ADVERTISEMENT

ಕೆಎಚ್‌ಬಿ ಕಾಲೊನಿಗೆ ಶೀಘ್ರವೇ ಜಲಸಿರಿ ನೀರು: ಪೌರಾಯುಕ್ತರ ಭರವಸೆ

​ಪ್ರಜಾವಾಣಿ ವಾರ್ತೆ
Published 31 ಮೇ 2025, 14:46 IST
Last Updated 31 ಮೇ 2025, 14:46 IST
ಹರಿಹರದ ಕೆಎಚ್‌ಬಿ ಕಾಲೊನಿಗೆ ನಗರಸಭೆ ಪೌರಾಯುಕ್ತ ಸುಬ್ರಹ್ಮಣ್ಯ ಶ್ರೇಷ್ಠಿ ಹಾಗೂ ಅಧಿಕಾರಿಗಳು ಶನಿವಾರ ಭೇಟಿ ನೀಡಿ, ಮೂಲ ಸೌಕರ್ಯ ಪರಿಶೀಲಿಸಿದರು
ಹರಿಹರದ ಕೆಎಚ್‌ಬಿ ಕಾಲೊನಿಗೆ ನಗರಸಭೆ ಪೌರಾಯುಕ್ತ ಸುಬ್ರಹ್ಮಣ್ಯ ಶ್ರೇಷ್ಠಿ ಹಾಗೂ ಅಧಿಕಾರಿಗಳು ಶನಿವಾರ ಭೇಟಿ ನೀಡಿ, ಮೂಲ ಸೌಕರ್ಯ ಪರಿಶೀಲಿಸಿದರು   

ಹರಿಹರ: ನಗರದ ಕೆಎಚ್‌ಬಿ ಕಾಲೊನಿಗೆ ಶೀಘ್ರವೆ ದಿನದ 24 ಗಂಟೆಯೂ ‘ಜಲಸಿರಿ’ ಯೋಜನೆಯಡಿ ಕುಡಿಯುವ ನೀರು ಸರಬರಾಜು ಆರಂಭಿಸಲಾಗುವುದು ಎಂದು ನಗರಸಭೆ ಪೌರಾಯುಕ್ತ ಸುಬ್ರಹ್ಮಣ್ಯ ಶ್ರೇಷ್ಠಿ ಭರವಸೆ ನೀಡಿದರು.

ನಾಗರಿಕರ ಹಿತರಕ್ಷಣಾ ಸಮಿತಿಯ ಆಹ್ವಾನದ ಮೇರೆಗೆ ಶನಿವಾರ ಕಾಲೊನಿಗೆ ಭೇಟಿ ನೀಡಿದ್ದ ಅವರು, ಈಗಾಗಲೆ ನಗರದ ಬಹುತೇಕ ವಸತಿ ಪ್ರದೇಶಗಳಲ್ಲಿ ಜಲಸಿರಿ ನೀರಿನ ಸೌಲಭ್ಯ ಒದಗಿಸಲಾಗಿದೆ. ತಾಂತ್ರಿಕ ಅಡ್ಡಿಯಿಂದಾಗಿ ಈವರೆಗೆ ಕಾಲೊನಿಗೆ ಜಲಸಿರಿ ಕುಡಿಯುವ ನೀರು ಸರಬರಾಜು ಮಾಡಲಾಗಿಲ್ಲ. ಈ ಕುರಿತು ಇರುವ ಅಡ್ಡಿಗಳು ನಿವಾರಣೆಯಾಗುತ್ತಿದ್ದು, ಶೀಘ್ರವೇ ಕಾಲೊನಿ ಪ್ರದೇಶಕ್ಕೂ ಜಲಸಿರಿ ನೀರು ಬರಲಿದೆ ಎಂದರು.

ಇಲ್ಲಿನ ಹದಗೆಟ್ಟ ರಸ್ತೆಗಳ ಬಗ್ಗೆ ನಿವಾಸಿಗಳು ಗಮನ ಸೆಳೆದರು. ‘ಸದ್ಯಕ್ಕೆ ಗುಂಡಿಗಳನ್ನು ಮುಚ್ಚಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದರು.

ADVERTISEMENT

ಸರ್ಕಾರದಿಂದ ನಿರ್ಮಿತವಾದ ಈ ವಸತಿ ಪ್ರದೇಶದಲ್ಲಿ ಸಾಕಷ್ಟು ಜನರು ವಾಸಿಸುತ್ತಿದ್ದಾರೆ. ಇಲ್ಲಿನ ನಿವಾಸಿಗಳು ನಿಯಮ ಬದ್ಧವಾಗಿ ನಗರಸಭೆಗೆ ಕಂದಾಯ ಪಾವತಿ ಮಾಡುತ್ತಿದ್ದಾರೆ. ಆದರೆ ಉದ್ಯಾನ, ನೀರು, ರಸ್ತೆ, ಬೀದಿ ದೀಪ ಸೇರಿದಂತೆ ವಿವಿಧ ಮೂಲ ಸೌಕರ್ಯಗಳು ಇನ್ನೂ ಮರೀಚಿಕೆಯಾಗಿದೆ ಎಂದು ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಎಚ್.ನಿಜಗುಣ ಹೇಳಿದರು.

ಸಂಜೆಯ ನಂತರ ಕತ್ತಲಿನಿಂದಾಗಿ ಈ ಪ್ರದೇಶದಲ್ಲಿ ಸಂಚರಿಸಲು ಭಯವಾಗುತ್ತದೆ. ಬೆಳೆಯುತ್ತಿರುವ ವಸತಿ ಪ್ರದೇಶವಾಗಿರುವ ಕಾಲೊನಿಗೆ ನಗರಸಭೆಯಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಜಲಸಿರಿ ಎಇಇ ನವೀನ್ ಕುಮಾರ್, ನಗರಸಭೆ ಎಇಇ ವಿನಯ್ ಕುಮಾರ್ ಕೆ.ಎನ್., ಎಇ ಪ್ರಕಾಶ್, ನಾಗರಿಕ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳಾದ ಜಿ.ಕೆ.ಮಲ್ಲಿಕಾರ್ಜುನ್, ವೀರಣ್ಣ ಯಾದವಾಡ, ರುದ್ರೇಶ್ ಗೌಡ, ಶಿಕ್ಷಕ ಅಶೋಕ್, ಹೋಟಲ್ ರಾಮ್‌ಬಾಬು, ಸುರೇಶ್ ಹಂಚಿನಗೌಡ್ರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.