ದಾವಣಗೆರೆ: ಬಡ ವಿದ್ಯಾರ್ಥಿಗಳಿಗೆ ಉಚಿತ ಪ್ರಸಾದನಿಲಯಗಳನ್ನು ಪ್ರಾರಂಭಿಸಿ ಲಕ್ಷಾಂತರ ಜನರ ಬಾಳಿಗೆ ಬೆಳಕಾದ ಚಿತ್ರದುರ್ಗ ಮುರುಘಾ ಮಠದ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಬೇಕು ಎಂದು ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.
ಇಲ್ಲಿನ ಶಿವಯೋಗಿ ಮಂದಿರದಲ್ಲಿ ಜಯದೇವ ಸ್ವಾಮೀಜಿ ಅವರ 69ನೇ ಸ್ಮರಣೋತ್ಸವದ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ‘ಜಯದೇವ ಲೀಲೆ’ ಪ್ರವಚನ ಮಾಲಿಕೆ ಉದ್ಘಾಟಿಸಿ ಅವರು ಮಾತನಾಡಿದರು.
‘ಜೀವನೋಪಾಯಕ್ಕಾಗಿ ಚಲನಚಿತ್ರಗಳಲ್ಲಿ ನಟಿಸಿದವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ನೀಡಿದೆ. ಆದರೆ, ಸ್ವಾತಂತ್ರ್ಯ ಪೂರ್ವದಲ್ಲಿ ದೇಶಕ್ಕಾಗಿ ಅಪಾರ ಸೇವೆ ಸಲ್ಲಿಸಿದ ಜಯದೇವ ಸ್ವಾಮೀಜಿ ಕೂಡ ಈ ಪ್ರಶಸ್ತಿಗೆ ಅರ್ಹರು’ ಎಂದು ಅಭಿಪ್ರಾಯಪಟ್ಟರು.
‘ದಾವಣಗೆರೆ, ಬೆಂಗಳೂರು, ತುಮಕೂರು, ಚಿತ್ರದುರ್ಗ, ಧಾರವಾಡ ಸೇರಿ ಅನೇಕ ಸ್ಥಳಗಳಲ್ಲಿ ಪ್ರಸಾದನಿಲಯ ಸ್ಥಾಪಿಸಿದರು. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ, ಸಂಶೋಧಕ ಎಂ. ಚಿದಾನಂದಮೂರ್ತಿ, ಮಾಜಿ ಉಪರಾಷ್ಟ್ರಪತಿ ಬಿ.ಡಿ. ಜತ್ತಿ ಅನೇಕರು ಈ ಪ್ರಸಾದ ನಿಲಯಗಳ ಪ್ರಯೋಜನ ಪಡೆದಿದ್ದಾರೆ. ಇದು ನಿಜವಾದ ಸಾಧನೆ’ ಎಂದು ಹೇಳಿದರು.
‘ಸರ್ಕಾರವೊಂದು ಮಾಡುವ ಕಾರ್ಯವನ್ನು ಸ್ವಾಮೀಜಿ ಮಾಡಿದ್ದಾರೆ. 1937ರಲ್ಲಿ ಮೈಸೂರಿನಲ್ಲಿ ಚಿಕಿತ್ಸಾಲಯವೊಂದನ್ನು ತೆರೆಯಲು ₹ 40,000 ನೆರವು ನೀಡಿದ್ದರು. ಕನ್ನಡ ಭಾಷೆ, ಸಾಹಿತ್ಯದ ಮೇಲೆ ಅಪಾರ ಅಭಿಮಾನ ಹೊಂದಿದ್ದ ಶ್ರೀಗಳು ಕರ್ನಾಟಕದ ಏಕೀಕರಣಕ್ಕೆ ಶ್ರಮಿಸಿದ್ದರು. ಶ್ರೀಗಳ ಕಾರ್ಯವನ್ನು ಮಹಾತ್ಮ ಗಾಂಧೀಜಿ ಕೂಡ ಮೆಚ್ಚಿದ್ದರು’ ಎಂದರು.
ಸಂತೆಬೆನ್ನೂರಿನ ಮಹಾಂತೇಶ ಶಾಸ್ತ್ರಿ ಜಯದೇವ ಲೀಲೆ ಪ್ರವಚನ ನೀಡಿದರು. ಮಾಜಿ ಉಪಮೇಯರ್ ಸೋಗಿ ಶಾಂತಕುಮಾರ್, ಎಂ. ಜಯಕುಮಾರ್, ಅಂದನೂರು ಮುಪ್ಪಣ್ಣ , ಎಸ್. ಓಂಕಾರಪ್ಪ, ಕುಂಟೋಜಿ ಚನ್ನಪ್ಪ, ಲಂಬಿ ಮುರುಗೇಶ್, ಎಂ.ಸಿ.ರೇಖಾ, ಕುಸುಮಾ ಲೋಕೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.