ದಾವಣಗೆರೆ: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸುತ್ತಿರುವ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಿ ಅಧಿಸೂಚನೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಮುಖ್ಯಮಂತ್ರಿಗೆ ರಕ್ತದಲ್ಲಿ ಪತ್ರ ಬರೆದು ಪ್ರತಿಭಟನೆ ನಡೆಸಿದರು.
ನಗರದ ಪಿ.ಜೆ.ಬಡಾವಣೆಯ ಶಿವ ಹೈಟೆಕ್ ಲ್ಯಾಬ್ ಬಳಿ ಭಾನುವಾರ ಜಮಾಯಿಸಿದ ಪ್ರತಿಭಟನಕಾರರು, ಸಿಬ್ಬಂದಿಯ ಸಹಕಾರದಿಂದ ದೇಹದಿಂದ ರಕ್ತ ಪಡೆದರು. ಇದೇ ರಕ್ತ ಬಳಸಿ ‘ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರು’, ‘ಕೆಪಿಎಸ್‌ಸಿ ಇರುವುದು ಕನ್ನಡಿಗರಿಗೆ’, ‘ಭ್ರಷ್ಟಾಚಾರಕ್ಕೆ ಹಾಕಿ ಕಡಿವಾಣ’ ಎಂಬ ಒಕ್ಕಣೆಯನ್ನು ಬರೆದರು.
ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಕೆಪಿಎಸ್‌ಸಿ ನಡೆಸಿದ ಪರೀಕ್ಷೆಯಲ್ಲಿ ಕನ್ನಡ ಭಾಷಾಂತರದಲ್ಲಿ ಲೋಪ ಉಂಟಾಗಿದೆ. ಕನ್ನಡದಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸುವಂತೆ ರಕ್ಷಣಾ ವೇದಿಕೆ ಹೋರಾಟ ನಡೆಸಿದೆ. ಇದನ್ನು ಪರಿಗಣಿಸದೇ ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಅವಕಾಶ ಕಲ್ಪಿಸಲಾಗಿದೆ. ಇದು ಕನ್ನಡಿಗರಿಗೆ ಮಾಡುತ್ತಿರುವ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬ್ಯಾಂಕಿಂಗ್ ಕ್ಷೇತ್ರದ ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗಿದೆ. ಬ್ಯಾಂಕ್‌ಗಳಲ್ಲಿ ಉತ್ತರ ಭಾರತದವರು ತುಂಬಿಕೊಂಡಿದ್ದು, ಕನ್ನಡರಿಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ರಾಜ್ಯ ಸರ್ಕಾರ ನಡೆಸುವ ನೇಮಕಾತಿಯಲ್ಲಿ ಕೂಡ ಇದೇ ರೀತಿಯ ಅನ್ಯಾಯ ಆಗಲು ಬಿಡುವುದಿಲ್ಲ. ಇದರ ವಿರುದ್ಧ ಹೋರಾಟ ನಡೆಸಬೇಕಿದ್ದ ವಿರೋಧ ಪಕ್ಷವಾದ ಬಿಜೆಪಿ ಮೌನ ವಹಿಸಿರುವುದು ಸರಿಯಲ್ಲ ಎಂದು ಆರೋಪಿಸಿದರು.
ಕೆಪಿಎಸ್‌ಸಿ ಈಗಾಗಲೇ ಭ್ರಷ್ಟರ ಕೂಪವಾಗಿದೆ. ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆಯುತ್ತಿರುವ ಆರೋಪ ಕೇಳಿ ಬರುತ್ತಿದೆ. ಮಹಾತ್ವಕಾಂಕ್ಷೆ ಹೊಂದಿದ ಕನ್ನಡದ ಬಡ ಅಭ್ಯರ್ಥಿಗಳಿಗೆ ಇದರಿಂದ ತೊಂದರೆ ಆಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಿದ್ದ ಹಾಗೂ ಕನ್ನಡಿಗರ ಪರವಾಗಿ ಕೆಲಸ ಮಾಡಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ ಅನುಮಾನ ಮೂಡಿಸಿದೆ ಎಂದು ದೂರಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರಾದ ಈಶ್ವರ್, ಗಿರೀಶ್ ಕುಮಾರ್, ಗೋಪಾಲ ದೇವರಮನೆ, ಖಾದರ್ ಬಾಷಾ, ಬಸಮ್ಮ, ತನ್ವೀರ್ ಮಹೇಂದ್ರ, ಅನಿಲ್ ಹಾಜರಿದ್ದರು.
ರಕ್ತದಲ್ಲಿ ಪತ್ರ ಬರೆಯುವ ಚಳವಳಿ ಆರಂಭವಾಗಿದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಇದು ಮುಂದುವರಿಯಲಿದೆ. 10 ಸಾವಿರ ಪತ್ರಗಳನ್ನು ಅಂಚೆ ಮೂಲಕ ರವಾನಿಸಲಾಗುತ್ತದೆ.ಎಂ.ಎಸ್.ರಾಮೇಗೌಡ, ಅಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ, ಜಿಲ್ಲಾ ಘಟಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.