ADVERTISEMENT

ಪಂಚಮಸಾಲಿ ಮೀಸಲಾತಿಗೆ ಆಗ್ರಹಿಸಿ ಬಾರುಕೋಲು ಚಳವಳಿ ಆರಂಭ

ಶಾಂತಿ ಸಹನೆಯ ಹೋರಾಟ ಮುಗಿಯಿತು, ಇನ್ನು ಕ್ರಾಂತಿ ಹೋರಾಟ: ಜಯಮೃತ್ಯುಂಜಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2021, 7:38 IST
Last Updated 30 ಜನವರಿ 2021, 7:38 IST
ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಶನಿವಾರ ಬಾರಕೋಲು ಚಳವಳಿ ಆರಂಭಗೊಂಡಿತು
ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಶನಿವಾರ ಬಾರಕೋಲು ಚಳವಳಿ ಆರಂಭಗೊಂಡಿತು   

ದಾವಣಗೆರೆ: ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ದಾವಣಗೆರೆಯಲ್ಲಿ ಬಾರಕೋಲು ಚಳವಳಿ ಶನಿವಾರ ಆರಂಭಗೊಂಡಿದೆ.

ಅರುಣಾ ಟಾಕೀಸ್‌ ಎದುರಿನ ಸರ್ಕಲ್‌ಗೆ ಕಿತ್ತೂರು ರಾಣಿ ಚನ್ನಮ್ಮ ಎಂದು ನಾಮಕರಣ ಮಾಡಲಾಗಿದ್ದು, ಚನ್ನಮ್ಮ ನಾಮಫಲಕಕ್ಕೆ ಬಸವಜಯಮೃತ್ಯುಂಜಯ ಸ್ವಾಮೀಜಿ ಮತ್ತು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಮಾಲಾರ್ಪಣೆ ಮಾಡಿದರು. ಉಳುಮೆಯ ಸಂದರ್ಭದಲ್ಲಿ ಎತ್ತುಗಳನ್ನು ನಿಯಂತ್ರಿಸಲು ಬಳಸುವ ಬಾರುಕೋಲುಗಳನ್ನು ಹಿಡಿದು ಬಳಿಕ ಪಾದಯಾತ್ರೆ ಆರಂಭಿಸಿದರು.

‘ಜ.14ರಿಂದ ಇಲ್ಲಿವರೆಗೆ 380ಕ್ಕೂ ಅಧಿಕ ಕಿಲೋಮೀಟರ್‌ಅನ್ನು ಪಾದಯಾತ್ರೆ ಮೂಲಕ ಕ್ರಮಿಸಿದ್ದೇವೆ. ಇಲ್ಲಿವರೆಗೆ ನಾನು ಒಂಟಿ ಸ್ವಾಮೀಜಿ ಆಗಿದ್ದೆ. ಇನ್ನುಮುಂದಿನ ಪಾದಯಾತ್ರೆ ಉಭಯ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯುತ್ತದೆ. ಸಮುದಾಯದಲ್ಲಿ ಒಗ್ಗಟ್ಟಿಲ್ಲ ಎಂಬ ತಪ್ಪು ಕಲ್ಪನೆ ಎಲ್ಲರಲ್ಲಿ ಇತ್ತು. ನಾವು ಒಗ್ಗಟ್ಟಾಗಿ ಇದ್ದೇವೆ ಎಂಬ ಸಂದೇಶ ರವಾನೆಯಾಗಿದೆ. ಇಲ್ಲಿಯವರೆಗೆ ಶಾಂತಿ, ಸಹನೆ, ಪ್ರೀತಿಯಿಂದ 2ಎ ಮೀಸಲಾತಿ ನೀಡಿ ಎಂದು ಕೇಳಿದ್ದೆ. ಇನ್ನು ಮುಂದೆ ಶಾಂತಿಯಲ್ಲ, ಕ್ರಾಂತಿ ಮೂಲಕ ಕೇಳುತ್ತೇವೆ. ಆಗ್ರಹಪಡಿಸುತ್ತೇವೆ. ಕಲ್ಲಿನಕೋಟೆ ಚಿತ್ರದುರ್ಗಕ್ಕೆ ಪಾದಯಾತ್ರೆ ತಲುಪುವ ಮೊದಲು 2ಎ ಘೋಷಣೆ ಮಾಡಬೇಕು. ಇಲ್ಲದೇ ಹೋದರೆ ಪ್ರತಿಭಟನೆ ಇನ್ನಷ್ಟು ಉಗ್ರಗೊಳ್ಳಲಿದೆ’ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದರು.

ADVERTISEMENT

‘ಪಂಚಮಸಾಲಿ ಸಮುದಾಯದ 17 ಮಂದಿ ಶಾಸಕರು ಇದ್ದಾರೆ. ನಾವು ಇಲ್ಲಿ ರಸ್ತೆಯಲ್ಲಿ ಹೋರಾಟ ಮಾಡುತ್ತಿದ್ದರೆ, ನೀವು ಅಧಿವೇಶನದಲ್ಲಿ ಹೋರಾಟ ಮಾಡಿ ಮೀಸಲಾತಿ ಕೊಡಿಸಬೇಕು. ನಿಮಗೆ ಆಗುವುದಿಲ್ಲ ಎಂದಾದರೆ ರಾಜೀನಾಮೆ ಕೊಟ್ಟು ಹೊರನಡೆಯಿರಿ. ನಾವು ಬೇರೆಯವರನ್ನು ಶಾಸಕರನ್ನಾಗಿ ಆಯಕೆ ಮಾಡುತ್ತೇವೆ’ ಎಂದು ಕಿಡಿಕಾರಿದರು.

‘ತಾಳ್ಮೆ ಪರೀಕ್ಷೆ ಮಾಡಿದ್ದು ಸಾಕು. ನಮ್ಮನ್ನು ಹೆಚ್ಚು ನಡೆಸದೇ ಮೀಸಲಾತಿ ನೀಡಬೇಕು. ಮುಖ್ಯಮಂತ್ರಿ ಕೂಡ ಲಿಂಗಾಯತ ಸಮುದಾಯದ ಒಂದು ಒಳಪಂಗಡದವರು. ನಿಮಗೆ 2ಎ ಮೀಸಲಾತಿ ಪಡೆಯಲು ನಾವು ಬೆಂಬಲ ನೀಡಿದ್ದೆವು. ಅದರಂತೆ ನಮ್ಮನ್ನು ಬೆಂಬಲಿಸಬೇಕು. ನೀವು ಒಂದು ಉಪಪಂಗಡಕ್ಕೆ ನಾಯಕರಲ್ಲ. ಎಲ್ಲ ಲಿಂಗಾಯತ ಸಮುದಾಯಕ್ಕೆ ನಾಯಕರು’ ಎಂದು ಹೇಳಿದರು.

ವಚನಾನಂದ ಸ್ವಾಮೀಜಿ ಮಾತನಾಡಿ, ‘ನಮ್ಮಲ್ಲಿ ಯಾವುದೇ ಭೇದವಿಲ್ಲ. ಸಮುದಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಆ ಭಾಗದಲ್ಲಿ ಸಮಾಜದ ಉದ್ಧಾರಕ್ಕಾಗಿ ಜಯಮೃತ್ಯುಂಜಯ ಸ್ವಾಮೀಜಿ ಶ್ರಮಿಸುತ್ತಾರೆ. ಈ ಭಾಗದಲ್ಲಿ ಹರಿಹರ ಪೀಠ ಶ್ರಮಿಸುತ್ತದೆ. 2ಎ ಮೀಸಲಾತಿ ನಾವು ಕೇಳುತ್ತಿರುವ ಭಿಕ್ಷೆಯಲ್ಲ. ನಮ್ಮ ಹಕ್ಕು ಅದು. ಪಂಚಮಸಾಲಿ ಸಮುದಾಯದಲ್ಲಿ ಶೇ 10 ಮಂದಿಗೆ ಮನೆಯೇ ಇಲ್ಲ. ಶೇ 15 ಮಂದಿಗೆ ಭೂಮಿ ಇಲ್ಲ. ಅವರೆಲ್ಲರಿಗಾಗಿ ಈ ಹೋರಾಟ. ನಾವು ಹಾಲು ಸಕ್ಕರೆಯಂತೆ ಒಂದಾಗಿದ್ದೇವೆ. ಸಮುದಾಯಕ್ಕಾಗಿ ಎಂದೆಂದಿಗೂ ಒಂದಾಗಿ ಇರುತ್ತೇವೆ’ ಎಂದು ಘೋಷಿಸಿದರು.

ಹೋರಾಟ ಸಮಿತಿಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಬಿ.ಸಿ. ಉಮಾಪತಿ, ಹೋರಾಟದ ದಾವಣಗೆರೆಯ ಉಸ್ತುವಾರಿ ಎಚ್‌.ಎಸ್‌. ನಾಗರಾಜ್‌ ಅವರೂ ಇದ್ದರು. ಪಾದಯಾತ್ರೆ ಆನಗೋಡು–ಹೆಬ್ಬಾಳ್‌ ಕಡೆಗೆ ಹೊರಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.