ADVERTISEMENT

ಹುಬ್ಬಳ್ಳಿ: ಕಾರ್ಮಿಕರಿಗೆ 18 ತಾಸು ಜಲ ದಿಗ್ಬಂಧನ

ಆಗಸ್ಟ್‌ ಮಳೆಯಲ್ಲೂ ಅದೇ ಜಾಗದಲ್ಲಿ ಸಿಲುಕಿದ್ದರು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2019, 6:53 IST
Last Updated 22 ಅಕ್ಟೋಬರ್ 2019, 6:53 IST
ಉಪ ವಿಭಾಗಾಧಿಕಾರಿ ಮಹಮ್ಮದ್ ಜುಬೇರ್ ಅವರು, ರಕ್ಷಣೆಗೊಳಗಾದ ಕಾರ್ಮಿಕರೊಂದಿಗೆ ಮಾತನಾಡಿದರು. ತಹಶೀಲ್ದಾರ್ ಪ್ರಕಾಶ ನಾಶಿ, ಜೆಡಿಎಸ್ ಮುಖಂಡ ಎನ್‌.ಎಚ್. ಕೋನರಡ್ಡಿ, ಡಿವೈಎಸ್ಪಿ ರಾಮನಗೌಡ ಹಟ್ಟಿ ಇದ್ದಾರೆ
ಉಪ ವಿಭಾಗಾಧಿಕಾರಿ ಮಹಮ್ಮದ್ ಜುಬೇರ್ ಅವರು, ರಕ್ಷಣೆಗೊಳಗಾದ ಕಾರ್ಮಿಕರೊಂದಿಗೆ ಮಾತನಾಡಿದರು. ತಹಶೀಲ್ದಾರ್ ಪ್ರಕಾಶ ನಾಶಿ, ಜೆಡಿಎಸ್ ಮುಖಂಡ ಎನ್‌.ಎಚ್. ಕೋನರಡ್ಡಿ, ಡಿವೈಎಸ್ಪಿ ರಾಮನಗೌಡ ಹಟ್ಟಿ ಇದ್ದಾರೆ   

ಹುಬ್ಬಳ್ಳಿ: ತಾಲ್ಲೂಕಿನ ಇಂಗಳಹಳ್ಳಿ ಮತ್ತು ಶಿಶುವಿನಹಳ್ಳಿ ನಡುವೆ ಹರಿಯುವ ಯರನಹಳ್ಳದ ಪ್ರವಾಹದಲ್ಲಿ ರಾತ್ರಿಯಿಡೀ ಸಿಲುಕಿದ್ದ ಕಾರ್ಮಿಕರನ್ನು 18 ತಾಸುಗಳ ಬಳಿಕ, ರಕ್ಷಣೆ ಮಾಡಲಾಯಿತು.

ಆಂಧ್ರಪ್ರದೇಶದ ವಿಶಾಖಪಟ್ಟಣದ ಎಂ. ಶಿವ, ಟಿ. ರಾಜೇಶ್, ಕೆ. ಕಿಶೋರ್, ಟಿ. ಮೋಹನ್, ಡಿ. ಚಿನ್ನಾ, ವಿ. ಸೀನು, ಅರ್ಜುನ್, ವಿ. ಅಪ್ಪಣ್ಣ, ಪೆದ್ದಬಾಬು ಹಾಗೂ ಟಿ. ಜಾನ್ ಪ್ರವಾಹದಿಂದ ಪಾರಾದವರು. ಎರಡೂ ಗ್ರಾಮಗಳ ಮಧ್ಯೆ ಹರಿಯವ ಯರನಹಳ್ಳಕ್ಕೆ ನಿರ್ಮಿಸುತ್ತಿರುವ ಸೇತುವೆ ನಿರ್ಮಾಣ ಕೆಲಸಕ್ಕಾಗಿ ಬಂದಿದ್ದ ಇವರು, ಸ್ಥಳದಲ್ಲಿದ್ದ ಮಣ್ಣಿನ ದಿಬ್ಬದಲ್ಲಿ ಶೆಡ್‌ ನಿರ್ಮಿಸಿಕೊಂಡು ತಂಗಿದ್ದರು.

ಎರಡು ದಿನಗಳಿಂದ ಸುರಿದ ಮಳೆಗೆ ಹಳ್ಳದ ಹರಿವಿನ ಮಟ್ಟ ಹೆಚ್ಚಾಗಿತ್ತು. ಮಳೆ ನಿಲ್ಲುವವರೆಗೆ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ, ತಾಲ್ಲೂಕು ಆಡಳಿತ ನೀಡಿದ್ದ ಸೂಚನೆಗೆ ಕಿವಿಗೊಡದ ಕಾರ್ಮಿಕರು ಅಲ್ಲೇ ನೆಲೆಸಿದ್ದರು. ಭಾನುವಾರ ರಾತ್ರಿ ಮಳೆ ಹೆಚ್ಚಾದಾಗ, ಇವರಿದ್ದ ಜಾಗ ಜಲಾವೃತಗೊಂಡಿತ್ತು.

ADVERTISEMENT

ವಿಷಯ ತಿಳಿದು ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಗ್ರಾಮೀಣ ತಹಶೀಲ್ದಾರ್ ಪ್ರಕಾಶ ನಾಶಿ, ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿಗೆ ಮಾಹಿತಿ ನೀಡಿದರು. ಬೇರೆ ಊರಿನಲ್ಲಿ ರಕ್ಷಣಾ ಕಾರ್ಯಾಚರಣೆ ಮುಗಿಸಿ, ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಮಧ್ಯಾಹ್ನ 2 ಗಂಟೆಯಾಯಿತು. ಇದೇ ವೇಳೆ ಆರಂಭವಾದ ಮಳೆ ಒಂದು ತಾಸು ಸುರಿಯಿತು. ಮಳೆ ಅಬ್ಬರ ಸ್ವಲ್ಪ ತಗ್ಗಿದ ಬಳಿಕ, ಒಬಿಎಂ ಬೋಟ್ ಮೂಲಕ ಕಾರ್ಮಿಕರನ್ನು ರಕ್ಷಿಸಿದರು.

ಬಾಗಲಕೋಟೆಯಿಂದ ಬೋಟ್‌ನೊಂದಿಗೆ ಬಂದಿದ್ದ 7 ಸಿಬ್ಬಂದಿ ಸೇರಿದಂತೆ 18ಕ್ಕೂ ಹೆಚ್ಚು ಮಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಎಸ್ಪಿ ವರ್ತಿಕಾ ಕಟಿಯಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಉಪ ವಿಭಾಗಾಧಿಕಾರಿ ಮಹಮ್ಮದ್ ಜುಬೇರ್, ಡಿವೈಎಸ್ಪಿ ರಾಮನಗೌಡ ಹಟ್ಟಿ, ಗ್ರಾಮೀಣ ಠಾಣೆ ಇನ್‌ಸ್ಪೆಕ್ಟರ್ ಎಸ್‌.ಬಿ. ಮಾಳಗೊಂಡ, ಅಗ್ನಿಶಾಮಕ ಮತ್ತು ತುರ್ತು ಸೇವೆ ಅಧಿಕಾರಿಗಳಾದ ಈಶ್ವರ ನಾಯ್ಕ, ಶ್ರೀಕಾಂತ್ ಹಾಗೂ ವಿನಾಯಕ ಸ್ಥಳದಲ್ಲಿದ್ದು ಕಾರ್ಯಾಚರಣೆಯ ಮೇಲ್ವಿಚಾರಣೆ ನೋಡಿಕೊಂಡರು.

ಇದೇ ಮೊದಲಲ್ಲ:

ಆಗಸ್ಟ್‌ನಲ್ಲಿ ಸುರಿದ ಮಳೆಯಲ್ಲೂ ಯರನಹಳ್ಳ ಉಕ್ಕಿ ಹರಿದಿತ್ತು. ಆಗಲೂ ಇದೇ ಸ್ಥಳದಲ್ಲಿ ನೀರಿನಲ್ಲಿ ಸಿಲುಕಿದ್ದ ಬಿಹಾರ ಮೂಲದ 10 ಕಾರ್ಮಿಕರನ್ನು ಎನ್‌ಡಿಆರ್‌ಎಫ್ ಸಿಬ್ಬಂದಿ ರಕ್ಷಿಸಿದ್ದರು.

ಗುತ್ತಿಗೆದಾರನ ವಿರುದ್ಧ ಕ್ರಮ

‘ಮಳೆಯಿಂದಾಗಿ ಯರನಹಳ್ಳ ಎರಡನೇ ಸಲ ಉಕ್ಕಿ ಹರಿಯುತ್ತಿದೆ. ಹಿಂದೆಯೂ ಇಲ್ಲಿ ಸಿಲುಕಿದ್ದ ಕಾರ್ಮಿಕರನ್ನು ರಕ್ಷಿಸಲಾಗಿತ್ತು. ಇದರಿಂದ ಬುದ್ಧಿ ಕಲಿಯದ ಸೇತುವೆ ಗುತ್ತಿಗೆದಾರ, ಜೋರು ಮಳೆಯಾದರೂ ಕಾರ್ಮಿಕರನ್ನು ಸ್ಥಳಾಂತರಿಸಿಲ್ಲ. ಹಾಗಾಗಿ, ಆತನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಹಳ್ಳದ ಪ್ರವಾಹ ಇಳಿಯುವವರಿಗೆ ಕಾರ್ಮಿಕರಿಗೆ ಬೇರೆ ಕಡೆ ಇರಲು ವ್ಯವಸ್ಥೆ ಮಾಡಲಾಗುವುದು’ ಎಂದು ಉಪ ವಿಭಾಗಾಧಿಕಾರಿ ಮಹಮ್ಮದ್ ಜುಬೇರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೇತುವೆ ನಿರ್ಮಾಣ ಸ್ಥಳದಲ್ಲಿರುವ ಶೆಡ್‌ಗಳನ್ನು ತೆರವುಗೊಳಿಸಿ, ಸುರಕ್ಷಿತ ಸ್ಥಳದಲ್ಲಿ ಅವರಿಗೆ ಇರಲು ವ್ಯವಸ್ಥೆ ಮಾಡುವಂತೆ ಗುತ್ತಿಗೆದಾರನಿಗೆ ಸೂಚಿಸಲಾಗುವುದು’ ಎಂದು ಹೇಳಿದರು.

ಒಂದು ಕಡೆಯಷ್ಟೇ ಪರಿಹಾರ ಕೇಂದ್ರ

ಹುಬ್ಬಳ್ಳಿ ಗ್ರಾಮೀಣ ತಾಲ್ಲೂಕಿನ ಹಲವೆಡೆ ಮನೆಗಳು ಕುಸಿದು, ಕೆಲ ಗ್ರಾಮಗಳು ಜಲಾವೃತಗೊಂಡಿವೆ. ಆದರೆ, ಸದ್ಯ ಹೆಬಸೂರಿನಲ್ಲಿ ಮಾತ್ರ ಪರಿಹಾರ ಕೇಂದ್ರ ತೆರೆಯಲಾಗಿದೆ. ಉಳಿದೆಡೆಯ ಸಂತ್ರಸ್ತರು ದೇವಸ್ಥಾನ ಹಾಗೂ ಊರಿನ ಸಮುದಾಯ ಭವನಗಳನ್ನೇ ತಾತ್ಕಾಲಿಕ ಆಶ್ರಯ ತಾಣಗಳನ್ನಾಗಿ ಮಾಡಿಕೊಂಡಿದ್ದಾರೆ.

‘ಹೆಬಸೂರಿನ ಕೆರೆ ಕೋಡಿ ಬಿದ್ದಿರುವುದರಿಂದ ಹಲವು ಮನೆಗಳಿಗೆ ನೀರು ನುಗ್ಗಿದೆ. ಹಾಗಾಗಿ, ಅಲ್ಲಿ ಪರಿಹಾರ ಕೇಂದ್ರ ತೆರೆದು, ತಾತ್ಕಾಲಿಕವಾಗಿ ಆಶ್ರಯ ಕಲ್ಪಿಸಲು ವ್ಯವಸ್ಥೆ ಮಾಡಲಾಗಿದೆ’ ಎಂದು ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್ ಪ್ರಕಾಶ ನಾಶಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.