ADVERTISEMENT

ಗೋಡೆ ಗ್ರಾಮದ ಕೆರೆ ಒತ್ತುವರಿ ತೆರವು: ತಾಲ್ಲೂಕು ಆಡಳಿತದಿಂದ ಯಶಸ್ವಿ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 6:59 IST
Last Updated 14 ಜನವರಿ 2026, 6:59 IST
ಜಗಳೂರು ತಾಲ್ಲೂಕಿನ ಗೋಡೆ ಗ್ರಾಮದ ಕೆರೆ ಪ್ರದೇಶದಲ್ಲಿ ಒತ್ತುವರಿಯಾಗಿದ್ದ 20 ಎಕರೆ ಪ್ರದೇಶವನ್ನು ತಾಲ್ಲೂಕು ಆಡಳಿತದಿಂದ ಮಂಗಳವಾರ ತೆರವುಗೊಳಿಸಲಾಯಿತು
ಜಗಳೂರು ತಾಲ್ಲೂಕಿನ ಗೋಡೆ ಗ್ರಾಮದ ಕೆರೆ ಪ್ರದೇಶದಲ್ಲಿ ಒತ್ತುವರಿಯಾಗಿದ್ದ 20 ಎಕರೆ ಪ್ರದೇಶವನ್ನು ತಾಲ್ಲೂಕು ಆಡಳಿತದಿಂದ ಮಂಗಳವಾರ ತೆರವುಗೊಳಿಸಲಾಯಿತು   

ಜಗಳೂರು: 30 ವರ್ಷಗಳಿಂದ ಒತ್ತುವರಿ ಮಾಡಲಾಗಿದ್ದ ತಾಲ್ಲೂಕಿನ ಗೋಡೆ ಗ್ರಾಮದ ಕೆರೆಯ ಪಕ್ಕದ 20 ಎಕರೆ ಪ್ರದೇಶವನ್ನು ತಾಲ್ಲೂಕು ಆಡಳಿತದಿಂದ ಮಂಗಳವಾರ ತೆರವುಗೊಳಿಸಲಾಯಿತು. 

ಗೋಡೆ ಗ್ರಾಮದ ಕೆರೆಗೆ ಹೊಂದಿಕೊಂಡಂತಿರುವ ಫಲವತ್ತಾದ ಭೂಮಿಯಲ್ಲಿ 15 ಜನ ಒತ್ತುವರಿದಾರರರು ಅಕ್ರಮವಾಗಿ ಅಡಿಕೆ, ಬಾಳೆ ಮತ್ತು ತೆಂಗಿನ ತೋಟಗಳನ್ನು ಮಾಡಿಕೊಂಡಿದ್ದರು. ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ನೇತೃತ್ವದಲ್ಲಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಇಡೀ ದಿನ ಕಾರ್ಯಾಚರಣೆ ನಡೆಸಲಾಯಿತು. 

‘ಗೋಡೆ ಗ್ರಾಮದ ಕೆರೆ ಪಕ್ಕದಲ್ಲಿ ಸರ್ಕಾರಿ ಜಮೀನನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದ್ದ 15 ಒತ್ತುವರಿದಾರರಿಗೆ ಕೂಡಲೇ ತೆರವುಗೊಳಿಸಿಕೊಳ್ಳುವಂತೆ ನೋಟಿಸ್ ನೀಡಿದ್ದೆವು. ಆದರೆ, ಒತ್ತುವರಿದಾರರು ಸ್ವಯಂ ತೆರವು ಮಾಡಿಕೊಳ್ಳದ ಕಾರಣ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ತೆರವು ಪ್ರಕ್ರಿಯೆ ಕೈಗೊಂಡಿದ್ದು, 20 ಎಕರೆ ಪ್ರದೇಶವನ್ನು ಸಂಪೂರ್ಣ ತೆರವುಗೊಳಿಸಲಾಗಿದೆ. ಒತ್ತುವರಿ ಪ್ರದೇಶದಲ್ಲಿ ಅಡಿಕೆ ತೋಟಗಳಿದ್ದು, 3 ಕೊಳವೆಬಾವಿಗಳಿವೆ. ಇನ್ನು ಕೆಲವರು ರಾಗಿ, ಮೆಕ್ಕೆಜೊಳ ಬೆಳೆದಿದ್ದರು. ತೆರವುಗೊಳಿಸಿದ ಕೆರೆಯ ಜಮೀನನ್ನು ನಿಯಮದಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅವರಿಗೆ ವಹಿಸಿಕೊಡಲಾಗಿದೆ’ ಎಂದು ತಹಶೀಲ್ದರ್ ಕಲೀಂ ಉಲ್ಲಾ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. 

ADVERTISEMENT

ಒತ್ತುವರಿ ತೆರವಾದ ಪ್ರದೇಶ ಕೊಂಡುಕುರಿ ಅಭಯಾರಣ್ಯದ ಸಮೀಪದಲ್ಲಿದೆ. 

ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಶಿವಮೂರ್ತಿ, ಪಿಡಿಒ ರಾಘವೇಂದ್ರ, ಬಿಳಿಚೋಡು ಪಿಎಸ್‌ಐ ನೂರ್ ಅಹ್ಮದ್ ಪಾಲ್ಗೊಂಡಿದ್ದರು.

ತಾಲ್ಲೂಕು ಪಂಚಾಯಿತಿ ಇಒ ಕೆಂಚಪ್ಪ, ಜಿಲ್ಲಾ ಪಂಚಾಯಿತಿ ಎಇಇ ಶಿವಮೂರ್ತಿ, ಪಿಡಿಒ ರಾಘವೇಂದ್ರ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.

ಜಗಳೂರು ತಾಲ್ಲೂಕಿನ ಗೋಡೆ ಗ್ರಾಮದ ಕೆರೆ ಪ್ರದೇಶದಲ್ಲಿ ಒತ್ತುವರಿಯಾಗಿದ್ದ 20 ಎಕರೆ ಪ್ರದೇಶವನ್ನು ತಾಲ್ಲೂಕು ಆಡಳಿತದಿಂದ ಮಂಗಳವಾರ ತೆರವುಗೊಳಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.