ADVERTISEMENT

ಬೀದಿಗೆ ಇಳಿದ ಭಯೋತ್ಪಾದಕರು: ಕೋಟಾ ಶ್ರೀನಿವಾಸ್ ಪೂಜಾರಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2024, 15:46 IST
Last Updated 3 ಮಾರ್ಚ್ 2024, 15:46 IST
ಕೋಟಾ ಶ್ರೀನಿವಾಸ್‌ ಪೂಜಾರಿ
ಕೋಟಾ ಶ್ರೀನಿವಾಸ್‌ ಪೂಜಾರಿ   

ದಾವಣಗೆರೆ: ‘ರಾಷ್ಟ್ರ ವಿರೋಧಿಗಳು, ಭಯೋತ್ಪಾದಕರು ಬೀದಿಗೆ ಇಳಿದು ಕೆಲಸ ಮಾಡುತ್ತಿದ್ದಾರೆ. ರಾಜಾರೋಷವಾಗಿ ಬಾಂಬ್ ಇಟ್ಟು ಹೋದರೂ, ಆರೋಪಿಯನ್ನು ಬಂಧಿಸದೇ ಸರ್ಕಾರ ಹೇಳಿಕೆಯನ್ನಷ್ಟೇ ನೀಡುತ್ತಿದೆ’ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಕಿಡಿಕಾರಿದರು. 

‘7 ಕೋಟಿ ಜನರ ಹೃದಯವಾದ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ. ಇದರಿಂದ ರಾಜ್ಯದ ಜನತೆಗೆ ನೋವಾಗಿದೆ. ವಿಧಿವಿಜ್ಞಾನ ಕೇಂದ್ರದಿಂದ ವರದಿ ಬಂದರೂ, ಅದನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಕಾಂಗ್ರೆಸ್‌ ನಾಯಕರು ಇಲ್ಲ’ ಎಂದು ನಗರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

‘ಪಾಕ್ ಪರ ಘೋಷಣೆ ವಿಚಾರ ಬಿಟ್ಟು ಉಳಿದ ಪ್ರಶ್ನೆಗೆ ಉತ್ತರ ಕೊಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ವಿಧಾನಸೌಧದಲ್ಲಿ ಈ ಘಟನೆ ನಡೆದಿದ್ದರೂ, ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಇವರು ಹೇಗೆ ಜನರನ್ನು ಕಾಪಾಡುತ್ತಾರೆ’ ಎಂದು ಪ್ರಶ್ನಿಸಿದರು.

ADVERTISEMENT

‘ಮಾತೆತ್ತಿದರೆ ಸಂವಿಧಾನದ ರಕ್ಷಣೆ ಎನ್ನುತ್ತಾರೆ. ತುರ್ತು ಪರಿಸ್ಥಿತಿ ಹೊರತುಪಡಿಸಿ ಯಾವತ್ತೂ ಸಂವಿಧಾನಕ್ಕೆ ಧಕ್ಕೆಯಾಗಿಲ್ಲ. ಆ ತುರ್ತು ಪರಿಸ್ಥಿತಿ ತಂದವರೇ ಕಾಂಗ್ರೆಸ್‌ನವರು. ಈಗ ಸಂವಿಧಾನಕ್ಕೆ ಧಕ್ಕೆ ಬಂದಿದೆ ಎಂದು ಸಂವಿಧಾನ ಜಾಗೃತಿ ಜಾಥಾ ಮಾಡುತ್ತಾರೆ. ದೇಶ ವಿರೋಧಿ ಕೃತ್ಯದಲ್ಲಿ ತೊಡಗಿಸಿಕೊಂಡವರನ್ನು ಪಕ್ಷದ ಭಾಷಣ ಮಾಡಲು ಕರೆಯುತ್ತಾರೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.