ದಾವಣಗೆರೆ: ತಾಲ್ಲೂಕಿನ ಹೊಸಕುಂದವಾಡ ಗ್ರಾಮದಲ್ಲಿ 3 ದಿನಗಳ ಹಸುಗೂಸು ಸೇರಿ 7 ಜನರು 24 ಗಂಟೆಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ.
ವಯೋಸಹಜ ಅನಾರೋಗ್ಯ, ಕಾಯಿಲೆ ಮತ್ತಿತರ ಕಾರಣಗಳಿಂದ 6 ಜನ ಗುರುವಾರ ಬೆಳಿಗ್ಗೆ ಹಾಗೂ ವೃದ್ಧರೊಬ್ಬರು ಬುಧವಾರ ರಾತ್ರಿ ಮೃತಪಟ್ಟಿದ್ದರಿಂದ ಗ್ರಾಮದ ಜನರಲ್ಲಿ ಆತಂಕ ಉಂಟಾಗಿತ್ತು.
ಎನ್.ಮಾರಮ್ಮ (70), ಈರಮ್ಮ (60), ಶಾಂತಮ್ಮ ( 65) ಭೀಮವ್ವ (70) ವಯೋಸಹಜ ಅನಾರೋಗ್ಯದಿಂದ ಬಳಲಿ ಮೃತಪಟ್ಟಿದ್ದಾರೆ. ಸಂತೋಷ (30), ಸುನೀಲ್ (25) ಹಾಗೂ ಮೂರು ದಿನದ ನವಜಾತ ಶಿಶು ಅನಾರೋಗ್ಯ ಕಾರಣ ಮೃತಪಟ್ಟಿದ್ದಾರೆ.
24 ಗಂಟೆ ಅವಧಿಯಲ್ಲಿ ಏಳು ಜನರು ಮೃತಪಟ್ಟ ಕಾರಣ ಅಂತ್ಯಕ್ರಿಯೆ ನಡೆಸಲು ಸ್ಮಶಾನ ಇಲ್ಲ ಎಂದು ದೂರಿ ಗ್ರಾಮಸ್ಥರು ಗುರುವಾರ ಮಧ್ಯಾಹ್ನ ಪ್ರತಿಭಟನೆ ನಡೆಸಿದರು.
ಇದುವರೆಗೂ ಪಕ್ಕದ ಹಳೆಕುಂದವಾಡ ಗ್ರಾಮದಲ್ಲಿ ಗ್ರಾಮಸ್ಥರು ಶವಸಂಸ್ಕಾರ ಮಾಡುತ್ತಿದ್ದರು. ಆದರೆ ಮಾರಿ ಜಾತ್ರೆ ಮಾಡುವ ವಿಚಾರದಲ್ಲಿ ಎರಡೂ ಗ್ರಾಮಗಳ ಜನರ ಮಧ್ಯೆ ಮನಸ್ತಾಪವಾಗಿತ್ತು. ಈ ಕಾರಣ ಹಳೆಕುಂದವಾಡದ ಜನರು ಪಕ್ಕದ ಊರಿನವರು ಸತ್ತಾಗ ಶವಸಂಸ್ಕಾರಕ್ಕೆ ಅವಕಾಶ ನಿರಾಕರಿಸಿದ್ದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ತಹಶೀಲ್ದಾರ್ ಹಾಗೂ ಅಧಿಕಾರಿಗಳು ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು.
‘7000ಕ್ಕೂ ಅಧಿಕ ಜನಸಂಖ್ಯೆ ಇರುವ ಗ್ರಾಮದಲ್ಲಿ ಸ್ಮಶಾನ ಇಲ್ಲ. ಗ್ರಾಮದಲ್ಲಿ ಸ್ಮಶಾನಕ್ಕಾಗಿ 3 ಎಕರೆ ಸ್ಥಳ ಗುರುತಿಸಲಾಗಿದೆ. ಅಲ್ಲಿ ಸ್ಮಶಾನ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಕ್ರಮ ಕೈಗೊಂಡಿಲ್ಲ’ ಎಂದು ಗ್ರಾಮದ ಮುಖಂಡ ಮಹೇಶಣ್ಣ ಜಿ., ಅಣ್ಣಪ್ಪ ಬಿ., ಶಿವಕುಮಾರ್ ದೂರಿದರು.
‘ಕುಂದವಾಡ ಗ್ರಾಮಕ್ಕೆ ಹಳೆಕುಂದವಾಡದಲ್ಲಿ ಈಗಾಗಲೇ 3 ಎಕರೆ ಸ್ಮಶಾನ ಭೂಮಿ ಇದೆ. ಗ್ರಾಮಸ್ಥರು ಹೆಚ್ಚುವರಿ ಸ್ಮಶಾನ ಜಾಗಕ್ಕಾಗಿ ಮನವಿ ಸಲ್ಲಿಸಿದ್ದಾರೆ. ಅದಕ್ಕೆ ಇನ್ನೊಂದು ಇಲಾಖೆಯ ಅನುಮತಿ ಬೇಕಿದೆ. ಅನುಮತಿ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಗ್ರಾಮದಲ್ಲಿ ಶವ ಸಂಸ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಅಂತ್ಯಸಂಸ್ಕಾರಕ್ಕೆ ಯಾರಾದರೂ ಅಡ್ಡಿಪಡಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಎಂ.ಬಿ. ಅಶ್ವಥ್ ಎಚ್ಚರಿಸಿದರು.
ಬಳಿಕ ಗ್ರಾಮಸ್ಥರು ಪಕ್ಕದ ಹಳೆಕುಂದವಾಡ ಗ್ರಾಮದ ಸ್ಮಶಾನದಲ್ಲಿ ಸಾಮೂಹಿಕ ಅಂತ್ಯಕ್ರಿಯೆ ನಡೆಸಿದರು.
‘ಗ್ರಾಮದ ಎಲ್ಲ ಏಳು ಜನ ಅನಾರೋಗ್ಯದಿಂದ ಸಾವಿಗೀಡಾಗಿದ್ದಾರೆ. ಬೇರೆ ಕಾರಣ ಇಲ್ಲ’ ಎಂದು ಡಿಎಚ್‌ಒ ಡಾ.ಎಸ್. ಷಣ್ಮುಖಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.