ADVERTISEMENT

ಎಸ್‌ಎಸ್‌ ಆಸ್ಪತ್ರೆಯಲ್ಲಿ ಲ್ಯಾಬ್‌ ಆರಂಭ: ಸಚಿವ ಡಾ.ಸುಧಾಕರ್‌

ಜಿಲ್ಲೆಯಲ್ಲಿ ಇನ್ನೆರಡು ಲ್ಯಾಬ್‌ ಆರಂಭಗೊಳ್ಳಲಿದೆ

​ಪ್ರಜಾವಾಣಿ ವಾರ್ತೆ
Published 9 ಮೇ 2020, 14:58 IST
Last Updated 9 ಮೇ 2020, 14:58 IST
ದಾವಣಗೆರೆ ಎಸ್‌ಎಸ್‌ ವೈದ್ಯಕೀಯ ಆಸ್ಪತ್ರೆಯಲ್ಲಿ ಕೋವಿಡ್‌ ಪರೀಕ್ಷಾ ಲ್ಯಾಬ್‌ಗೆ ಶನಿವಾರ ಚಾಲನೆ ನೀಡಲಾಯಿತು
ದಾವಣಗೆರೆ ಎಸ್‌ಎಸ್‌ ವೈದ್ಯಕೀಯ ಆಸ್ಪತ್ರೆಯಲ್ಲಿ ಕೋವಿಡ್‌ ಪರೀಕ್ಷಾ ಲ್ಯಾಬ್‌ಗೆ ಶನಿವಾರ ಚಾಲನೆ ನೀಡಲಾಯಿತು   

ದಾವಣಗೆರೆ: ‘ಎಸ್‌ಎಸ್‌ ಹೈಟೆಕ್‌ ಆಸ್ಪತ್ರೆಯಲ್ಲಿ ಕೋವಿಡ್‌–19 ಪರೀಕ್ಷಾ ಪ್ರಯೋಗಾಲಯಕ್ಕೆ ಚಾಲನೆ ನೀಡಿದ್ದೇನೆ. ಇದಲ್ಲದೇ ಜಿಲ್ಲಾ ಆಸ್ಪತ್ರೆಯಲ್ಲಿ ಒಂದು ಮತ್ತು ಜೆಜೆಎಂ ಮೆಡಿಕಲ್‌ ಕಾಲೇಜಿನಲ್ಲಿ ಒಂದು ಲ್ಯಾಬ್‌ ಆರಂಭಗೊಳ್ಳಲಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ತಿಳಿಸಿದರು.

ಎಸ್ಎಸ್‌ ವೈದ್ಯಕೀಯ ಆಸ್ಪತ್ರೆಯ ಪಿಸಿಆರ್‌ ಲ್ಯಾಬ್‌ನಲ್ಲಿ ಶನಿವಾರ ಕೋವಿಡ್‌ ಪರೀಕ್ಷಾ ಲ್ಯಾಬ್‌ ಉದ್ಘಾಟಿಸಿ ಅವರು ಮಾತನಾಡಿದರು.

ಕೋವಿಡ್ ಪರೀಕ್ಷಾ ಲ್ಯಾಬ್ ಬೇಕು ಎಂದು ಎಲ್ಲ ಕ್ಷೇತ್ರದ ಚುನಾಯಿತ ಪ್ರತಿನಿಧಿಗಳು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು ನಾನು ಸಭೆ ಮಾಡಿದ್ದೆ. ಸರ್ಕಾರದ ವ್ಯವಸ್ಥೆ ಜೊತೆಗೆ ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿ ಕೋವಿಡ್ ಲ್ಯಾಬ್ ಅಳವಡಿಸಿಕೊಳ್ಳಬೇಕು ಎಂದು ಸೂಚನೆ ಹೇಳಿದ್ದೆ. ಈ ನಿಟ್ಟಿನಲ್ಲಿ ನಮ್ಮ ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪ ಅವರ ಕಾಲೇಜಿನಲ್ಲಿ ಕೋವಿಡ್ ಪರೀಕ್ಷೆಗೆ ಲ್ಯಾಬ್ ಸಜ್ಜುಗೊಳಿಸಿದ್ದು ಸಂತಸದ ವಿಷಯ ಎಂದು ಶ್ಲಾಘಿಸಿದರು.

ADVERTISEMENT

‘ದಾವಣಗೆರೆಯ ಜನರಿಗೆ ಇನ್ನಾದರೂ ಸ್ವಲ್ಪ ಸಮಾಧಾನದಿಂದ ಇರಬಹುದಾಗಿದೆ. ಅನೇಕ ಪರೀಕ್ಷೆಗಳನ್ನು ಹೆಚ್ಚುವರಿಯಾಗಿ ಮಾಡಲು ಇದರಿಂದ ಸಾಧ್ಯವಾಗಲಿದೆ’ ಎಂದರು.

‘ಜಿಲ್ಲಾ ಆಸ್ಪತ್ರೆಯಲ್ಲಿ ಆರ್‌ಎನ್‌ಟಿಸಿಪಿ ಮಷೀನ್‌ಗಳನ್ನು ನಾಳೆಯಿಂದ ಅಳವಡಿಸಲಿದ್ದಾರೆ. ಈ ವಾರದಲ್ಲಿಯೇ ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟನೆ ಮಾಡಲಿದ್ದಾರೆ. ಜೊತೆಗೆ ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ಕೂಡ ಇನ್ನೊಂದು ಲ್ಯಾಬ್ ತೆರೆಯಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ. ಬಸವರಾಜ, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಶಾಮನೂರು ಶಿವಶಂಕರಪ್ಪ, ಮಾಡಾಳ್‌ ವಿರೂಪಾಕ್ಷಪ್ಪ, ಮೇಯರ್ ಅಜಯ್ ಕುಮಾರ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಸ್‌ಪಿ ಹನುಮಂತರಾಯ, ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.