ದಾವಣಗೆರೆ: ‘ಕರೂರು ಕೈಗಾರಿಕಾ ಪ್ರದೇಶದಲ್ಲಿ ಖಾಸಗಿ ಸಂಸ್ಥೆಗೆ ಕಾನೂನುಬಾಹಿರವಾಗಿ ಜಮೀನು ಮಂಜೂರು ಮಾಡಲಾಗಿದೆ. ಇದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರು ಅವರು ಪ್ರಭಾವ ಬೀರಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ ಜಾಧವ ಆರೋಪಿಸಿದರು.
‘2005-06ನೇ ಸಾಲಿನಲ್ಲಿ 102.76 ಎಕರೆ ಪ್ರದೇಶವನ್ನು ಒಟ್ಟು 217 ಘಟಕಗಳಿಗೆ ನಿವೇಶನಗಳನ್ನಾಗಿ ಮಾಡಿ ಹಂಚಿಕೆ ಮಾಡಲಾಗಿದೆ. ಕೈಗಾರಿಕಾ ಪ್ರದೇಶವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಕರೂರು ಕೈಗಾರಿಕಾ ಪ್ರದೇಶದ ನಿವೇಶನ ಸಂಖ್ಯೆ 68–ಡಿ ರಲ್ಲಿನ 1.50 ಎಕರೆ ಜಮೀನನ್ನು ಘನತ್ಯಾಜ್ಯ ಸಂಗ್ರಹಣೆ ಹಾಗೂ ನಿರ್ವಹಣೆಗಾಗಿ ಕಾಯ್ದಿರಿಸಲಾಗಿತ್ತು. ಈ ಜಮೀನಿನ ಇಂದಿನ ಬೆಲೆ ಅಂದಾಜು ₹ 15 ಕೋಟಿ ಆಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಬೇನಾಮಿ ಹೆಸರಿನ ಮೇಲೆ ಸ್ವಂತಕ್ಕೆ ಘನತ್ಯಾಜ್ಯ ಸಂಗ್ರಹಣೆ ಮತ್ತು ನಿರ್ವಹಣೆ ಘಟಕ ಸ್ಥಾಪನೆಯ ಹೆಸರಿನಲ್ಲಿ ಈ ಜಮೀನನ್ನು ಹಂಚಿಕೆ ಮಾಡಿಸಿಕೊಂಡಿದ್ದಾರೆ’ ಎಂದು ದೂರಿದರು.
‘ಎಚ್‌ಸಿಸಿ ಎಕೋ ರಿಸೈಕ್ಲರ್ಸ್ ಹೆಸರಿನಲ್ಲಿ ₹15 ಕೋಟಿ ಬಾಳುವ ಜಮೀನನ್ನು ಕೇವಲ ₹1.13 ಕೋಟಿ ಮೊತ್ತಕ್ಕೆ ಹಂಚಿಕೆ ಮಾಡಿಸಿಕೊಂಡಿದ್ದಾರೆ. ಆ ಮೂಲಕ ಜಿಲ್ಲೆಯ ಜನರಿಗೆ ಮೋಸ ಮಾಡಿದ್ದಾರೆ’ ಎಂದು ಆರೋಪಿಸಿದರು.
‘ಖಾಸಗಿ ಸಂಸ್ಥೆಗೆ ಅಕ್ರಮವಾಗಿ ಜಾಗ ನೀಡುವ ಆದೇಶವನ್ನು ರದ್ದುಪಡಿಸಬೇಕು. ಇಲ್ಲವಾದರೆ, ಹೋರಾಟವನ್ನು ಕೈಗೆತ್ತಿಕೊಳ್ಳಲಾಗುವುದು. ಈ ಬಗ್ಗೆ ವಿಧಾನಮಂಡಲ ಅಧಿವೇಶನದಲ್ಲಿ ಶಾಸಕ ಬಿ.ಪಿ.ಹರೀಶ್ ಅವರು ಧ್ವನಿ ಎತ್ತಲಿದ್ದಾರೆ’ ಎಂದು ಹೇಳಿದರು.
ಮುಖಂಡರಾದ ಅಣಬೇರು ಜೀವನಮೂರ್ತಿ, ವಿಜಯಕುಮಾರ, ರಾಜನಹಳ್ಳಿ ಶಿವಕುಮಾರ್, ಟಿಂಕರ್ ಮಂಜಣ್ಣ, ಕಿಶೋರಕುಮಾರ, ಗೋವಿಂದರಾಜ್, ಶಂಕರಗೌಡ ಇನ್ನಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.