ADVERTISEMENT

ಕುಷ್ಠರೋಗ: 56 ಜನರಿಗೆ ಚಿಕಿತ್ಸೆ

14 ದಿನಗಳ ಸಮೀಕ್ಷೆಗೆ 410 ತಂಡ ರಚಿಸಿದ ಆರೋಗ್ಯ ಇಲಾಖೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 4:29 IST
Last Updated 29 ಅಕ್ಟೋಬರ್ 2025, 4:29 IST
ದಾವಣಗೆರೆಯ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ನಡೆದ ಕುಷ್ಠರೋಗ ನಿರ್ಮೂಲನಾ ಸಭೆಯಲ್ಲಿ ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್ ಅವರು ಕುಷ್ಠರೋಗಿಗಳ ಸಮೀಕ್ಷೆ ಹಾಗೂ ಜಾಗೃತಿ ಅಭಿಯಾನದ ಭಿತ್ತಿಚಿತ್ರ ಬಿಡುಗಡೆ ಮಾಡಿದರು –ಪ್ರಜಾವಾಣಿ ಚಿತ್ರ
ದಾವಣಗೆರೆಯ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ನಡೆದ ಕುಷ್ಠರೋಗ ನಿರ್ಮೂಲನಾ ಸಭೆಯಲ್ಲಿ ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್ ಅವರು ಕುಷ್ಠರೋಗಿಗಳ ಸಮೀಕ್ಷೆ ಹಾಗೂ ಜಾಗೃತಿ ಅಭಿಯಾನದ ಭಿತ್ತಿಚಿತ್ರ ಬಿಡುಗಡೆ ಮಾಡಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 56 ಕುಷ್ಠ ರೋಗಿಗಳು ಪತ್ತೆಯಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಲ್ಲಿ ಈ ವಿಷಯ ಚರ್ಚೆಗೆ ಬಂದಿತು.

‘2024ರಲ್ಲಿ 6,802 ಜನರನ್ನು ಸಂಶಯಾಸ್ಪದ ಕುಷ್ಠರೋಗಿಗಳೆಂದು ಗುರುತಿಸಲಾಗಿತ್ತು. ಎಲ್ಲರನ್ನು ಸಮಗ್ರವಾಗಿ ಪರೀಕ್ಷೆಗೆ ಒಳಪಡಿಸಿದಾಗ ದಾವಣಗೆರೆ, ಹೊನ್ನಾಳಿ, ಚನ್ನಗಿರಿ ಹಾಗೂ ಜಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ ತಲಾ 2, ಹರಿಹರ ತಾಲ್ಲೂಕಿನಲ್ಲಿ 3 ಪ್ರಕರಣ ಸೇರಿ 11 ಜನರಲ್ಲಿ ರೋಗ ದೃಢಪಟ್ಟಿತ್ತು. ಪ್ರಸಕ್ತ ವರ್ಷದಲ್ಲಿ 56 ಪ್ರಕರಣ ಕಂಡು ಬಂದಿವೆ’ ಎಂದು ಅಧಿಕಾರಿಗಳು ಸಭೆಗೆ ವಿವರಿಸಿದರು.

ADVERTISEMENT

‘ಕುಷ್ಠರೋಗಿಗಳ ಪತ್ತೆಗೆ ನವೆಂಬರ್ 3 ರಿಂದ 14 ದಿನ ಸಮೀಕ್ಷಾ ಕಾರ್ಯ ನಡೆಯಲಿದೆ. ಸಂಶಯಾಸ್ಪದ ವ್ಯಕ್ತಿಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡಬೇಕು. ಕುಷ್ಠರೋಗ, ಕ್ಷಯ ರೋಗಗಳ ಬಗ್ಗೆ ಜಾಗೃತಿ ಕಾರ್ಯಾಗಾರ ಆಯೋಜಿಸಬೇಕು. ಜನನಿಬೀಡ ಪ್ರದೇಶ, ನರೇಗಾ ಕಾಮಗಾರಿ, ಹೆಚ್ಚಿನ ಕಾರ್ಮಿಕರು ಇರುವ ಸ್ಥಳಗಳಿಗೆ ತೆರಳಿ ಚಿಕಿತ್ಸೆಗೆ ಒಳಪಡಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠಲ ರಾವ್ ಸೂಚನೆ ನೀಡಿದರು.

‘ಸಮೀಕ್ಷಾ ಕಾರ್ಯಕ್ಕೆ ಆಶಾ ಕಾರ್ಯಕರ್ತೆ ಮತ್ತು ಸ್ವಯಂ ಸೇವಕರನ್ನು ಒಳಗೊಂಡ 410 ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡವು ಗ್ರಾಮೀಣ ಭಾಗದಲ್ಲಿ ನಿತ್ಯ 20 ಕುಟುಂಬ, ನಗರ ಪ್ರದೇಶಗಳಲ್ಲಿ 25 ಕುಟುಂಬಗಳ ಸಮೀಕ್ಷೆ ನಡೆಸಲಿದೆ. ಒಂದು ತಂಡಕ್ಕೆ ₹ 150ರಂತೆ ಗೌರವ ಧನ ನಿಗದಿಪಡಿಸಲಾಗಿದೆ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಷಣ್ಮುಖಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಸಂದೀಪ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.