ADVERTISEMENT

ಲಕ್ಷ್ಮೀ ವೆಂಕಟೇಶ್ವರಸ್ವಾಮಿ ಬ್ರಹ್ಮ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 14 ಮೇ 2019, 12:57 IST
Last Updated 14 ಮೇ 2019, 12:57 IST
ದಾವಣಗೆರೆಯ ಎಂಸಿಸಿ ‘ಬಿ’ ಬ್ಲಾಕ್‌ನಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಮಂಗಳವಾರ 21ನೇ ಬ್ರಹ್ಮರಥೋತ್ಸವ ನಡೆಯಿತು
ದಾವಣಗೆರೆಯ ಎಂಸಿಸಿ ‘ಬಿ’ ಬ್ಲಾಕ್‌ನಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಮಂಗಳವಾರ 21ನೇ ಬ್ರಹ್ಮರಥೋತ್ಸವ ನಡೆಯಿತು   

ದಾವಣಗೆರೆ: ಇಲ್ಲಿನ ಎಂ.ಸಿ.ಸಿ. ‘ಬಿ’ ಬ್ಲಾಕ್‌ನ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿಯ 21ನೇ ವರ್ಷದ ಬ್ರಹ್ಮ ರಥೋತ್ಸವ ಮಂಗಳವಾರ ಸಂಭ್ರಮದಿಂದ ನೆರವೇರಿತು.

ಮಧ್ಯಾಹ್ನ 12ಕ್ಕೆ ಆರಂಭಗೊಂಡ ರಥೋತ್ಸವ ದೇವಸ್ಥಾನದಿಂದ ಆರಂಭಗೊಂಡು ಹಿಂಭಾಗದ ರಸ್ತೆಯ ಮೂಲಕ ಮೆಡಿಕಲ್ ಕಾಲೇಜು ರಸ್ತೆಯ ಮೂಲಕ ದೇವಸ್ಥಾನಕ್ಕೆ ತಲುಪಿತು. ಈ ವೇಳೆ ಭಕ್ತರು ಗೋವಿಂದಾ.. ಗೋವಿಂದಾ.. ಎಂದು ನಾಮಸ್ಮರಣೆ ಮಾಡುತ್ತಾ ಭಕ್ತಿ ಪ್ರದರ್ಶಿಸಿದರು.

ರಥೋತ್ಸವದ ಅಂಗವಾಗಿ ಮೇ 11ರಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು, 16ರಂದು ಹನುಮದ್ವಾಹನ ಉತ್ಸವದ ಮೂಲಕ ಸಮಾರೋಪಗೊಳ್ಳಲಿದೆ. 11ರಂದು ಅಂಕುರಾರ್ಪಣೆ, 12ರಂದು ಧ್ವಜಾರೋಹಣ ಉತ್ಸವ, 13ರಂದು ಬೆಳಿಗ್ಗೆ 11ಕ್ಕೆ ಗರುಡೋತ್ಸವ ಹಾಗೂ ಸಂಜೆ 6ಕ್ಕೆ ಕಲ್ಯಾಣೋತ್ಸವ ಜರುಗಿದವು.

ADVERTISEMENT

‘ದಾವಣಗೆರೆ ನಗರ ಸೇರಿ ಸುತ್ತಮುತ್ತಲ ಗ್ರಾಮಗಳಿಂದ 6ಸಾವಿರಕ್ಕೂ ಹೆಚ್ಚು ಭಕ್ತರು ದೇವರ ದರ್ಶನ ಪಡೆದರು. ಸೋಮವಾರ ನಡೆದ ಕಲ್ಯಾಣೋತ್ಸವದಲ್ಲಿ ಸುಮಾರು 3 ಸಾವಿರ ಭಕ್ತರು ಪಾಲ್ಗೊಂಡಿದ್ದರು. ಹೆಚ್ಚಾಗಿ ಮಹಿಳೆಯರು ಪಾಲ್ಗೊಂಡಿದ್ದರು. ಭಕ್ತರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು. ರಥೋತ್ಸವ ಶಾಂತವಾಗಿ ನೆರವೇರಿತು’ ಎಂದು ದೇವಸ್ಥಾನದ ಪ್ರಧಾನ ಟ್ರಸ್ಟಿ ಎಂ.ಎನ್‌. ರಾಮಮೋಹನ್ ತಿಳಿಸಿದರು.

ರಾಮನಗರದ ಕೋದಂಡರಾಮ ದೇವಸ್ಥಾನದ ಪ್ರಧಾನ ಆಗಮಿಕರಾದ ಪ್ರದ್ಯುಮ್ನ ನರಸಿಂಹ ಭಟ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.