ADVERTISEMENT

ಇ–ಕೆವೈಸಿ: ಜಿಲ್ಲೆಯಲ್ಲಿ ಶೇ 75ರಷ್ಟು ಪ್ರಗತಿ

ಪ್ರಚಾರದ ನಡುವೆಯೂ ಶೇ 25ರಷ್ಟು ಬಾಕಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2023, 6:29 IST
Last Updated 14 ಜುಲೈ 2023, 6:29 IST
ಶ್ರೀನಿವಾಸ್‌ ಚಿಂತಾಲ್‌
ಶ್ರೀನಿವಾಸ್‌ ಚಿಂತಾಲ್‌   

ಚಂದ್ರಶೇಖರ ಆರ್.

ದಾವಣಗೆರೆ: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ 14ನೇ ಕಂತಿನ ಹಣ ಪಡೆಯಲು ರೈತರ ಇ–ಕೆವೈಸಿಯಲ್ಲಿ ಜಿಲ್ಲೆ ಶೇ 75ರಷ್ಟು ಸಾಧನೆ ಮಾಡಿದೆ. ಪ್ರಚಾರದ ನಡುವೆಯೂ ಶೇ 25ರಷ್ಟು ರೈತರು ಇ–ಕೆವೈಸಿ ಮಾಡುವುದು ಬಾಕಿ ಇದೆ.

ಈ ಮೊದಲು ಇ–ಕೆವೈಸಿ ಮಾಡಲು ಜೂನ್‌ 30 ಕಡೆಯ ದಿನ ಎಂದು ಕೃಷಿ ಇಲಾಖೆ ತಿಳಿಸಿತ್ತು. ಈಗ ಅದನ್ನು ವಿಸ್ತರಿಸಲಾಗಿದೆ. ಆದರೂ ಕೆಲ ರೈತರು ಇ–ಕೆವೈಸಿ ಮಾಡದ ಕಾರಣ ಶೇ 100 ಗುರಿ ಸಾಧನೆ ಸಾಧ್ಯವಾಗಿಲ್ಲ. ಜಿಲ್ಲೆಯಲ್ಲಿ ಯೋಜನೆಯಡಿ 1,49,636 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ. ಅದರಲ್ಲಿ 1,12,383 ರೈತರು ಇ–ಕೆವೈಸಿ ಮಾಡಿಕೊಂಡಿದ್ದಾರೆ. 37,251 ರೈತರು ಇ–ಕೆವೈಸಿ ಮಾಡಿಸಿಕೊಳ್ಳುವುದು ಬಾಕಿ ಇದೆ.

ADVERTISEMENT

ಜಿಲ್ಲೆಯಲ್ಲಿ  ಹರಿಹರ, ಹೊನ್ನಾಳಿಯಲ್ಲಿ ಶೇ 78ರಷ್ಟು ಸಾಧನೆಯಾಗಿದ್ದರೆ ಜಗಳೂರಿನಲ್ಲಿ ಕಡಿಮೆ ಅಂದರೆ ಶೇ 69ರಷ್ಟು ರೈತರು ಇ–ಕೆವೈಸಿ ಮಾಡಿಸಿಕೊಂಡಿದ್ದಾರೆ. ಜಗಳೂರಿನಲ್ಲಿ ಯೋಜನೆಗೆ ನೋಂದಾಯಿಸಿಕೊಂಡ 17,383 ರೈತರಲ್ಲಿ 7987 ರೈತರು ಮಾತ್ರ ಇ–ಕೆವೈಸಿ ಮಾಡಿಸಿಕೊಂಡಿದ್ದಾರೆ.

ಇ-ಕೆವೈಸಿ ಹೇಗೆ: 

ಇ–ಕೆವೈಸಿ ಎಂಬುದು ಬ್ಯಾಂಕುಗಳು ಅಥವಾ ವಿಮಾ ಸಂಸ್ಥೆಗಳು ಖಾತೆಗೆ ಹಣ ಹಾಕಲು ಪಡೆದುಕೊಳ್ಳುವ ನಿವಾಸಿ ದೃಢೀಕರಣದ ಮಾರ್ಗ. ವಿಳಾಸದ ದಾಖಲೆಗೆ ಬ್ಯಾಂಕ್‌ ಕೇಳುವ ದಾಖಲೆ.

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ₹ 6,000 ಪಡೆಯಲು ರೈತರು ಇ-ಕೆವೈಸಿ ಮಾಡುವುದು ಕಡ್ಡಾಯ. ರೈತರ ಖಾತೆಗೆ ₹ 2000 ದಂತೆ ಒಟ್ಟು ₹ 6000 ಜಮಾ ಆಗುತ್ತದೆ. 

ಅಂಡ್ರಾಯ್ಡ್ ಮೊಬೈಲ್‍ನಲ್ಲಿ http://pmkisan.gov.in ಜಾಲತಾಣಕ್ಕೆ ಭೇಟಿ ನೀಡಿ, ಅದರಲ್ಲಿನ  Farmers Corner ನ ಇ-ಕೆವೈಸಿ ಅವಕಾಶದಡಿ ತಮ್ಮ ಆಧಾರ್‌ ಸಂಖ್ಯೆ ಮತ್ತು ಮೊಬೈಲ್ ನಂಬರ್ ನಮೂದಿಸಿ, ತಮ್ಮ ಆಧಾರ್ ಕಾರ್ಡ್‌ನಲ್ಲಿ ನಮೂದಿಸಿರುವ ಮೊಬೈಲ್‍ಗೆ ಬರುವ ಒಟಿಪಿಯನ್ನು ಜಾಲತಾಣದಲ್ಲಿ ದಾಖಲಿಸಬೇಕು. ಅಂಡ್ರಾಯ್ಡ್ ಮೊಬೈಲ್‍ನಲ್ಲಿ ಇ-ಕೆವೈಸಿ ಆಗದಿದ್ದರೆ ತಮ್ಮ ಸಮೀಪದ (Citizen Service Centre) ನಾಗರಿಕ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕು. ಆಧಾರ್‌ ಸಂಖ್ಯೆಗೆ ಮೊಬೈಲ್ ಸಂಖ್ಯೆಯು ಜೋಡಣೆಯಾಗದೇ ಇದ್ದಲ್ಲಿ ಪೋಸ್ಟ್ ಆಫೀಸ್‍ನಲ್ಲಿ ಆಧಾರನೊಂದಿಗೆ ಮೊಬೈಲ್ ಸಂಖ್ಯೆ ಜೋಡಣೆ ಮಾಡಿಕೊಳ್ಳಬಹುದು.

‘ಇ–ಕೆವೈಸಿಯಲ್ಲಿ ಜಿಲ್ಲೆಯಲ್ಲಿ ಶೇ 75 ರಷ್ಟು ಪ್ರಗತಿ ಸಾಧಿಸಲಾಗಿದೆ. ಶೇ 100 ಗುರಿ ಸಾಧಿಸಲು ರೈತರು ಸಹಕರಿಸಬೇಕು. ಮರಣ ಹೊಂದಿದ ರೈತರ ಹೆಸರೂ ಕೃಷಿ ಸಮ್ಮಾನ್ ಯೋಜನೆಯಲ್ಲಿ ಸೇರಿದೆ. ಹಾಗಾಗಿ ಇ–ಕೆವೈಸಿ ಮಾಡಿಸಿಕೊಂಡ ರೈತರ ಸಂಖ್ಯೆಯಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಮೃತಪಟ್ಟ ರೈತರ ಹೆಸರನ್ನು ಕೈಬಿಟ್ಟು ಪಟ್ಟಿ ಪರಿಷ್ಕರಣೆ ಮಾಡಬೇಕಿದೆ. ಇದರಡಿ ಶೇ 100 ಗುರಿ ಸಾಧಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್‌ ಚಿಂತಾಲ್‌ ತಿಳಿಸಿದರು.

ಇನ್ನೂ ಇ–ಕೆವೈಸಿ ಮಾಡದ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಬೇಕು ಎಂದು ಅವರು ಮನವಿ ಮಾಡಿದರು.

ಬಾಕ್ಸ್‌..

ಜಿಲ್ಲೆಯ ಇ–ಕೈವೈಸಿ ಪ್ರಗತಿಯ ವಿವರ

ತಾಲ್ಲೂಕು–ನೋಂದಣಿ ಮಾಡಿಸಿಕೊಂಡವರು ಇ–ಕೆವೈಸಿ ಮಾಡಿಸಿಕೊಂಡವರು

ದಾವಣಗೆರೆ33,878→26,129

ಚನ್ನಗಿರಿ40,450→29,955

ಹರಿಹರ19,085→14,841

ಹೊನ್ನಾಳಿ30,286→23,647

ನ್ಯಾಮತಿ567→430

ಜಗಳೂರು25,370→17,383

Quote - ಜಿಲ್ಲೆಯಲ್ಲಿ ಇ–ಕೆವೈಸಿಯಲ್ಲಿ ಉತ್ತಮ ಪ್ರಗತಿ ಇದೆ. ಇ–ಕೆವೈಸಿಯ ಅವಧಿ ವಿಸ್ತರಣೆ ಮಾಡಲಾಗಿದೆ. ಬಾಕಿ ಉಳಿದಿರುವ ರೈತರು ವಿಳಂಬ ಮಾಡದೆ ಶೀಘ್ರ ಇದರಡಿ ನೋಂದಾಯಿಸಿಕೊಳ್ಳಬೇಕು. ಶ್ರೀನಿವಾಸ್‌ ಚಿಂತಾಲ್‌ ಜಂಟಿ ಕೃಷಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.