ADVERTISEMENT

‘ಇತಿಹಾಸ ಕೆದಕುವ ಅಭಿರುಚಿ ಮುಖ್ಯ: ಡಾ.ಆರ್. ಗೋಪಾಲ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2019, 14:17 IST
Last Updated 18 ಅಕ್ಟೋಬರ್ 2019, 14:17 IST
ಚಿತ್ರ 18 ಆರ್‌ಐಪಿ 03 ಇಪಿ, ರಿಪ್ಪನ್‌ಪೇಟೆ ಸಮೀಪದ ಹೊಂಬುಜ ಜೈನ ಮಠದ ಆಶ್ರಯದಲ್ಲಿ ಶುಕ್ರವಾರ ನಡೆದ ಕರ್ನಾಟಕ ಇತಿಹಾಸ ಅಕಾದೆಮಿ ರಾಜ್ಯ ಮಟ್ಟದ 33ನೇ ವಾರ್ಷಿಕ ಸಮ್ಮೇಳನದಲ್ಲಿ ಹಂಪಿ ವಿವಿಯ ಕನ್ನಡ ಕುಲಪತಿ ಡಾ. ಸ.ಚಿ. ರಮೇಶ್‌ ಅವರು ಇತಿಹಾಸ ದರ್ಶನದ ಸಂಪುಟ 34 ನ್ನು ಬಿಡುಗಡೆಗೊಳಿಸಿದರು.
ಚಿತ್ರ 18 ಆರ್‌ಐಪಿ 03 ಇಪಿ, ರಿಪ್ಪನ್‌ಪೇಟೆ ಸಮೀಪದ ಹೊಂಬುಜ ಜೈನ ಮಠದ ಆಶ್ರಯದಲ್ಲಿ ಶುಕ್ರವಾರ ನಡೆದ ಕರ್ನಾಟಕ ಇತಿಹಾಸ ಅಕಾದೆಮಿ ರಾಜ್ಯ ಮಟ್ಟದ 33ನೇ ವಾರ್ಷಿಕ ಸಮ್ಮೇಳನದಲ್ಲಿ ಹಂಪಿ ವಿವಿಯ ಕನ್ನಡ ಕುಲಪತಿ ಡಾ. ಸ.ಚಿ. ರಮೇಶ್‌ ಅವರು ಇತಿಹಾಸ ದರ್ಶನದ ಸಂಪುಟ 34 ನ್ನು ಬಿಡುಗಡೆಗೊಳಿಸಿದರು.   

ರಿಪ್ಪನ್‌ಪೇಟೆ: ‘ಸ್ಥಳೀಯ, ಪ್ರಾದೇಶಿಕ ಸ್ಥಳಗಳ ಐತಿಹಾಸಿಕ ಕುರುಹು ಹುಡುಕಿ–ಕೆದಕಿ ತೆಗೆಯುವ ಅಭಿರುಚಿ ಬೆಳೆಸಿಕೊಂಡಲ್ಲಿ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಲು ಸಾಧ್ಯ’ ಎಂದು ಮೈಸೂರಿನ ರಾಜ್ಯ ಪುರಾತತ್ವ ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ನಿರ್ದೇಶಕ ಆರ್. ಗೋಪಾಲ ಅಭಿಪ್ರಾಯಪಟ್ಟರು.

ಹೊಂಬುಜ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ 3 ದಿನಗಳ ಕರ್ನಾಟಕ ಇತಿಹಾಸ ಅಕಾಡೆಮಿಯ 33ನೇ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ್ದರು.

‘ರಾಜ್ಯದ ಮೂಲೆ ಮೂಲೆಗಳಲ್ಲಿರುವ ವಿವಿಧ ಸ್ಥಳಗಳ ಕೋಟೆ-ಕೊತ್ತಲು, ಅರಮನೆ, ಪಾಳು ಬಿದ್ದ ಶಾಸನಗಳ ಕುರಿತು ಹೊಸ ಸಂಶೋಧನೆಗಳನ್ನು ಅಧ್ಯಯನ ಅಕಾಡೆಮಿಯ ಸದಸ್ಯರು ನಿರಂತರವಾಗಿ ನಡೆಸಿ, ಅದನ್ನು ಕಾಪಿಡುವ ನಿಟ್ಟಿನಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಿಸಿ, ಓದುಗ ಬಳಗಕ್ಕೆ ನೀಡುತ್ತಿರುವುದು ಶ್ಲಾಘನೀಯ’ ಎಂದರು.

‘ಶ್ರೀಕ್ಷೇತ್ರ ಜೈನ ಮಠವು ಐತಿಹಾಸಿಕ ಸ್ಥಳದ ಮಹಿಮೆ ಹೊಂದಿದೆ. ಶ್ರೀಗಳು ಇತಿಹಾಸ ಪರಂಪರೆ ಉಳಿಸಿ ಬೆಳೆಸುವ ಘನಕಾರ್ಯಕ್ಕೆ ಪ್ರೋತ್ಸಾಹಿಸುವ ಮೂಲಕ ನಾಡಿನ ಚರಿತ್ರೆಗೆ ಮಹತ್ತರ ಕೊಡುಗೆ ನೀಡುತ್ತಿದೆ’ ಎಂದರು.

ಹಂಪಿ ಕನ್ನಡ ವಿವಿ ಕುಲಪತಿ ಡಾ.ಸ.ಚಿ.ರಮೇಶ ಅವರು ‘ಇತಿಹಾಸ ದರ್ಶನ ಸಂಪುಟ 34ನ್ನು ಬಿಡುಗಡೆಗೊಳಿಸಿ ಮಾತನಾಡಿ, ‘ಮಲೆನಾಡಿನ ಮಡಿಲಿನಲ್ಲಿರುವ ಹೊಂಬುಜ ಮತ್ತು ಕೆಳದಿಯ ಅರಸರ ಇತಿಹಾಸದ ಬಗ್ಗೆ ಇನ್ನಷ್ಟು ಸಮಗ್ರ ಅಧ್ಯಯನ ನಡೆಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಅಕಾಡೆಮಿ ಕಾರ್ಯತತ್ಪರವಾಗಲಿ’ ಎಂದು ಹೇಳಿದರು.

‘ಪ್ರಾಚೀನ ಪರಂಪರೆ ಹೊಂದಿರುವ ಹೊಂಬುಜ, ಈ ಹಿಂದೆ ರಾಜರ ಮತ್ತು ಜೈನ ಮುನಿಗಳ ತಪೋಭೂಮಿಯಾಗಿತ್ತು. ಈಗ ಕಲೆ,ಸಂಸ್ಕೃತಿ, ಇತಿಹಾಸ ಹಾಗೂ ಧಾರ್ಮಿಕ ಕೈಂಕರ್ಯಗಳ ಶಕ್ತಿಕೇಂದ್ರವಾಗಿ ಬೆಳೆಯುತ್ತಿದೆ’ ಎಂದರು.

ADVERTISEMENT

ನಾಡೋಜ ಪ್ರಶಸ್ತಿ ಪುರಸ್ಕೃತ ಡಾ. ಹಂಪ ನಾಗರಾಜಯ್ಯ ಅವರು, ಡಾ.ಅಮರೇಶ್‌ ಯತಗಲ್‌ ಅವರ ಕೃತಿ ‘ಕರ್ನಾಟಕ ನಾಯಕ, ಅರಸು ಮನೆತನಗಳ ವಿಶಿಷ್ಟ ಸಾಂಸ್ಕೃತಿಕ ಆಚರಣೆ ಹಾಗೂ ಚಾರಿತ್ರಿಕ ಸುರಪುರ’–ಅಧ್ಯಯನಾತ್ಮಕ ನೋಟಗಳು, ಡಾ.ಎಫ್‌.ಟಿ. ಹಳ್ಳಿಕೇರಿ ಅವರ ‘ಹಾಲುಮತ ಸಂಸ್ಕೃತಿ ಭಾಗ–2’, ಡಾ.ಕೆ. ರೇವಣ್ಣ ಸಿದ್ದಯ್ಯ ಅವರ ‘ಕುಣಿಗಲ್‌ ದರ್ಶನ’, ಡಾ.ಕೆ. ರವೀಂದ್ರನಾಥ್‌ ಅವರ ‘ಅಕರಗಳು ಶೋಧ–ಪರಿಶೋಧ’, ಡಾ. ಕೆ.ಜಿ. ವಸಂತ ಮಾಧವ ಅವರ ‘ಪ್ರಾಚೀನ ಜಾಗತಿಕ ಪರಿದೇಶದಲ್ಲಿ ಭಾರತೀಯ ವೈದ್ಯಶಾಸ್ತ್ರ’ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು.

‘ಸ್ಥಳೀಯ ಜನರ ನೆರವು ಪಡೆದು ಹೊಂಬುಜದ ಸುತ್ತಮುತ್ತ ಹಲವು ಸ್ಥಳ ಮತ್ತು ಶಾಸನಗಳ ಅಧ್ಯಯನ ನಡೆಸಲಾಗಿದ್ದು, ರಾಜ್ಯದಲ್ಲಿಯೇ ಅಪರೂಪದ ಕ್ಷೇತ್ರ ಇದಾಗಿದೆ’ ಎಂದು ಹೇಳಿದರು.

ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ದೇವರಕೊಂಡಾರೆಡ್ಡಿ ಆಶಯ ಭಾಷಣ ಮಾಡಿದರು.

ಹೊಂಬುಜ ಜೈನ ಮಠದ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.