ADVERTISEMENT

ಕೆರೆಗಳು ಬದುಕಿನ ಜೀವನಾಡಿ: ಸಂಸದ ಜಿ.ಎಂ. ಸಿದ್ದೇಶ್ವರ

ಯಲೋದಹಳ್ಳಿಯಲ್ಲಿ ನೂತನ ಕೆರೆ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2021, 4:10 IST
Last Updated 12 ಡಿಸೆಂಬರ್ 2021, 4:10 IST
ಬಸವಾಪಟ್ಟಣ ಸಮೀಪದ ಯಲೋದಹಳ್ಳಿಯಲ್ಲಿ ಶನಿವಾರ ನೂತನವಾಗಿ ನಿರ್ಮಿಸಿದ ಕೆರೆಯನ್ನು ಶಾಸಕ ಪ್ರೊ.ಎನ್. ಲಿಂಗಣ್ಣ ಜ್ಯೋತಿ ಬೆಳಗಿಸುವುದರ ಮೂಲಕ ಲೋಕಾರ್ಪಣೆ ಗೊಳಿಸಿದರು
ಬಸವಾಪಟ್ಟಣ ಸಮೀಪದ ಯಲೋದಹಳ್ಳಿಯಲ್ಲಿ ಶನಿವಾರ ನೂತನವಾಗಿ ನಿರ್ಮಿಸಿದ ಕೆರೆಯನ್ನು ಶಾಸಕ ಪ್ರೊ.ಎನ್. ಲಿಂಗಣ್ಣ ಜ್ಯೋತಿ ಬೆಳಗಿಸುವುದರ ಮೂಲಕ ಲೋಕಾರ್ಪಣೆ ಗೊಳಿಸಿದರು   

ಬಸವಾಪಟ್ಟಣ: ಕೆರೆಗಳು ಗ್ರಾಮೀಣ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಜೀವನಾಡಿಗಳೆನಿಸಿವೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ಸಮೀಪದ ಯಲೋದಹಳ್ಳಿಯಲ್ಲಿ ₹ 1 ಕೋಟಿ ವೆಚ್ಚದಲ್ಲಿ 9 ಎಕರೆಯಲ್ಲಿ ನಿರ್ಮಿಸಿರುವ ಕೆರೆ ಲೋಕಾರ್ಪಣೆಯ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಅವರು ಮಾತನಾಡಿದರು.

‘ಕೆರೆಯ ಪಕ್ಕದ ಗುಡ್ಡದಿಂದ ಹರಿದು ಬರುವ ನೀರು ಇಲ್ಲಿ ಸಂಗ್ರಹವಾಗಿ, ಜನ, ಜಾನುವಾರು ಸೇರಿ ಕಾಡಿನ ಪ್ರಾಣಿ ಸಂಕುಲಕ್ಕೆ ಜೀವನಾಧಾರವಾಗಲಿದೆ. ಕೆರೆಯನ್ನು ನಿರ್ಮಿಸಲು ತಮ್ಮ ಉಳುಮೆ ಭೂಮಿಯನ್ನು ದಾನ ಮಾಡಿದ ಇಲ್ಲಿನ ರೈತರಾದ ಮಲ್ಲೇಶಪ್ಪಗೌಡ ಮತ್ತು ಭೂಮೇಶ್ವರಪ್ಪ ಪ್ರಶಂಸಾರ್ಹರು’ ಎಂದು ಹೇಳಿದರು.

ADVERTISEMENT

‘ಬಸ್‌ ಸೌಲಭ್ಯವಿಲ್ಲದ ಈ ಗ್ರಾಮಕ್ಕೆ ದಾವಣಗೆರೆ ಕುಂದೂರು ನೇರಗುಂಡಿ ಮೂಲಕ ಬಸ್‌ ಸೌಲಭ್ಯ ಕಲ್ಪಿಸಬೇಕು‘ ಎಂದು ಸಾರಿಗೆ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಆದೇಶಿಸಿದರು.

ಮಾಜಿ ಶಾಸಕ ಕೆ. ಶಿವಮೂರ್ತಿ ಮಾತನಾಡಿ, ‘ಕಳೆದ ಅವಧಿಯಲ್ಲಿ ನಾನು ಶಾಸಕನಾಗಿದ್ದಾಗ ತೇಜಸ್ವಿ ಪಟೇಲ್‌ ಅವರ ಆಶಯದಂತೆ ಇಲ್ಲಿನ ಕೆರೆ ನಿರ್ಮಿಸಲು ₹1 ಕೋಟಿ ಅನುದಾನ ನೀಡಿದ್ದೆ ’ ಎಂದರು

ಚನ್ನಗಿರಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಮಾತನಾಡಿ, ‘ಹೊನ್ನಾಳಿ ತಾಲ್ಲೂಕು ಹನುಮನಹಳ್ಳಿಯ ಕೆರೆಗೆ ಬೆನಕನಹಳ್ಳಿ ಏತ ನೀರಾವರಿ ಯೋಜನೆಯಲ್ಲಿ ಬರುತ್ತಿರುವ ತುಂಗಭದ್ರಾ ನೀರನ್ನು ₹3.9 ಕೋಟಿ ವೆಚ್ಚದಲ್ಲಿ ಯಲೋದಹಳ್ಳಿ ಕೆರೆಗೆ ಸಂಪರ್ಕ ನೀಡಲು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ’ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೇಜಸ್ವಿ ಪಟೇಲ್‌ ಮಾತನಾಡಿ, ‘ಈ ಕೆರೆಯ ನಿರ್ಮಾಣ ಇಲ್ಲಿನ ಜನತೆಯ ದೂರದೃಷ್ಟಿಗೆ ಸಾಕ್ಷಿಯಾಗಿದೆ. ಗ್ರಾಮಸ್ಥರು ಇಂತಹ ಒಂದು ಕೆರೆ ನಿರ್ಮಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ ’ ಎಂದರು.

ಮಾಯಕೊಂಡ ಶಾಸಕ ಪ್ರೊ.ಎನ್‌. ಲಿಂಗಣ್ಣ ಕೆರೆಯನ್ನು ಲೋಕಾರ್ಪಣೆಗೊಳಿಸಿ, ‘ಯಲೋದ ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂದಿನ ವರ್ಷಕ್ಕೆ ಶತಮಾನೋತ್ಸವ ಆಚರಿಸಲಿದ್ದು, ನನ್ನ ಅನುದಾನದಲ್ಲಿ ಈ ಶಾಲೆಗೆ ಎರಡು ಕೊಠಡಿಗಳನ್ನು ನಿರ್ಮಿಸಿಕೊಡುತ್ತೇನೆ’ ಎಂದು ಭರವಸೆ ನೀಡಿದರು.

ಶಿಮುಲ್ ಪ್ರಭಾರ ಅಧ್ಯಕ್ಷ ಎಚ್‌.ಕೆ. ಬಸಪ್ಪ ಯಲೋದಹಳ್ಳಿ, ಮಾಜಿ ಶಾಸಕ ಎಂ. ಬಸವರಾಜನಾಯ್ಕ ತೇಜಸ್ವಿ ಪಟೇಲ್‌ ಅವರೊಂದಿಗೆ ಕೆರೆಗೆ ಬಾಗಿನ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ ಡಿ.ಜಿ. ಶಾಂತನಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಹೊದಿಗೆರೆ ರಮೇಶ್‌, ನರೇಂದ್ರನಾಯ್ಕ್‌, ಎಂಪಿಎಂಸಿ ನಿರ್ದೇಶಕ ಜಿ.ಬಿ.ಜಗನ್ನಾಥ್‌, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಡಿ.ಎಸ್‌ ಪಲ್ಲವಿ ಕಿರಣ್‌, ಮಾಜಿ ಅಧ್ಯಕ್ಷೆ ಹಾಲಮ್ಮ ಮಹೇಶ್ವರಪ್ಪ ಇದ್ದರು. ಮಲ್ಲಿಕಾರ್ಜುನ ಸ್ವಾಗತಿಸಿದರು. ಬಿ.ಆರ್‌. ರವಿಕುಮಾರ್‌ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.