ADVERTISEMENT

ದಾವಣಗೆರೆ | ರೈತರು ಕೆರೆ ಹೂಳು ಮಣ್ಣು ಬಳಸಿಕೊಳ್ಳಿ: ಜಿಲ್ಲಾಧಿಕಾರಿ ಗಂಗಾಧರಸ್ವಾಮಿ

ಕೃಷಿ ಚಟುವಟಿಕೆಗೆ ಅನುಮತಿ ಬೇಕಿಲ್ಲ, ವಾಣಿಜ್ಯ ಉದ್ದೇಶಕ್ಕೆ ಅವಕಾಶ ಇಲ್ಲ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 5:30 IST
Last Updated 19 ಅಕ್ಟೋಬರ್ 2025, 5:30 IST
ದಾವಣಗೆರೆಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ಸಭೆ ನಡೆಯಿತು
ದಾವಣಗೆರೆಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ಸಭೆ ನಡೆಯಿತು   

ದಾವಣಗೆರೆ: ಕೆರೆ ಹೂಳೆತ್ತುವ ವೇಳೆ ತೆಗೆಯುವ ಮಣ್ಣನ್ನು ರೈತರು ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.  

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಜಿಲ್ಲೆಯಲ್ಲಿರುವ ಯಾವುದೇ ಕೆರೆಗಳಲ್ಲಿ ರೈತರು ತಮ್ಮ ತೋಟ, ಹೊಲಗಳಿಗೆ ಮಣ್ಣು ಬಳಸಿಕೊಳ್ಳಬಹುದು. ಇದರಿಂದ ಕೆರೆಯ ನೀರಿನ ಸಂಗ್ರಹಣಾ ಸಾಮರ್ಥ್ಯ ಹೆಚ್ಚುವ ಜೊತೆಗೆ ರೈತರ ಜಮೀನಿನ ಫಲವತ್ತತೆ ಹೆಚ್ಚುತ್ತದೆ. ಆದರೆ, ಕೆರೆಯಲ್ಲಿ ಆಳವಾಗಿ ಗುಂಡಿ ತೆಗೆಯಲು ಮತ್ತು ವಾಣಿಜ್ಯ ಉದ್ದೇಶಕ್ಕೆ ಬಳಸಲು ಅವಕಾಶ ಇಲ್ಲ. ಕೃಷಿ ಚಟುವಟಿಕೆಗೆ ಮಣ್ಣು ಬಳಸಲು ಅನುಮತಿ ಬೇಕಿಲ್ಲ’ ಎಂದು ಸಷ್ಟಪಡಿಸಿದರು. 

ADVERTISEMENT

ಡಿಸೆಂಬರ್ ಅಂತ್ಯಕ್ಕೆ ಮರಳು ಲಭ್ಯ

ಜಿಲ್ಲೆಯಲ್ಲಿ 24 ಮರಳು ಬ್ಲಾಕ್‌ಗಳನ್ನು ಗುರುತಿಸಿ ಟೆಂಡರ್ ಅಂತಿಮಗೊಳಿಸಲಾಗಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಮನೆ ನಿರ್ಮಾಣ ಹಾಗೂ ಇನ್ನಿತರೆ ಕಾಮಗಾರಿಗಳಿಗೆ ಮರಳು ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದರು. 

19 ಮರಳು ಬ್ಲಾಕ್‍ಗಳಿಗೆ ಟೆಂಡರ್

ಜಿಲ್ಲಾದ್ಯಾಂತ ಒಟ್ಟು 24 ಮರಳು ಬ್ಲಾಕ್‍ಗಳನ್ನು ಗುರುತಿಸಲಾಗಿದೆ. ಈ ಪೈಕಿ 4 ಬ್ಲಾಕ್ ಸರ್ಕಾರಿ ಕಾಮಗಾರಿಗಳಿಗೆ, 19 ಬ್ಲಾಕ್‍ಗಳು ಸಾರ್ವಜನಿಕ ಉಪಯೋಗಕ್ಕೆ ನಿಗದಿಪಡಿಸಿದ್ದು, ಟೆಂಡರ್ ಅಂತಿಮವಾಗಿದೆ. ಇನ್ನೂ ಒಂದು ಬ್ಲಾಕ್ ಮಾತ್ರ ಬಾಕಿ ಇದೆ.   

ಬ್ಲಾಕ್ ವಿವರ: ಹರಿಹರ ತಾಲ್ಲೂಕಿನ ಗೋವಿನಾಳು, ಎಲೆಹೊಳೆ, ಚಿಕ್ಕಬಿದರೆ, ಗುತ್ತೂರು, ಮಳಲಹಳ್ಳಿ ಹಾಗೂ ಬಿಲಾಸನೂರು, ಹೊನ್ನಾಳಿ ತಾಲ್ಲೂಕಿನ ಬುಳ್ಳಾಪುರ, ಚಿಕ್ಕಬಸಾಪುರ, ರಾಂಪುರ, ಬಿಳೆಮಲ್ಲೂರು, ಹಿರೇಬಸೂರು, ಬುಳ್ಳಾಪುರ, ಬೀರಗೊಂಡನಹಳ್ಳಿ ಮತ್ತು ಬಾಗೇವಾಡಿ ವ್ಯಾಪ್ತಿಯಲ್ಲಿ ಹಾಗೂ ನ್ಯಾಮತಿ ತಾಲ್ಲೂಕಿನಲ್ಲಿ ಗೋವಿನಕೋವಿ, ಮಾರಿಗೊಂಡನಹಳ್ಳಿ, ತಗ್ಗಿಹಳ್ಳಿ ಮತ್ತು ಕೋಟೆಹಾಳ್‍ನಲ್ಲಿ ಮರಳು ಬ್ಲಾಕ್ ಗುರುತಿಸಲಾಗಿದೆ ಎಂದು ತಿಳಿಸಿದರು. 

ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್, ಎಸ್‌ಪಿ ಉಮಾ ಪ್ರಶಾಂತ್, ಹೆಚ್ಚುವರಿ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.