ADVERTISEMENT

ಹೊನ್ನಾಳಿ | ಚಿರತೆ ದಾಳಿ: ಮೇಕೆ ಸಾವು

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2021, 2:14 IST
Last Updated 27 ಡಿಸೆಂಬರ್ 2021, 2:14 IST

ಹೊನ್ನಾಳಿ:ತಾಲ್ಲೂಕಿನ ಎಚ್. ಕಡದಕಟ್ಟೆ ಗ್ರಾಮದ ಜೋಗುಂಡಿ ಹಳ್ಳದ ಬಳಿ ಇರುವ ಶಿಕ್ಷಕ ಶೇಖರಪ್ಪ ಅವರ ಹೊಲದಲ್ಲಿ ಭಾನುವಾರ ಮೇಕೆ ಮೇಲೆ ಚಿರತೆ ದಾಳಿ ನಡೆಸಿದೆ.

ಚಿರತೆ ದಾಳಿಯಿಂದ ಮೇಕೆ ಮೃತಪಟ್ಟಿದ್ದು,₹ 15 ಸಾವಿರ ನಷ್ಟ ಆಗಿದೆ ಎಂದುಎಚ್. ಕಡದಕಟ್ಟೆ ಗ್ರಾಮದ ರೈತ ಬಸಪ್ಪ ತಿಳಿಸಿದ್ದಾರೆ.

ಚಿರತೆ ದಾಳಿ ಮಾಡುತ್ತಿದ್ದಂತೆ ಅಕ್ಕ-ಪಕ್ಕದ ಜಮೀನುಗಳಲ್ಲಿದ್ದ ರೈತರು ಕೂಗಿದ್ದರಿಂದ ಚಿರತೆ ಓಡಿಹೋಗಿದೆ.

ADVERTISEMENT

ಉಪ ವಲಯ ಅರಣ್ಯಾಧಿಕಾರಿ ಜಿ.ಜಿ. ಶಿವಯೋಗಿ ಅವರ ಸೂಚನೆಯ ಮೇರೆಗೆ ಅರಣ್ಯಾಧಿಕಾರಿ ಪ್ರಭಾಕರ್ ಗ್ರಾಮಕ್ಕೆ ಭೇಟಿ ನೀಡಿ ರೈತರಿಂದ ಮಾಹಿತಿ ಪಡೆದರು.

ಚಿರತೆ ದಾಳಿಯಿಂದಾಗಿ ಎಚ್. ಕಡದಕಟ್ಟೆ ಸೇರಿ ಸುತ್ತ-ಮುತ್ತಲಿನ ಗ್ರಾಮಗಳ ಜನರು ಆತಂಕಗೊಂಡಿದ್ದು, ಶೀಘ್ರ ಚಿರತೆ ಸೆರೆ ಹಿಡಿಯಬೇಕು ಎಂದು ತಾಲ್ಲೂಕು ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಎಂ.ಎಸ್. ಜಗದೀಶ್ ಆಗ್ರಹಿಸಿದ್ದಾರೆ.

ಎರಡು ತಿಂಗಳ ಹಿಂದೆ ತಾಲೂಕಿನ ಅರಬಗಟ್ಟೆ, ಸೊರಟೂರು, ಎಚ್. ಕಡದಕಟ್ಟೆ ಮತ್ತು ನ್ಯಾಮತಿ ತಾಲ್ಲೂಕಿನ ದಾನಿಹಳ್ಳಿ, ತೀರ್ಥರಾಮೇಶ್ವರ, ಆರುಂಡಿ, ಮಾದನಬಾವಿ ಮತ್ತಿತರ ಗ್ರಾಮಗಳಲ್ಲಿ ಒಂದು ಚಿರತೆ ಹಾಗೂ ಎರಡು ಮರಿಗಳು ಸಂಚರಿಸುತ್ತಾ ಜನರಲ್ಲಿ ಭೀತಿ ಹುಟ್ಟಿಸಿದ್ದವು. ಅರಣ್ಯಾಧಿಕಾರಿಗಳು ಆಯಕಟ್ಟಿನ ಜಾಗಗಳಲ್ಲಿ ಬೋನುಗಳನ್ನೂ ಇರಿಸಿದ್ದರು. ಆದರೂ ಚಿರತೆಗಳು ಸೆರೆಯಾಗಿರಲಿಲ್ಲ. ಇದೀಗ ಮತ್ತೆ ಚಿರತೆ ಕಾಣಿಸಿಕೊಂಡಿದ್ದು, ಜಮೀನುಗಳಿಗೆ ತೆರಳಲು ಜನರು ಹಿಂದೇಟು ಹಾಕುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.