ADVERTISEMENT

ದಾವಣಗೆರೆ | ಕೆಲಸದ ಅವಧಿ ಏರಿಕೆಗೆ ವಿರೋಧ: ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಬೆಂಬಲ

ಸೇವೆಯಿಂದ ಹೊರಗುಳಿದ ಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 9:33 IST
Last Updated 9 ಜುಲೈ 2025, 9:33 IST
   

ದಾವಣಗೆರೆ: ಕೇಂದ್ರ ಸರ್ಕಾರ ರೈತ ಮತ್ತು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಹಾಗೂ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುತ್ತಿರುವುದನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ನೇತೃತ್ವದಲ್ಲಿ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.

ಕಾರ್ಮಿಕ ಸಂಘಟನೆಗಳು ರಾಷ್ಟ್ರವ್ಯಾಪ್ತಿ ಕರೆನೀಡಿರುವ ‘ಅಖಿಲ ಭಾರತ ಸಾರ್ವತ್ರಿಕ ಮುಷ್ಕರ’ಕ್ಕೆ ಜಿಲ್ಲೆಯಲ್ಲಿಯೂ ಬೆಂಬಲ ವ್ಯಕ್ತವಾಯಿತು. ಸೇವೆಯಿಂದ ಹೊರಗುಳಿದ ಕಾರ್ಮಿಕರು ಮತ್ತು ನೌಕರರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಮಿಕ ಕಾಯ್ದೆಗಳ ತಿದ್ದುಪಡಿಯನ್ನು ಪ್ರಬಲವಾಗಿ ವಿರೋಧಿಸಿದರು.

ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ ಕಾರ್ಮಿಕರು ಕೆಂಪು ಬಾವುಟ ಹಾಗೂ ಭಿತ್ತಿಚಿತ್ರಗಳನ್ನು ಪ್ರದರ್ಶಿಸಿದರು. ಕಾರ್ಮಿಕರ ಕೆಲಸದ ಅವಧಿಯನ್ನು

ADVERTISEMENT

ಅವೈಜ್ಞಾನಿಕವಾಗಿ ಹೆಚ್ಚಿಸಬಾರದು, ಕನಿಷ್ಠ ವೇತನ ಕಾಯ್ದೆ ಜಾರಿಗೆ ತರಬೇಕು ಎಂಬ ಘೋಷಣೆಗಳನ್ನು ಮೊಳಗಿಸಿದರು. ಜಯದೇವ ವೃತ್ತದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಹದಡಿ ರಸ್ತೆ, ಅಂಬೇಡ್ಕರ್‌ ವೃತ್ತ, ಎವಿಕೆ ಕಾಲೇಜು ರಸ್ತೆ, ರೇಣುಕ ಮಂದಿರ, ಪಿ.ಬಿ. ರಸ್ತೆ, ಗಾಂಧಿ ವೃತ್ತ ಹಾಗೂ ಅಶೋಕ ರಸ್ತೆಯಲ್ಲಿ ಸಾಗಿತು.

ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿದ ಮಾನವ ಬಂಧುತ್ವ ವೇದಿಕೆಯ ಪ್ರೊ.ಎ.ಬಿ.ರಾಮಚಂದ್ರಪ್ಪ, ‘ಒಂದು ಕಾಲದಲ್ಲಿ ದಾವಣಗೆರೆ ಕ್ರಾಂತಿಕಾರಿ ನೆಲವಾಗಿತ್ತು. ಇತ್ತೀಚಿನ ದಿನಗಳಲ್ಲಿ ಈ ನೆಲ ಕೇಸರಿಮಯವಾಗಿದೆ. ಇಂತಹ ಸಂದರ್ಭದಲ್ಲಿ ಮತ್ತೆ ಕಾರ್ಮಿಕರ ಹೋರಾಟ ಪ್ರಗತಿಯ ಸಂಕೇತವಾಗಿ ಕಾಣತೊಡಗಿದೆ’ ಎಂದರು.

‘ಕಾರ್ಮಿಕರ ಕೆಲಸದ ಅವಧಿಯನ್ನು ಅಂಬೇಡ್ಕರ್‌ 8 ಗಂಟೆಗೆ ನಿಗದಿಪಡಿಸಿದ್ದರು. ಇದು ಕಾರ್ಮಿಕರ ಸಂವಿಧಾನಬದ್ಧ ಹಕ್ಕು ಕೂಡ ಹೌದು. ಇತ್ತೀಚಿನ ಸರ್ಕಾರಗಳು ಕಾರ್ಮಿಕರ ಕೆಲಸದ ಅವಧಿಯನ್ನು 12 ಮತ್ತು 14 ಗಂಟೆಗೆ ಏರಿಕೆ ಮಾಡಲು ಮುಂದಾಗಿವೆ. ಇದು ಆಧುನಿಕ ಜೀತಪದ್ಧತಿಯಾಗುವ ಅಪಾಯವಿದ್ದು, ಕಾರ್ಮಿಕ ಕಾಯ್ದೆಯ ತಿದ್ದುಪಡಿಯನ್ನು ಸರ್ಕಾರ ಕೂಡಲೇ ಕೈಬಿಡಬೇಕು’ ಎಂದು ಆಗ್ರಹಿಸಿದರು.

‘ಭಾರತ ಪ್ರಕಾಶಿಸುತ್ತಿರುವುದು ಕಾರ್ಮಿಕರ ಬೆವರಿನಿಂದಲೇ ಹೊರತು ಬಂಡವಾಳಶಾಹಿಗಳಿಂದ ಅಲ್ಲ. ಪ್ರಗತಿ ಹೆಸರಿನಲ್ಲಿ ದೇಶದ ಸಂಪತ್ತನ್ನು ಮಾರಾಟ ಮಾಡಲಾಗುತ್ತಿದೆ. ರೈಲ್ವೆ, ವಿಮಾನ ಸೇರಿದಂತೆ 27 ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆ ಹಂತಹಂತವಾಗಿ ನಡೆಯುತ್ತಿದೆ. ಕಾರ್ಮಿಕರ ಶಕ್ತಿ ಅಡಗಿಸಲು ಈ ಹುನ್ನಾರ ನಡೆಸಲಾಗಿದೆ. ಸಾರ್ವಜನಿಕ ಉದ್ದಿಮೆಗಳು ಸರ್ಕಾರದ ಅಧೀನದಲ್ಲಿಯೇ ಉಳಿಯಬೇಕು’ ಎಂದು ಒತ್ತಾಯಿಸಿದರು.

‘ಒಂದೇ ಧರ್ಮ, ಏಕ ಸಂಸ್ಕೃತಿ ನೆಪದಲ್ಲಿ ಬಹುತ್ವ ನಾಶಪಡಿಸುವ ಪ್ರಯತ್ನಗಳು ನಡೆಯುತ್ತಿವೆ. ಬಂಡವಾಳಶಾಹಿಗಳ ಲಕ್ಷಾಂತರ ಕೋಟಿ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ. ಇದಕ್ಕೆ ಯಾವುದೇ ವಿರೋಧ ವ್ಯಕ್ತವಾಗಿಲ್ಲ. ಆದರೆ, ರೈತರು, ಕಾರ್ಮಿಕರು ಹಾಗೂ ಬಡವರ ಪರವಾದ ಯೋಜನೆಗಳನ್ನು ಟೀಕಿಸಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌ (ಸಿಐಟಿಯು), ಆಲ್‌ ಇಂಡಿಯಾ ಯುನೈಟೆಡ್‌ ಟ್ರೇಡ್‌ ಯೂನಿಯನ್‌ ಸೆಂಟರ್‌ (ಎಐಯುಟಿಯುಸಿ), ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಸಂಘಟನೆ, ಬ್ಯಾಂಕ್ ನೌಕರರ ಸಂಘ, ನೆರಳು ಬೀಡಿ‌ ಕಾರ್ಮಿಕರ ಒಕ್ಕೂಟ, ಕರ್ನಾಟಕ ಶ್ರನಿಕ‌ ಶಕ್ತಿ, ಔಷಧಿ‌ ಮಾರಾಟಗಾರರ ಸಂಘ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಒಕ್ಕೂಟ, ಆಶಾ ಕಾರ್ಯಕರ್ತೆಯರು, ಗ್ರಾಮೀಣ ಕೂಲಿ‌ ಕಾರ್ಮಿಕರ ಸಂಘಟನೆ, ಯುಬಿಡಿಟಿ‌ ಎಂಜಿನಿಯರಿಂಗ್ ಕಾಲೇಜು ಹೊರ ಗುತ್ತಿಗೆ‌ ನೌಕರರ‌ ಸಂಘ, ಗ್ರಾಮ‌ ಪಂಚಾಯಿತಿ ನೌಕರರ‌ ಸಂಘ,‌ ಕಟ್ಟಡ ಕಾರ್ಮಿಕರು, ಕಲ್ಲು ಒಡೆಯುವ ಕಾರ್ಮಿಕರ‌ ಸಂಘಗಳು ಮುಷ್ಕರದಲ್ಲಿ ಪಾಲ್ಗೊಂಡಿದ್ದವು. ವಿವಿಧ ಕಾರ್ಖಾನೆಗಳ ಕಾರ್ಮಿಕರು ಕೂಡ ಕೆಲಸದಿಂದ ಹೊರಗುಳಿದು ಮುಷ್ಕರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.