ಹೊನ್ನಾಳಿ: ತಾಲ್ಲೂಕಿನ ಬಹುತೇಕ ಕಡೆ ಗುರುವಾರ ಉತ್ತಮ ಮಳೆಯಾಗಿದ್ದು, ರೈತರು ಸಂತಸದಲ್ಲಿದ್ದಾರೆ. ಪಟ್ಟಣದಲ್ಲಿ ಒಂದೂವರೆ ಗಂಟೆಗೂ ಹೆಚ್ಚು ಸಮಯ ವರುಣ ಆರ್ಭಟಿಸಿದ್ದಾನೆ.
ಬೇಲಿಮಲ್ಲೂರು, ಕೋಟೆ ಮಲ್ಲೂರು, ಹೊನ್ನೂರು ವಡ್ಡರಹಟ್ಟಿ,ಮಾರಿಕೊಪ್ಪ, ಗೋಪಗೊಂಡನಹಳ್ಳಿ ಸುತ್ತ ಉತ್ತಮ ಮಳೆಯಾ ಗಿದೆ. ಸಾಸ್ವೇಹಳ್ಳಿ, ಕುಳಗಟ್ಟೆ ಭಾಗ ಗಳಲ್ಲಿ ಅರ್ಧಗಂಟೆ ಉತ್ತಮ ಮಳೆ ಸುರಿ ಯಿತು. ಹತ್ತೂರು, ಕತ್ತಿಗೆ ಮಾದೇನಹಳ್ಳಿ ಭಾಗದಲ್ಲಿ ಸಣ್ಣಗೆ ಮಳೆ ಬಿದ್ದಿದೆ.
ಅರಬಗಟ್ಟೆ ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ಈಗಾಗಲೇ ಒಂದು ಬಾರಿ ಉಳುಮೆ ಮಾಡಿದ ರೈತರಿಗೆ ಇದು ಮಾಗಿ ಹೊಡೆಯಲು ಸಕಾಲ ಎಂದು ರೈತಸಂಘದ ಅಧ್ಯಕ್ಷ ಬಸಪ್ಪ ಮೇಸ್ಟ್ರು ತಿಳಿಸಿದ್ದಾರೆ. ನೆಲಹೊನ್ನೆ, ಕುಂಬಳೂರು ಭಾಗದಲ್ಲಿ ಅಷ್ಟೇನೂ ಮಳೆಯಾಗಿಲ್ಲ. ಭೂಮಿ ಹದ ಮಾಡಿಕೊಳ್ಳಲು ಇನ್ನೂ ಉತ್ತಮ ಮಳೆಯಾಗಬೇಕು ಎಂದು ರೈತ ಮುಖಂಡ ಸೋಮಶೇಖರ್ ಹೇಳಿದರು.
ಈ ಬಾರಿ ಉತ್ತಮ ಮಳೆಯಾಗುತ್ತಿದ್ದು, ಬಹುತೇಕ ಜೂನ್‌ನಲ್ಲೇ ಬಿತ್ತನೆಯಾಗುವ ಸಾಧ್ಯತೆಯಿದೆ ಎಂದು ರೈತರು ಹೇಳಿದ್ದಾರೆ. ತೋಟಗಾರಿಕೆ ಬೆಳೆಗೆ ಈ ಮಳೆಯಿಂದ ಅನುಕೂಲವಾಗಿದ್ದರೆ, ಭತ್ತ ಬೆಳೆದ ರೈತರಿಗೆ ತೊಂದರೆಯಾಗಿದೆ ಎನ್ನುತ್ತಾರೆ ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಎಂ.ಜಿ.ಆರ್. ಮಂಜುನಾಥ್.
ಖಾಸಗಿ ಬಸ್ ನಿಲ್ದಾಣದಲ್ಲಿ ಹರಿದ ನೀರು
ಹೊನ್ನಾಳಿಯ ಖಾಸಗಿ ಬಸ್ ನಿಲ್ದಾಣದ ಚಾವಣಿಯಿಂದ ಕೆಳಕ್ಕೆ ಅಳವಡಿಸಿರುವ ನೀರಿನ ಪೈಪ್ ಒಡೆದಿದ್ದರಿಂದ ಮಳೆಯ ನೀರು ಗುರುವಾರ ಧಾರಾಕಾರವಾಗಿ ಸುರಿಯಿತು. ಬೋರ್‌ವೆಲ್‌ನಂತೆ ಹರಿದಿದ್ದರಿಂದ ನಿಲ್ದಾಣದ ತುಂಬೆಲ್ಲಾ ನೀರು ತುಂಬಿ ಪ್ರಯಾಣಿಕರು ನಿಲ್ಲಲೂ ಪರದಾಡುವಂತಾಯಿತು. ಬಸ್ ನಿಲ್ದಾಣದಲ್ಲಿನ ಕೆಲ ಸಮಸ್ಯೆಗಳ ಬಗ್ಗೆ ಇಲ್ಲಿನ ಅಂಗಡಿಗಳ ಮಾಲೀಕರು ದೂರುತ್ತಿದ್ದರೂ ಪುರಸಭೆ ಇದಕ್ಕೆ ಕಿವಿಗೊಟ್ಟಿಲ್ಲ. ಸ್ವಚ್ಛತೆ ಕೊರತೆ ಕುಡಿಯಲು ನೀರಿನ ಸೌಲಭ್ಯ ಇಲ್ಲ. ಒಟ್ಟಾರೆ ಸಮಸ್ಯೆಗಳ ಆಗರವಾಗಿರುವ ನಿಲ್ದಾಣದಲ್ಲಿ ಮಳೆ ನೀರು ಮತ್ತಷ್ಟು ಸಮಸ್ಯೆ ತಂದೊಡ್ಡಿದೆ. ಬಸ್ ನಿಲ್ದಾಣ ತಗ್ಗು ಪ್ರದೇಶದಲ್ಲಿ ಇರುವುದರಿಂದ ಊರು ಕೇರಿಗಳ ಮೇಲ್ಭಾಗದಿಂದ ಹರಿದು ಬಂದ ಮಳೆ ನೀರು ನುಗ್ಗಿದೆ. ಇದರಿಂದ ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು ಎಂದು ಸಾರ್ವಜನಿಕರು ಹೇಳಿದರು.
ನ್ಯಾಮತಿ: ಗುಡುಗು ಮಿಂಚು ಸಹಿತ ಮಳೆ
ನ್ಯಾಮತಿ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಗುರುವಾರ ಸಂಜೆ ಮುಕ್ಕಾಲು ತಾಸು ಗುಡುಗು ಮಿಂಚಿನ ಆರ್ಭಟದೊಂದಿಗೆ ಮಳೆ ಸುರಿಯಿತು. ಗೋವಿನಕೋವಿ ಕುರುವ ನ್ಯಾಮತಿಯಲ್ಲಿ ಉತ್ತಮ ಮಳೆಯಾಗಿದೆ. ಬೆಳಗುತ್ತಿ ಸುತ್ತಮುತ್ತ ಸವಳಂಗ ಸುತ್ತಮುತ್ತ ಗುಡುಗು ಮಿಂಚಿನ ಆರ್ಭಟದೊಂದಿಗೆ ಸಾಧಾರಣ ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.