ADVERTISEMENT

ಆರೋಗ್ಯ ಕೇಂದ್ರದಲ್ಲಿ ಸೌಲಭ್ಯ, ವೈದ್ಯರ ಕೊರತೆ

ಸಂತೇಬೆನ್ನೂರು ಆರೋಗ್ಯ ಕೇಂದ್ರ: ಅರಿವಳಿಕೆ, ಮಕ್ಕಳ ತಜ್ಞ , ಫಾರ್ಮಸಿಸ್ಟ್ ಹುದ್ದೆ ಖಾಲಿ

ಕೆ.ಎಸ್.ವೀರೇಶ್ ಪ್ರಸಾದ್
Published 1 ಏಪ್ರಿಲ್ 2022, 5:35 IST
Last Updated 1 ಏಪ್ರಿಲ್ 2022, 5:35 IST
ಸಂತೇಬೆನ್ನೂರಿನ ಸಮುದಾಯ ಆರೋಗ್ಯ ಕೇಂದ್ರ
ಸಂತೇಬೆನ್ನೂರಿನ ಸಮುದಾಯ ಆರೋಗ್ಯ ಕೇಂದ್ರ   

ಸಂತೇಬೆನ್ನೂರು: ಇಲ್ಲಿ ಎಲ್ಲವೂ ಇವೆ. ಆದರೆ ಎಲ್ಲಕ್ಕಿಂತಲೂ ಮುಖ್ಯವಾಗಿ ಬೇಕಾಗಿರುವ ವೈದ್ಯರದ್ದೇ ಕೊರತೆ ಎದ್ದು ಕಾಣುತ್ತದೆ.

ಇದು ಸಂತೇಬೆನ್ನೂರು ಸಮುದಾಯ ಆರೋಗ್ಯ ಕೇಂದ್ರದ ಸ್ಥಿತಿಗತಿ.

ವಿಶಾಲ ಪರಿಸರದಲ್ಲಿ ಬೃಹತ್ ಕಟ್ಟಡಗಳ ಸಮುಚ್ಚಯದಲ್ಲಿ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ ಗುಣಮಟ್ಟದ ನಿರ್ವಹಣೆಗಾಗಿ ಸಾರ್ವಜನಿಕರ ಪ್ರಶಂಸೆ ಗಳಿಸಿದೆ. ಸದಾ ಸ್ವಚ್ಛತೆ ಕಾಪಾಡಿರುವ ಕಾರಿಡಾರ್, ವಾರ್ಡ್, ಚಿಕಿತ್ಸಾ ಕೊಠಡಿಗಳು ರೋಗಿಗಳಿಗೆ ಕಿರಿಕಿರಿ ಉಂಟು ಮಾಡುವುದಿಲ್ಲ. ಮಂಜೂರಾದ ಕೆಲ ವೈದ್ಯರ ಹುದ್ದೆಗಳು ಭರ್ತಿ ಆದಲ್ಲಿ ವ್ಯವಸ್ಥಿತ ಚಿಕಿತ್ಸೆ ಸಾಧ್ಯವಾಗಲಿದೆ.

ADVERTISEMENT

ಮಂಜೂರಾದ ವೈದ್ಯ ಹುದ್ದೆಗಳಲ್ಲಿ ಅರಿವಳಿಕೆ ತಜ್ಞ, ಮಕ್ಕಳ ತಜ್ಞ ಹಾಗೂ ಒಂದು ಫಾರ್ಮಸಿಸ್ಟ್ ಹುದ್ದೆ ಖಾಲಿ ಇವೆ. ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗುತ್ತಿದೆ. ಅದಕ್ಕಾಗಿ ತುರ್ತಾಗಿ ಅರಿವಳಿಕೆ ತಜ್ಞರು ಹುದ್ದೆ ಭರ್ತಿ ಆಗಬೇಕು. ಅಂಬುಲೆನ್ಸ್ 18 ವರ್ಷದಷ್ಟು ಹಳೆಯದು. ಹಾಗಾಗಿ ಹೊಸ ಆಂಬುಲೆನ್ಸ್ ಮಂಜೂರಾಗಬೇಕು ಎನ್ನುತ್ತಾರೆ ಹಿರಿಯ ವೈದ್ಯೆ ಡಾ.ಸುಧಾ.

ಸದ್ಯ ನಾಲ್ಕು ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೊರ ರೋಗಿ ತಪಾಸಣಾ ವೈದ್ಯ, ಸ್ತ್ರೀರೋಗ ತಜ್ಞೆ, ದಂತ ವೈದ್ಯೆ ಹಾಗೂ ಆಯುಷ್ ವೈದ್ಯೆ. ಸುಸಜ್ಜಿತ ಆಧುನಿಕ ಎಕ್ಸ್ ರೇ ಘಟಕ, ದಂತ ಚಿಕಿತ್ಸಾ ಘಟಕ, ಪ್ರಯೋಗಾಲಯ, ಔಷಧ ವಿತರಣಾ ಕೇಂದ್ರ, ಕೋವಿಡ್ ಪರೀಕ್ಷಾ ಕೇಂದ್ರ, ಸುಸಜ್ಜಿತ ಶಸ್ತ್ರ ಚಿಕಿತ್ಸಾ ಕೊಠಡಿ ಹಾಗೂ ಇಸಿಜಿ ಘಟಕ ಸಾರ್ವಜನಿಕರ ಸೇವೆಗೆ ಲಭ್ಯ ನಿಯಮಿತವಾಗಿ ಸಂತಾನ ಹರಣ ಶಸ್ತ್ರಚಿಕಿತ್ಸೆ ಹಾಗೂ ಟ್ಯುಬೊಕ್ಟಮಿ ಕ್ಯಾಂಪ್ ನಡೆಸಲಾಗುತ್ತದೆ. 30 ಹಾಸಿಗೆಗಳ ವಿಶಾಲ ವಾರ್ಡ್‌ಗಳು ಒಳರೋಗಿಗಳಿಗೆ ಆರೋಗ್ಯ ಪೂರ್ಣ ವಾತಾವರಣ ಸೃಷ್ಟಿಸಿವೆ. ತುತ್ತು ಚಿಕಿತ್ಸಾ ಘಟಕ ಸದಾ ಕರ್ತವ್ಯ ನಿರ್ವಹಿಸುತ್ತಿದೆ. ರಾತ್ರಿ ವೇಳೆ ಬರುವ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

ಗ್ರಾಮದಲ್ಲಿ ಆರೋಗ್ಯ ವೃದ್ಧಿಗೆ ಕ್ಷಯ ರೋಗಿಗಳ ತಪಾಸಣೆ ಹಾಗೂ ನಿರಂತರ ಔಷಧ ಪೂರೈಕೆ. ಕ್ಯಾನ್ಸರ್ ಜಾಗೃತಿ ಅಭಿಯಾನ, ಕುಷ್ಠ ರೋಗ ಜಾಗೃತಿ ಕಾರ್ಯಕ್ರಮ, ಮಲೇರಿಯಾ, ಡೆಂಗಿ ಹಾಗೂ ಸ್ತನ ಕ್ಯಾನ್ಸರ್‌ಗಳ ಬಗ್ಗೆ ವೈದ್ಯರು, ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರ ಮೂಲಕ ಅರಿವು ಮೂಡಿಸಲಾಗುತ್ತಿದೆ ಎನ್ನುತ್ತಾರೆ ಡಾ.ಸುಧಾ.

ಸುತ್ತಮುತ್ತಲ ಗ್ರಾಮ ಹಾಗೂ ಪಕ್ಕದ ಹೊಳಲ್ಕೆರೆ ತಾಲ್ಲೂಕಿನ ಗ್ರಾಮಗಳಿಂದ ಹೊರ ರೋಗಿಗಳು ಬರುತ್ತಾರೆ. ನಿತ್ಯ 150ರಿಂದ 200 ರೋಗಿಗಳಿಗೆ ಉಚಿತ ಚಿಕಿತ್ಸೆ ಹಾಗೂ ಔಷಧ ಕೊಡಲಾಗುತ್ತದೆ. ಈಚೆಗೆ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಸೌಲಭ್ಯ ಕೇಂದ್ರ ವಿಸ್ತರಣೆ ಆಗಿದೆ. ಸಾರ್ವಜನಿಕರು ಸದುಪಯೋಗ ಪಡೆಯಬೇಕು ಎನ್ನುತ್ತಾರೆ ಡಾ. ಸವಿನಯ್.

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು, ಶುಶ್ರೂಶಕರು ಹಾಗೂ ಸಿಬ್ಬಂದಿ ಉತ್ತಮ ಸೇವೆ ಕೊಡುತ್ತಿದ್ದಾರೆ. ರಾತ್ರಿ ಪಾಳಯದಲ್ಲಿ ಕರ್ತವ್ಯ ನಿರ್ವಹಿಸಲು ವೈದ್ಯರ ಅವಶ್ಯಕತೆ ಇದೆ ಎನ್ನುತ್ತಾರೆ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಕೆ. ಬಸವರಾಜ್.

ಗ್ರಾಮದಲ್ಲಿ ಆರೋಗ್ಯ ವೃದ್ಧಿಗೆ ತಪಾಸಣೆ ಹಾಗೂ ನಿರಂತರ ಔಷಧ ಪೂರೈಕೆ ಮಾಡುತ್ತಿದ್ದೇವೆ. ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರ ಮೂಲಕ ಅರಿವು ಮೂಡಿಸಲಾಗುತ್ತಿದೆ.

ಡಾ.ಸುಧಾ, ಹಿರಿಯ ವೈದ್ಯರು, ಸಮುದಾಯ ಆರೋಗ್ಯ ಕೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.