
ದಾವಣಗೆರೆ: ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಗಳಿಗೂ ಉಚಿತ ಕಾನೂನು ನೆರವು ಒದಗಿಸಲಾಗುವುದು. ಇದಕ್ಕೆ ಜೈಲುಗಳಲ್ಲಿ ಕಾನೂನು ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಕರೆಣ್ಣನವರ್ ಹೇಳಿದರು.
ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ಸೋಮವಾರ ಆಯೋಜಿಸಿದ್ದ ಕಾನೂನು ಅರಿವು, ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಅರ್ಹತಾ ಮಾನದಂಡಗಳನ್ನು ಪೂರೈಸಿದ ವಿಚಾರಣಾಧೀನ ಕೈದಿಗಳಿಗೂ ಕಾನೂನು ನೆರವು ನೀಡಲು ಕಾನೂನು ಸೇವಾ ಪ್ರಾಧಿಕಾರದ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಮಹಿಳೆಯರು, ಮಕ್ಕಳು ಸೇರಿದಂತೆ ವಿಶೇಷ ವರ್ಗಕ್ಕೆ ಕಾನೂನು ನೆರವು ನೀಡಲಾಗುತ್ತದೆ. ಜಾಮೀನು ಅರ್ಜಿ, ಪೆರೋಲ್, ಮೇಲ್ಮನವಿ ಸೇರಿದಂತೆ ಇತರ ಕಾನೂನಾತ್ಮಕ ಪ್ರಕ್ರಿಯೆಗಳಿಗೆ ಸಹಾಯ ಮಾಡಲಾಗುತ್ತದೆ’ ಎಂದು ವಿವರಿಸಿದರು.
‘ಕಾನೂನು ನೆರವು ನೀಡಲು ಅರೆನ್ಯಾಯಿಕ ಸ್ವಯಂ ಸೇವಕರು, ಕಾನೂನು ಸಲಹೆಗಾರರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇವರು ನಿಯಮಿತವಾಗಿ ಕಾರಾಗೃಹಕ್ಕೆ ಭೇಟಿ ನೀಡಿ ಅರ್ಜಿಗಳನ್ನು ಪರಿಶೀಲಿಸಲಿದ್ದಾರೆ. ಕೈದಿಗಳ ಕಷ್ಟಗಳನ್ನು ಆಲಿಸಲಿದ್ದಾರೆ. ಸರ್ಕಾರಿ ವಕೀಲರಂತೆಯೇ ಸ್ವಯಂ ಸೇವಕರು ಹಾಗೂ ಸಲಹೆಗಾರರು ಕಾರ್ಯನಿರ್ವಹಿಸಲಿದ್ದಾರೆ’ ಎಂದರು.
‘ಬಂಧನ ಪ್ರಕ್ರಿಯೆ ಆರಂಭಿಕ ಹಂತದಿಂದಲೂ ಕಾನೂನು ನೆರವು ನೀಡಲು ಅವಕಾಶವಿದೆ. ವಿಚಾರಣಾ ನ್ಯಾಯಾಲಯದಲ್ಲಿ ಇತ್ಯರ್ಥಗೊಂಡ ಪ್ರಕರಣದ ಮೇಲ್ಮನವಿಗೂ ಸಹಕಾರ ನೀಡಲಾಗುತ್ತದೆ. ಜಿಲ್ಲೆಯಲ್ಲಿ 8 ವಕೀಲರು ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಕೈದಿಗಳ ಕುಟುಂಬದವರು ಕೂಡ ಇದರ ಪ್ರಯೋಜನ ಪಡೆಯಬಹುದು’ ಎಂದು ಸಲಹೆ ನೀಡಿದರು.
ಜಿಲ್ಲಾ ಕಾರಾಗೃಹದ ಅಧೀಕ್ಷಕ ಆನಂದ ಭಜಂತ್ರಿ, ವಕೀಲರಾದ ಸೋಹನ್ ಕಟಗಿಹಳ್ಳಿ ಮಠ, ಸುಭಾಷ್ ಎಚ್., ಕೆಂಚಪ್ಪ, ಸೋಮಶೇಖರ್ ಹಾಜರಿದ್ದರು.
ಕಾನೂನು ನೆರವಿಗೆ 8 ವಕೀಲರ ನೇಮಕ | ಕೈದಿಗಳ ಕಷ್ಟ ಆಲಿಸಲಿದ್ದಾರೆ ಸ್ವಯಂ ಸೇವಕರು | ಜಾಮೀನು, ಪೆರೋಲ್, ಮೇಲ್ಮನವಿಗೂ ಕಾನೂನು ನೆರವು
ಶಿಕ್ಷೆಗೆ ಗುರಿಯಾದ ಕೈದಿಗಳಿಂದ ವಿಚಾರಣಾಧೀನ ಕೈದಿಗಳನ್ನು ಪ್ರತ್ಯೇಕವಾಗಿ ಇಡಬೇಕು. ಕೈದಿಗಳಿಗೆ ಸೂಕ್ತ ವಸತಿ ಆಹಾರ ವೈದ್ಯಕೀಯ ಸೌಲಭ್ಯ ಒದಗಿಸುವುದು ಕಡ್ಡಾಯಮಹಾವೀರ ಕರೆಣ್ಣನವರ್ ಸದಸ್ಯ ಕಾರ್ಯದರ್ಶಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.