಜೆಟ್‌ನಲ್ಲಿ ₹ 51,000 ಕೋಟಿ ಮೀಸಲಿಟ್ಟಿರುವುದು ಸ್ವಾಗತಾರ್ಹ. ಅಭಿವೃದ್ಧಿಯ 6 ಅಂಶಗಳ ಮೇಲೆ ರಾಜ್ಯ ಬಜೆಟ್‌ ಕೇಂದ್ರೀಕರಿಸಿರುವುದು ಉತ್ತಮ ನಿರ್ಧಾರ.

–ಶ್ರೀಕಾಂತ್ ಬಗರೆ, ಯುವ ಕಾಂಗ್ರೆಸ್ ಮುಖಂಡ

ಕಾರ್ಮಿಕರಿಗೆ ಸಮಾಧಾನ ತಂದಿಲ್ಲ

ಬಜೆಟ್‌ನಲ್ಲಿ‌ ಕಾರ್ಮಿಕ ವರ್ಗದ ಹಿತ ಕಡೆಗಣಿಸಲಾಗಿದೆ. ಅಂಗನವಾಡಿ, ಬಿಸಿಯೂಟ ಮತ್ತು ಆಶಾ ಕಾರ್ಯಕರ್ತೆಯರ ಹೋರಾಟ, ಬೇಡಿಕೆಗೆ ಮನ್ನಣೆ ನೀಡಿಲ್ಲ. ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನವನ್ನು ನಡೆಸಬೇಕೆಂಬ ಒತ್ತಾಯಕ್ಕೂ ಮನ್ನಣೆ ನೀಡಿಲ್ಲ. ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಸತಿ ಶಾಲೆಗಳ ಆರಂಭ ಸ್ವಾಗತಾರ್ಹ.

–ಕೆ.ರಾಘವೇಂದ್ರ ನಾಯರಿ, ಕಾರ್ಮಿಕ ಮುಖಂಡ

ಎಲ್ಲಾ ಕ್ಷೇತ್ರಕ್ಕೂ ನ್ಯಾಯ

ಉತ್ತಮ ಬಜೆಟ್‌ ಇದು. ರೈತರು, ಕಾರ್ಮಿಕರು ಹಾಗೂ ಅಸಂಘಟಿತ ವಲಯ, ವಿದ್ಯಾರ್ಥಿ, ಯುವಜನರಿಗೆ ಸೌಲಭ್ಯ ಕಲ್ಪಿಸಿರುವುದು ಉತ್ತಮ ನಡೆ. ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮುದಾಯಕ್ಕೆ, ಶಿಕ್ಷಣ, ಆರೋಗ್ಯ, ವಸತಿ ಉದ್ಯೋಗ ಎಲ್ಲಾ ಕ್ಷೇತ್ರಕ್ಕೂ ನ್ಯಾಯ ಒದಗಿಸಲಾಗಿದೆ.

–ಆವರಗೆರೆ ವಾಸು, ಕಾರ್ಮಿಕ ಮುಖಂಡ

ಸುಸ್ಥಿರ ಅಭಿವೃದ್ಧಿಗೆ ಪೂರಕ

ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿ ಎಲ್ಲಾ ಕ್ಷೇತ್ರಗಳಿಗೆ ಅನುದಾನ ನೀಡುವುದರ ಜೊತೆಗೆ ವಿತ್ತೀಯ ಶಿಸ್ತನ್ನು ಕಾಪಾಡಿರುವುದು ಗಮನಾರ್ಹ. ವಿತ್ತೀಯ ಕೊರತೆ ₹ 27,353 ಕೋಟಿಯಿಂದ ₹ 19,262 ಕೋಟಿಗೆ ಇಳಿದಿರುವುದು ವಿತ್ತೀಯ ಶಿಸ್ತಿಗೆ ಉತ್ತಮ ಉದಾಹರಣೆ. ರಾಜ್ಯದ ಎಲ್ಲಾ ಪ್ರದೇಶಗಳನ್ನು, ಅದರಲ್ಲೂ ಬೆಂಗಳೂರು ಅಭಿವೃದ್ಧಿಗಾಗಿ ‘ಬ್ರ್ಯಾಂ‌ಡ್ ಬೆಂಗಳೂರು’ ಅಡಿಯಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ.

ಹುಚ್ಚೇಗೌಡ, ಮುಖ್ಯಸ್ಥ, ಅರ್ಥಶಾಸ್ತ್ರ ವಿಭಾಗ, ದಾವಣಗೆರೆ ವಿವಿ

ಅಭಿವೃದ್ಧಿಗೆ ಪೂರಕ

ಕೃಷಿ, ಮಹಿಳೆಯರ ಸಶಕ್ತೀಕರಣ, ವಿದ್ಯಾರ್ಥಿಗಳು, ಎಸ್ಸಿ, ಎಸ್ಟಿ ಸೇರಿದಂತೆ ಎಲ್ಲಾ ಸಮುದಾಯದವರ ಅಭ್ಯುದಯಕ್ಕೆ ಸಹಕಾರಿಯಾದ ಬಜೆಟ್. ಅಡಿಕೆಯ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ ಕ್ರಮ, ದೇಶಿ ತಳಿಗಳ ಬೀಜ ಬ್ಯಾಂಕ್ ಸ್ಥಾಪನೆ ಸೇರಿ ತೋಟಗಾರಿಕೆ ಇಲಾಖೆಗೆ ಸಾಕಷ್ಟು ಕೊಡುಗೆ ನೀಡಲಾಗಿದೆ. ಸುಸ್ತಿ ಮೇಲಿನ ಬಡ್ಡಿ ಮನ್ನಾ, ರೈತರಿಗೆ ಸಾಲ ವಿತರಣೆ, ಕೃಷಿ ಭಾಗ್ಯ ಯೋಜನೆಯಡಿ 3 ಲಕ್ಷಕ್ಕಿಂತ ಅಧಿಕ ಕೃಷಿ ಹೊಂಡಗಳ ನಿರ್ಮಾಣ ಉತ್ತಮ ಕ್ರಮ.

ಮೊಹಮ್ಮದ್ ಜಿಕ್ರಿಯಾ, ಜಿಲ್ಲಾ ಘಟಕದ ಅಧ್ಯಕ್ಷ, ಜವಾಹರ್ ಬಾಲ್ ಮಂಚ್

ಸಮತೋಲಿತ, ಅಭ್ಯುದಯದ ಆಯವ್ಯಯ

ಆಯವ್ಯಯದಲ್ಲಿ ಕ್ರಾಂತಿಕಾರಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಇದೊಂದು ಸಮತೋಲಿತ ಬಜೆಟ್. ಇ-ಪೌತಿ ಆಂದೋಲನ, ಇಂಗ್ಲಿಷ್‌ ಕೌಶಲ ಬೆಳೆಸಲು ರಾಜ್ಯದ 4,000 ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ವಿಭಾಗ ಆರಂಭ, ಉತ್ಸಾಹಿ ಕೈಗಳಿಗೆ ಕೌಶಲದ ಬಲ, ತಂತ್ರಜ್ಞಾನ, ಕಾರ್ಮಿಕರು, ಮಹಿಳೆಯರು, ಯುವವರ್ಗ, ರೈತರು ಸೇರಿದಂತೆ ಪ್ರತಿಯೊಂದು ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಹಲವು ಕಾರ್ಯಕ್ರಮಗಳನ್ನು ಘೋಷಿಸಿರುವುದು ಸ್ವಾಗತಾರ್ಹ.

–ಸೈಯದ್ ಖಾಲಿದ್ ಅಹ್ಮದ್, ಕಾರ್ಯದರ್ಶಿ, ಯುವ ಕಾಂಗ್ರೆಸ್ ಘಟಕ

ಭಾರ ಏರಿಸುವ ಗ್ಯಾರಂಟಿ ಬಜೆಟ್

ರಾಜ್ಯ ಸರ್ಕಾರ ಎರಡು ವರ್ಷಗಳಲ್ಲಿ, ರಾಜ್ಯದ ಪ್ರತಿ ಪ್ರಜೆಯ ತಲೆಯ ಮೇಲೆ ಲಕ್ಷಾಂತರ ರೂಪಾಯಿ ಸಾಲ ಹೊರಿಸಿದೆ. ಬಜೆಟ್‌ನಲ್ಲಿ ಪರಿಪೂರ್ಣ ಗ್ಯಾರಂಟಿ ಪುರಸ್ಕರಿಸಲಾಗಿದೆ. ಕೇವಲ ಸಾಲದ ಮೇಲಿನ ಬಡ್ಡಿಯನ್ನು ಕಟ್ಟಲು ಶತಾಯ ಗತಾಯ ಸರ್ಕಸ್‌ ಮಾಡುತ್ತಿದೆ. ಭಾರ ಏರಿಸಿದ್ದು ಬಿಟ್ಟರೆ ಬಜೆಟ್‌ ಅಭಿವೃದ್ಧಿಗೆ ಪೂರಕವಾಗಿಲ್ಲ.

–ದಿದ್ದಿಗಿ ಮಹದೇವಪ್ಪ, ಮೈಕ್ರೊಬಿ ಫೌಂಡೇಷನ್‌ ನಿರ್ದೇಶಕ

ಜನ ಕಲ್ಯಾಣಕ್ಕೆ ಒತ್ತು

ಜನ ಕಲ್ಯಾಣಕ್ಕೆ ಆಯವ್ಯಯದಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ದೇಶದ ಜಿಡಿಪಿಗೆ 8.4ರಷ್ಟು ಕೊಡುಗೆ ನೀಡಿದೆ. ಹೊಸ ಬಸ್ ಸೇವೆಗೆ ಅವಕಾಶ ನೀಡಿದ್ದು, ಹೆಚ್ಚಿನ ಬಂಡವಾಳ ಹೂಡಿಕೆ, ಹೊಸದಾಗಿ ಉದ್ಯೋಗ ಅವಕಾಶ ಸೃಷ್ಟಿಸಲು ಆದ್ಯತೆ ಕೊಡಲಾಗಿದೆ. ಪಂಚ ಗ್ಯಾರಂಟಿ ಉಳಿಸಿಕೊಂಡಿದ್ದು, ಯಾವುದೇ ಹೊರೆಯನ್ನು ಜನತೆಗೆ ವಿಧಿಸದೆ, ವಾಣಿಜ್ಯ ತೆರಿಗೆ, ಅಬಕಾರಿ, ನೋಂದಣಿ ಮುದ್ರಾಂಕದಿಂದ ಅಧಿಕ ಪ್ರಮಾಣದ ರಾಜಸ್ವ ಸಂಗ್ರಹಣೆ ಗುರಿ ಹೊಂದಲಾಗಿದೆ. ಬಜೆಟ್‌ನಿಂದ ಎಲ್ಲಾ ವರ್ಗದ ಜನರಿಗೆ ಅನುಕೂಲ ಕಲ್ಪಿಸಲಾಗಿದೆ.

-ಎಂ.ಎಸ್. ಮಂಜುನಾಥ್, ಆರ್ಥಿಕ ತಜ್ಞ

ನೌಕರರಿಗೆ ಅನ್ಯಾಯ

ಬಜೆಟ್‌ನಲ್ಲಿ ಬಿಸಿಯೂಟ ತಯಾರಕರ ಗೌರವ ಧನವನ್ನು ₹ 1,000 ಮಾತ್ರ ಹೆಚ್ಚಳ ಮಾಡಿ ಸರ್ಕಾರ ಮಾತಿಗೆ ತಪ್ಪಿದೆ. ಕಾರ್ಮಿಕರು, ನೌಕರರಿಗೆ ನಿರಾಸೆ ತಂದ ಬಜೆಟ್‌ ಇದು.

–ಆವರಗೆರೆ ಚಂದ್ರು, ರಾಜ್ಯ ಪ್ರಧಾನ ಕಾರ್ಯದರ್ಶಿ, ಎಐಟಿಯುಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.