ADVERTISEMENT

ಕುಂದವಾಡ ಕೆರೆ: ಬಗೆಹರಿಯದದ ವಿವಾದ

ಪರಿಸರಕ್ಕೆ ತೊಂದರೆಯ ಬಗ್ಗೆ ಪರಿಸರಪ್ರೇಮಿಗಳ ಕಾಳಜಿ lಅಭಿವೃದ್ಧಿಯಾದ ಕೆರೆ ಅಭಿವೃದ್ಧಿಗೆ ಆಕ್ಷೇಪ

ಬಾಲಕೃಷ್ಣ ಪಿ.ಎಚ್‌
Published 1 ಫೆಬ್ರುವರಿ 2021, 5:29 IST
Last Updated 1 ಫೆಬ್ರುವರಿ 2021, 5:29 IST
ದಾವಣಗೆರೆಯ ಬರಿದಾದ ಕುಂದವಾಡ ಕೆರೆಯಲ್ಲಿ ನಡೆಯುತ್ತಿರುವ ಕಾಮಗಾರಿ ದೃಶ್ಯ    ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಬರಿದಾದ ಕುಂದವಾಡ ಕೆರೆಯಲ್ಲಿ ನಡೆಯುತ್ತಿರುವ ಕಾಮಗಾರಿ ದೃಶ್ಯ    ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಅಭಿವೃದ್ಧಿಗಾಗಿ ಕುಂದವಾಡ ಕೆರೆಯ ನೀರು ಖಾಲಿಯಾಗಿದ್ದರೂ, ವಿವಾದದ ಸೆಳೆ ತುಂಬಿ ಹೋಗಿದೆ.

ಕೆರೆಯಲ್ಲಿ ನೀರಿಲ್ಲದೇ ಮೀನು, ಜಲಚರಗಳು ಸಾಯುವುದು ಪರಿಸರ ಪ್ರೇಮಿಗಳ ಕರುಳು ಚುರುಕು ಅನ್ನಿಸಿದರೆ, ಆರು ತಿಂಗಳು ಕಳೆದರೆ ಎಲ್ಲವೂ ಸರಿಯಾಗಲಿದೆ ಎಂಬ ನಿರುಮ್ಮಳ ಭಾವದಲ್ಲಿ ಸ್ಮಾರ್ಟ್‌ಸಿಟಿ, ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಇದ್ದಾರೆ.

ಸ್ಮಾರ್ಟ್‌ ಸಿಟಿ ಯೋಜನೆಯಡಿ ₹ 15 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇಷ್ಟೊಂದು ದೊಡ್ಡ ಮೊತ್ತ ಬೇಕಿತ್ತಾ ಎಂದು ವಿರೋಧ ಪಕ್ಷದವರು ಪ್ರಶ್ನಿಸಿದರೆ, ಎರಡು ವರ್ಷಗಳ ಹಿಂದೆ ಅಂದರೆ ಬಿಜೆಪಿ ಅಧಿಕಾರಕ್ಕೆ ಬರುವ ಮೊದಲೇ ಅನುಮೋದನೆಗೊಂಡಿತ್ತು. ಒಂದು ವರ್ಷದ ಹಿಂದೆಯೇ ಟೆಂಡರ್‌ ಆಗಿತ್ತು ಎಂಬುದು ಆಡಳಿತ ಪಕ್ಷದ ಉತ್ತರವಾಗಿದೆ.
ಈ ನಡುವೆ ಕೆರೆ ಬರಿದಾಗಿದೆ. ಎಲ್ಲ ಮನವಿ, ಜಾಗೃತಿ, ಪ್ರತಿಭಟನೆಗಳ ಎಚ್ಚರಿಕೆಯ ನಡುವೆ ಕಾಮಗಾರಿ ಮುಂದುವರಿದಿದೆ.

ADVERTISEMENT

ಅಭಿವೃದ್ಧಿಗೆ ಬೇರೆ ಕೆರೆಗಳಿದ್ದವು: ಟಿ.ವಿ. ಸ್ಟೇಷನ್‌ ಕೆರೆ ಅಭಿವೃದ್ಧಿಯನ್ನು ಕಂಡಿಲ್ಲ. ವಾಯುವಿಹಾರಿಗಳಿಗೆ ಸರಿಯಾದ ಪಾಥ್‌ ಇಲ್ಲ. ಕೆರೆ ಅಭಿವೃದ್ಧಿ ಮಾಡಬೇಕು ಎಂಬ ನಿಜವಾದ ಕಳಕಳಿ ಇದ್ದಿದ್ದರೆ ಅದನ್ನು ಮಾಡಬಹುದಿತ್ತು. ಇತ್ತ ಬಾತಿಕೆರೆ ಇತ್ತು.

ಅಲ್ಲಿನ ನೀರು ಕಲುಷಿತವಾಗಿಯೇ ಇದೆ. ಅದನ್ನು ಸ್ವಚ್ಛಗೊಳಿಸಬಹುದಿತ್ತು. ಅಭಿವೃದ್ಧಿಯನ್ನೇ ಕಾಣದ ಈ ಕೆರೆ ಕಡೆ ಗಮನಹರಿಸಬಹುದಿತ್ತು.

ಅವೆಲ್ಲವನ್ನು ಬಿಟ್ಟು ಈಗಾಗಲೇ ಅಭಿವೃದ್ಧಿ ಹೊಂದಿರುವ ಗಿಡಮರಗಳಿಂದ ಹಸಿರುಮಯವಾಗಿರುವ ಸುಂದರವಾದ ಕುಂದವಾಡ ಕೆರೆಯನ್ನು ಯಾಕೆ ಅಭಿವೃದ್ಧಿ ಹೆಸರಲ್ಲಿ ಹಾಳುಗೆಡಹುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ ಎಂಬುದು ದಾವಣಗೆರೆ ವಿಶ್ವವಿದ್ಯಾಲಯದ ಸೂಕ್ಷ್ಮಜೀವ ವಿಜ್ಞಾನ ವಿಭಾಗದ ಪ್ರಾಧ್ಯಾಪಕ, ಪರಿಸರ ಪ್ರೇಮಿ, ಪಕ್ಷಿಪ್ರೇಮಿ ಡಾ.ಎಸ್. ಶಿಶುಪಾಲ
ಅವರ ಪ್ರಶ್ನೆ.

‘ಸೈಕಲ್‌ ಟ್ರ್ಯಾಕಿಂಗ್‌ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಕುಂದವಾಡ ಕೆರೆ ಬಳಿ ಬೇಡ. ರಿಂಗ್‌ ರಸ್ತೆಯಲ್ಲಿ ಸೈಕಲ್‌ ಪಾಥ್‌ ಮಾಡಲು ಅವಕಾಶ ಇದೆ. ಅಲ್ಲಿ ಮಾಡಲಿ. ಕೆರೆ ಏರಿಯಲ್ಲಿ ಸೈಕಲ್‌ ಪಾಥ್ ಮಾಡಿದರೆ ಬೈಕ್‌ಗಳು ಬರುವುದನ್ನು ಹೇಗೆ ತಡೆಯುತ್ತಾರೆ? ಹೂಳು ತುಂಬಿರುವುದರಿಂದ ಅದನ್ನು ತೆಗೆಸಬೇಕು ಎನ್ನುತ್ತಾರೆ. ಬೆಟ್ಟಗುಡ್ಡಗಳಿಂದ ನೀರು ಹರಿದು ಬರುವುದಿದ್ದರೆ ಮಣ್ಣು ಕೆರೆಯನ್ನು ಸೇರುತ್ತದೆ. ಆದರೆ ನದಿಯಿಂದ ಪೈಪ್‌ ಮೂಲಕ ನೀರು ಹಾಯಿಸಿ ಶೇಖರಿಸುವಾಗ ಹೂಳು ತುಂಬುವುದು ಹೇಗೆ? 20 ವರ್ಷಗಳಲ್ಲಿ ಇಲ್ಲದ ಹೂಳು ಈಗ ಎಲ್ಲಿಂದ ಬಂತು?

ಹೂಳೆತ್ತಿದರೆ ನೀರು ಸಂಗ್ರಹ ಹೆಚ್ಚಾಗುತ್ತದೆ ಎನ್ನುವುದು ಅಭಿವೃದ್ಧಿಕಾರರ ಇನ್ನೊಂದು ಸಮರ್ಥನೆ. ಒಂದು ಬಾರಿಯೂ ಕುಂದವಾಡ ಕೆರೆ ಪೂರ್ಣವಾಗಿ ಭರ್ತಿಯೇ ಆಗಿಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ವಿವರ
ನೀಡಿದರು.

ಕೊಳಚೆ ನೀರು ಕೆರೆಗೆ ಸೋರಿಕೆಯಾಗುವುದಿದ್ದರೆ ಮೊದಲು ಯುಜಿಡಿ ವ್ಯವಸ್ಥೆ ಸರಿಪಡಿಸಿ. ಕೆರೆಗೆ ಕೊಳಚೆ ನೀರು ಸೇರದಂತೆ ಕಾಮಗಾರಿ ನಡೆಸಲಿ. ಅದು ಬಿಟ್ಟು ಬಂಡ್‌ಗೆ ಕಾಂಕ್ರೀಟ್‌ ಹಾಕಿದರೆ, ಅಲ್ಲಿ ಇರುವ ನೂರಾರು ಸೂಕ್ಷ್ಮ ಜೀವಿಗಳು ಇಲ್ಲವಾಗುತ್ತವೆ.ಈಗಾಗಲೇ ಮೀನು, ಏಡಿ, ಆಮೆ, ಹಾವು, ಕಪ್ಪೆ ಸಹಿತ ಹಲವು ಜಲಚರಗಳು ಸತ್ತಿವೆ. ಕಣ್ಣಿಗೆ ಕಾಣದ ಜೀವಿಗಳು ಎಷ್ಟೋ ಕಣ್ಮರೆಯಾಗುತ್ತವೆ. ಪರಿಸರವನ್ನು ಗಣನೆಗೆ ತೆಗೆದುಕೊಳ್ಳದೇ ಮಾನವ ಕೇಂದ್ರಿತ ಅಭಿವೃದ್ಧಿ ಇದಕ್ಕೆ ಕಾರಣವಾಗುತ್ತಿದೆ. ಜೀವವೈವಿಧ್ಯದ ತಾಣವಾದ ಕೆರೆಯನ್ನು ಅಭಿವೃದ್ಧಿ ಹೆಸರಿನಲ್ಲಿ ನಾಶ ಮಾಡಲಾಗುತ್ತಿದೆ. ಎಂಬುದು ಪರಿಸರಪ್ರೇಮಿಗಳ ಅಳಲು.

ಪರಿಸರಕ್ಕೆ ಧಕ್ಕೆ ಆಗಲ್ಲ

ಕೆರೆಯ ಅಭಿವೃದ್ಧಿ ಮಾಡಬೇಕಿದ್ದರೆ ನೀರು ಖಾಲಿ ಮಾಡಲೇಬೇಕು. ಹಾಗಾಗಿ ಮಾಡಲಾಗಿದೆ. ಅದು ಶಾಶ್ವತವಾದುದಲ್ಲ. ಮೇ ಅಂತ್ಯದೊಳಗೆ ಕೆರೆಯೊಳಗಿನ ಕೆಲಸಗಳು ಮುಗಿಯಲಿವೆ. ಜೂನ್‌ನಿಂದ ನೀರು ತುಂಬಲಿದೆ. ಕೆರೆ ಏರಿ, ಇನ್ನಿತರ ಕೆಲಸಗಳಿಗೆ ಮತ್ತೆ ಆರು ತಿಂಗಳ ಅವಕಾಶ ಇರುತ್ತದೆ.

ಕೆರೆಯಲ್ಲಿ ಒಂದೇ ದಿಬ್ಬ ಅಥವಾ ದ್ವೀಪ ಇದೆ. ಮುಂದೆ ಎರಡು ಇರಲಿವೆ. ಇದ್ದ ಒಂದು ದ್ವೀಪದಲ್ಲಿಯೂ ಮುಳ್ಳುಗಳೇ ಇದ್ದವು. ಮುಂದೆ ಎರಡೂ ದ್ವೀಪಗಳಲ್ಲಿ ಹಣ್ಣಿನ ಗಿಡಗಳನ್ನು ನೆಡಲಾಗುವುದು. ಇದರಿಂದ ಹೆಚ್ಚು ಹಕ್ಕಿಗಳು ಬರಲಿವೆ.

ಕೆರೆಯನ್ನು ಪ್ಲಾಸ್ಟಿಕ್‌ ಕವರ್‌ ಮಾಡಲಾಗುತ್ತದೆ. ಸಿಮೆಂಟ್‌ನಿಂದ ಮಾಡಲಾಗುತ್ತದೆ ಎಂಬೆಲ್ಲ ಅಪಪ್ರಚಾರಗಳಿಗೆ ಉತ್ತರಿಸುವುದಿಲ್ಲ. ಕಾಮಗಾರಿ ನಡೆಯುವ ಸಮಯದಲ್ಲಿ ಅನಿವಾರ್ಯ ತೊಂದರೆಗಳನ್ನು ಬಿಟ್ಟರೆ ಬೇರೆ ಯಾವುದೇ ಪರಿಸರ ಮಾರಕ ಕೆಲಸಗಳು ಇಲ್ಲಿ ಆಗುವುದಿಲ್ಲ. ಕೆರೆ ಪರಿಸರ ಸ್ನೇಹಿಯಾಗಿಯೇ ಅಭಿವೃದ್ಧಿಯಾಗಲಿದೆ.

-ರವೀಂದ್ರ ಮಲ್ಲಾಪುರ,ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ

***

ಸ್ಮಾರ್ಟ್‌ ಅಂದರೆ ತಳುಕುಬಳುಕು ಅಲ್ಲ

ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ನಗರವನ್ನು ಸ್ಮಾರ್ಟ್‌ ಮಾಡುವುದು ಅಂದರೆ ತಳುಕುಬಳುಕು ಮಾಡುವುದಲ್ಲ. ಶುದ್ಧಗಾಳಿ, ಶುದ್ಧನೀರು, ವಾಸನೆ ಇಲ್ಲದ ಪರಿಸರ, ಮಾಲಿನ್ಯವಿಲ್ಲದ ವಾತಾವರಣ, ಜನರಿಗೆ ಯಾವುದೇ ತೊಂದರೆಯಾಗದಂತೆ ಮೂಲ ಸೌಕರ್ಯ ಒದಗಿಸುವುದೇ ಸ್ಮಾರ್ಟ್‌ ಕೆಲಸಗಳು. ದಾವಣಗೆರೆಗೆ ದೂಳುನಗರ, ಕಲುಷಿತ ನಗರ ಎಂಬ ಹೆಸರು ಇದೆ. ಅದನ್ನು ಹೋಗಲಾಡಿಸುವುದು ಸ್ಮಾರ್ಟ್‌ಸಿಟಿ ಕೆಲಸವಾಗಬೇಕು. ಅದರ ಬದಲು ಈಗಾಗಲೇ ಅಭಿವೃದ್ಧಿ ಹೊಂದಿರುವ ಕೆರೆಯನ್ನು ಅಭಿವೃದ್ಧಿಯ ಹೆಸರಲ್ಲಿ ಹಾಳು ಮಾಡುವುದು ಸ್ಮಾರ್ಟ್‌ಸಿಟಿ ಕೆಲಸವಲ್ಲ

-ಡಾ. ಎಸ್‌. ಶಿಶುಪಾಲ,ದಾವಣಗೆರೆ ವಿಶ್ವವಿದ್ಯಾಲಯದ ಸೂಕ್ಷ್ಮಜೀವ ವಿಜ್ಞಾನ ವಿಭಾಗದ ಪ್ರಾಧ್ಯಾಪಕ

***

ಅಭಿವೃದ್ಧಿ ಹೆಸರಲ್ಲಿ ಹಣ, ಪರಿಸರ ಹಾಳು

ಕುಡಿಯುವ ನೀರು ಸಂಗ್ರಹ ಮಾಡುವ ಕೆರೆಯ ಬಳಿ ಜನ ಸಂದಣಿ ಯಾಕೆ ಬೇಕು? ನೈಸರ್ಗಿಕ ಕೆರೆಯಲ್ಲಿ ಲೈಟ್‌ ಹಾಕಿ ಪಕ್ಷಿಗಳು ಸಹಿತ ಬೇರೆ ಜೀವಿಗಳು ಇರದಂತೆ ಯಾಕೆ ಮಾಡಬೇಕು? ಕೆರೆಯ ಬದುಗಳಲ್ಲಿ ಸಿಮೆಂಟ್‌ ಹಾಕಿ ಪ್ಯಾಕಿಂಗ್‌ ಮಾಡಿದರೆ ಕಲ್ಲಿನ ಸೆರೆಗಳಲ್ಲಿ ಬದುಕುವ ಜೀವಿಗಳು ನಾಶವಾಗುವುದಿಲ್ಲವೇ? ಎಲ್ಲ ಜೀವಿಗಳು ಒಂದು ಸರಪಳಿ. ಪರಿಸರಕ್ಕೆ ಪೂರಕವಲ್ಲದ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಾಗ ಈ ಸರಪಳಿ ತುಂಡಾಗುತ್ತದೆ. ಜೀವ ವೈವಿಧ್ಯದ ಅಸಮಾತೋಲನಕ್ಕೆ ಕಾರಣವಾಗುತ್ತದೆ. ಇದು ಎಲ್ಲ ಜೀವಿಗಳಿಗೆ ಪೂರಕವಾದ ಅಭಿವೃದ್ಧಿಯಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಹಣವನ್ನು ಮತ್ತು ಪರಿಸರವನ್ನು ಹಾಳು ಮಾಡುವ ಯೋಜನೆ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ.

-ಗಿರೀಶ್ ಎಸ್‌. ದೇವರಮನೆ,ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ

***

ನೀರು ಕೊರತೆಯಾಗಲ್ಲ

ರಾಜನಹಳ್ಳಿಯಿಂದ ಬಾತಿ ಕೆರೆಗೆ 20 ಎಂಎಲ್‌ಡಿ, ಕುಂದವಾಡ ಕೆರೆಗೆ 20 ಎಂಎಲ್‌ಡಿ ನೀರು ಪ್ರತಿದಿವಸ ಹರಿಸಲಾಗುತ್ತಿತ್ತು. ಈಗ ಕುಂದವಾಡ ಕೆರೆಯನ್ನು ಅಭಿವೃದ್ಧಿ ಮಾಡಲು ಮುಂದಾಗಿರುವುದರಿಂದ ಈ ಕೆರೆಗೆ ಬರುತ್ತಿದ್ದ 20 ಎಂಎಲ್‌ಡಿ ನೀರು ನೇರವಾಗಿ ನೀರು ಶುದ್ಧೀಕರಣ ಘಟಕಕ್ಕೆ ಹೋಗುತ್ತದೆ. ಹಿಂದೆ ಕೆರೆಗೆ ನೀರು ಹಾಯಿಸಿ ಮತ್ತೆ ಅಲ್ಲಿಂದ ನೀರು ಶುದ್ಧೀಕರಣ ಘಟಕಕ್ಕೆ ನೀರು ಹೋಗುತ್ತಿತ್ತು. ಕೆರೆಯ ನೀರು ಬತ್ತಿಸಿದ್ದರಿಂದ ಕೊಳವೆಬಾವಿಗಳಿಗೆ ತೊಂದರೆ ಎಂಬ ಮಾತಿದೆ. ತೂಬು ಇರುವ ಕಡೆಯಿಂದ ಕೆರೆಯ ಅರ್ಧಭಾಗದ ಅಂಗಳದ ಕೆಲಸ ಒಂದೇ ತಿಂಗಳ ಒಳಗೆ ಮುಗಿಯುತ್ತದೆ. ಅರ್ಧ ಕೆರೆ ತುಂಬಿಸಲಾಗುತ್ತದೆ. ಹಾಗಾಗಿ ಅಂತರ್ಜಲಕ್ಕೆ ತೊಂದರೆಯಾಗದು.

ಈ ಬಾರಿ ನೀರಿನ ತೊಂದರೆಯಾಗದು. ಕಡುಬೇಸಿಗೆಯಲ್ಲಿ ಬಳಕೆಗೆ 900 ಕೊಳವೆಬಾವಿಗಳಿವೆ. ಟಿ.ವಿ.ಸ್ಟೇಷನ್‌ ಕೆರೆಯಲ್ಲಿ ನೀರು ಸಂಗ್ರಹ ಇದೆ. ಭದ್ರಾ ನೀರು ಹರಿಸಲಾಗುತ್ತಿದೆ. ನೀರು ಖಾಲಿ ಮಾಡಿಸಿದ್ದರಿಂದ ಮೀನು ಸಹಿತ ಜಲಚರಗಳು ಸತ್ತಿವೆ ಎಂದು ಪರಿಸರ ಪ್ರೇಮಿಗಳಿಗೆ ನೋವಾಗಿದೆ. ಪ್ರತಿವರ್ಷ ಬೇಸಿಗೆ ಕಾಲದಲ್ಲಿ ಜಲಚರಗಳು ಸಾಯುತ್ತಿರುವ ಬಗ್ಗೆ ಮಾಧ್ಯಮಗಳೇ ವರದಿ ಮಾಡಿವೆ. ನೀರು ಕಲುಷಿತಗೊಳ್ಳುತ್ತಿದ್ದುದರಿಂದ ಅವು ಸಾಯುತ್ತಿದ್ದವು. ಕಾಮಗಾರಿಗಳು ನಡೆದ ಬಳಿಕ ಮುಂದೆ ಜಲಚರಗಳು ಸಾಯುವುದು ನಿಲ್ಲುತ್ತದೆ. ಎಲ್ಲಿಂದಲೋ ಬರುವ ಹಕ್ಕಿಗಳು ಕುಂದವಾಡ ಕೆರೆಯಲ್ಲಿ ಈ ಬಾರಿ ಗೂಡುಕಟ್ಟಲು ಸರಿಯಾದ ವಾತಾವರಣ ಇಲ್ಲದಿದ್ದರೆ ಪಕ್ಕದ ಕೆರೆಗಳಿಗೆ ಹೋಗುತ್ತವೆ. ಈಗಾಗಲೇ ಕೊಂಡಜ್ಜಿ ಕೆರೆ, ಹದಡಿಕೆರೆಗಳ ಸಹಿತ ಸುತ್ತಮುತ್ತಲ ಕೆರೆಗಳ ಬಳಿ ಹಕ್ಕಿಗಳು ಹೋಗಿರುವುದನ್ನು ಕಾಣಬಹುದು.

ನದಿ ನೀರು ಹಾಯಿಸುವಾಗ ಮಳೆ ನೀರಿನಷ್ಟು ಅಲ್ಲದೇ ಇದ್ದರೂ ಕಡಿಮೆ ಪ್ರಮಾಣದಲ್ಲಿ ಹೂಳು ಬರುತ್ತಲೇ ಇರುತ್ತದೆ. ಈಗಾಗಲೇ 3 ಅಡಿಯಷ್ಟು ಹೂಳು ತುಂಬಿದೆ. ಈ ಬಾರಿ ತೆಗೆದರೆ ಮುಂದೆ ಕನಿಷ್ಠ ಎರಡು ದಶಕ ಹೂಳೆತ್ತುವ ಕೆಲಸ ಇರುವುದಿಲ್ಲ.

–ವಿಶ್ವನಾಥ ಪಿ. ಮುದಜ್ಜಿ,ಆಯುಕ್ತ, ಮಹಾನಗರ ಪಾಲಿಕೆ

***

ಕಾಮಗಾರಿ ವಿವರ

* ಅಭಿವೃದ್ಧಿ ಪಡಿಸುವ ಕೆರೆ ಏರಿಯಒಟ್ಟು ಉದ್ದ 4.9 ಕಿಲೋಮೀಟರ್‌.

* ಕೆರೆ ಏರಿ ಎತ್ತರಿಸುವುದು,ವಿಸ್ತರಿಸುವುದು, ಒಳಮುಖದಇಳಿಜಾರಿನ ರಕ್ಷಣಕಾರ್ಯ(ರಿವಿಟ್‌ಮೆಂಟ್‌) ಕೈಗೊಳ್ಳುವುದು.

* ವಾಕಿಂಗ್‌ ಪಾಥ್‌ ರಚನೆ/ಸುಧಾರಣೆ, ಆರ್ಕಿಟೆಕ್ಚರಲ್‌ಫೆನ್ಸಿಂಗ್‌, ಹೂವಿನ ಹಾಸಿಗೆಗಳನಿರ್ಮಾಣ, ಸಾಧರಹಳ್ಳಿ ಕಲ್ಲಿನಆಸನಗಳು, ಇತರ ಆಲಂಕಾರಿಕಅಭಿವೃದ್ಧಿಗಳು.

* ಯು.ವಿ. ಸ್ಥಿರವಾದ ಪಾಲಿಥಿಲಿನ್‌ಡಸ್ಟ್‌ಬಿನ್‌ ಅಳವಡಿಕೆ

* ವಿದ್ಯುತ್‌ ಕಂಬ, ದೀಪ ಅಳವಡಿಕೆ,ಬೋರ್‌ವೆಲ್‌ ಅಳವಡಿಕೆ

* ಪರಿಸರ ಹೊರತಾದ ಪ್ರಶ್ನೆಗಳು

* ಕೆರೆ ಅಭಿವೃದ್ಧಿ ಮಾಡುವ ಮೊದಲು ಕೆರೆ ಪ್ರಾಧಿಕಾರ ಅನುಮತಿ ‍ಪಡೆಯಲಾಗಿದೆಯೇ? ಜೀವ ವೈವಿಧ್ಯ ಮಂಡಳಿ ಜತೆ ಚರ್ಚಿಸಲಾಗಿದೆಯೇ? ತಜ್ಞರ ಅಭಿಪ್ರಾಯ ಪಡೆಯಲಾಗಿದೆಯೇ?

* ನೀರು ತುಂಬಿರುವ ಕೆರೆಯ ಬಳಿ ಬೋರ್‌ವೆಲ್‌ ಯಾಕೆ?

* 2017, 18, 19, 20ರಲ್ಲಿ ಕೈಗೊಂಡಿರುವ ಅಭಿವೃದ್ಧಿಗಳ ನಾಮಫಲಕಗಳನ್ನು ಹಾಕಲಾಗಿತ್ತು. ಈ ಅಭಿವೃದ್ಧಿಗಳು ಕಾಮಗಾರಿಯ ಒಳಗೆ ಹೂತು ಹೋದವೇ?

* ₹10 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ವ್ಯಾಯಾಮ ಸಲಕರಣೆಗಳು ವ್ಯರ್ಥವಾದವೇ?

* ಕೆರೆಯ ಸುತ್ತಲೂ ಕುಳಿತುಕೊಳ್ಳಲು ಅಲ್ಲಲ್ಲಿ ಸಿಮೆಂಟ್‌ ಬೆಂಚ್‌ಗಳನ್ನು ಅಳವಡಿಸಲಾಗಿತ್ತು. ಮತ್ತೆ ಕಲ್ಲಿನ ಆಸನಗಳು ಯಾಕೆ?

* ಹೊಸ ಡಸ್ಟ್‌ಬಿನ್‌ ಅಳವಡಿಸುವುದಾದರೆ ಈಗಾಗಲೇ ಇದ್ದ ಡಸ್ಟ್‌ಬಿನ್‌ಗಳು ಎಲ್ಲಿ ಹೋದವು?

* ಗಾಲ್ಫ್‌, ಕ್ರಿಕೆಟ್‌ ಆಡುವಲ್ಲಿ ಹಸಿರು ಹಾಸು ಹಾಸಬೇಕು. ಇಲ್ಲಿ ಹಸಿರು ಹಾಸು ಯಾಕೆ ಬೇಕು?

* ಎಲ್ಲಕ್ಕಿಂತ ಮುಖ್ಯವಾದುದು... ಕಾಂಗ್ರೆಸ್‌ನವರು ಕೇಳುತ್ತಾ ಬಂದ ಪ್ರಶ್ನೆ... ₹ 2 ಕೋಟಿ, ₹ 3 ಕೋಟಿಗಳಲ್ಲಿ ಆಗಬಹುದಾದ ಅಭಿವೃದ್ಧಿಗೆ ₹ 15 ಕೋಟಿ ಯಾಕೆ ಬೇಕು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.