ADVERTISEMENT

ಮಾವಿನಕಟ್ಟೆ: ವಿವಿಧ ಗ್ರಾಮಗಳಲ್ಲಿ ಚಿರತೆ ಕಾಟ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2022, 3:57 IST
Last Updated 16 ಸೆಪ್ಟೆಂಬರ್ 2022, 3:57 IST
ಚಿರತೆ(ಸಾಂದರ್ಭಿಕ ಚಿತ್ರ)
ಚಿರತೆ(ಸಾಂದರ್ಭಿಕ ಚಿತ್ರ)   

ಮಾವಿನಕಟ್ಟೆ(ಚನ್ನಗಿರಿ): ತಾಲ್ಲೂಕು ಮಾವಿನಕಟ್ಟೆ ವಲಯ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಮಾದೇನಹಳ್ಳಿ, ಸಾರಥಿ ಹೊಸೂರು ಹಾಗೂ ಮಾವಿನಕಟ್ಟೆ ಗ್ರಾಮಗಳಲ್ಲಿ ಹದಿನೈದು ದಿನಗಳಿಂದ ಚಿರತೆಯ ಕಾಟ ಶುರುವಾಗಿದೆ. ಪ್ರತಿ ದಿನ ಈ ಗ್ರಾಮಗಳಲ್ಲಿ ಶ್ವಾನಗಳನ್ನು ಚಿರತೆ ಎಳೆದುಕೊಂಡು ಹೋಗಿ ಭಕ್ಷಿಸುತ್ತಿರುವುದು ಈ ಗ್ರಾಮಗಳ ಜನರು ತತ್ತರಗೊಳ್ಳುವಂತೆ ಮಾಡಿದೆ.

ಐದಾರು ದಿನಗಳ ಹಿಂದೆ ಬೆಳಿಗ್ಗೆ ಸಮಯದಲ್ಲಿ ಮಾದೇನಹಳ್ಳಿ ಗ್ರಾಮದ ಹಾಲೇಶ್ ಎಂಬುವರ ಮನೆಯ ಹೊರಗಡೆ ಆವರಣದಲ್ಲಿದ್ದ ಬೆಕ್ಕನ್ನು ಎಳೆದುಕೊಂಡು ಹೋಗಿರುವ ಚಿತ್ರಣ ಅವರ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೂರು ಗ್ರಾಮಗಳ ವ್ಯಾಪ್ತಿಯಲ್ಲಿ ಬೆಳಿಗ್ಗೆ ವೇಳೆ ಗ್ರಾಮದೊಳಗೆ ಬಂದು ಮನೆಯ ಮುಂದೆ ಇರುವ 20ಕ್ಕಿಂತ ಹೆಚ್ಚು ಶ‍್ವಾನಗಳನ್ನು ಚಿರತೆ ಎಳೆದುಕೊಂಡು ಹೋಗಿದೆ.

ಹೀಗಾಗಿ ಈ ಗ್ರಾಮಗಳ ಜನರು ಮನೆಯಿಂದ ಹೊರಬರಲು ಭೀತರಾಗುವ ಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಚಿರತೆಯನ್ನು ಸೆರೆ ಹಿಡಿದು ದೂರದ ಕಾಡಿನೊಳಗೆ ಬಿಡಲು ಕ್ರಮ ಕೈಗೊಳ್ಳಬೇಕು ಎಂದು ಮಾದೇನಹಳ್ಳಿ ಗ್ರಾಮದ ಹಾಲೇಶ್ ಒತ್ತಾಯಿಸಿದ್ದಾರೆ.

ADVERTISEMENT

ಸಾರಥಿ ಹೊಸೂರು ಬಳಿ ಬೋನು

‘ಈ ಮೂರು ಗ್ರಾಮಗಳಲ್ಲಿ ಚಿರತೆ ಶ್ವಾನಗಳನ್ನು ಎಳೆದುಕೊಂಡು ಹೋಗಿರುವ ಬಗ್ಗೆ ಜನರು ಮಾಹಿತಿ ನೀಡಿದ್ದಾರೆ. ರಾತ್ರಿ ಕಾವಲು ಸಿಬ್ಬಂದಿ ಈ ಮೂರು ಗ್ರಾಮಗಳ ವ್ಯಾಪ್ತಿಯಲ್ಲಿ ಗಸ್ತು ಮಾಡುತ್ತಿದ್ದಾರೆ. ಚಿರತೆಯ ಹೆಜ್ಜೆಯ ಜಾಡನ್ನು ಪತ್ತೆ ಹಚ್ಚಿದ್ದಾರೆ. ಪ್ರಸ್ತುತ ಸಾರಥಿ ಹೊಸೂರು ಗ್ರಾಮದ ಬಳಿ ಚಿರತೆ ಇರುವುದು ಕಂಡು ಬಂದಿದೆ. ಈ ಗ್ರಾಮದಲ್ಲಿ ಚಿರತೆಯನ್ನು ಸೆರೆ ಹಿಡಿಯಲು ಗುರುವಾರ ಬೋನು ಇರಿಸಲಾಗಿದೆ. ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ’ ಎಂದು ಮಾವಿನಕಟ್ಟೆ ವಲಯ ಅರಣ್ಯಾಧಿಕಾರಿ ಜಿತೇಂದ್ರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.