
ಭದ್ರಾವತಿ: ಕನ್ನಡ ನಾಡಿನ ನೆಲ– ಜಲ– ಭಾಷೆಯ ಮೇಲಿನ ಪ್ರೀತಿ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಕವಿ ಆಶಯದಂತೆ ಅದು ನಿತ್ಯೋತ್ಸವವಾಗಬೇಕು. ಈ ನಿಟ್ಟಿನಲ್ಲಿ ಕನ್ನಡಿಗರಾದ ನಾವು ಮುನ್ನಡೆಯಬೇಕು’ ಎಂದು ಶಾಸಕ ಬಿ.ಕೆ. ಸಂಗಮೇಶ್ವರ ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಹಳೇನಗರದ ಕನಕಮಂಟಪ ಮೈದಾನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವದಲ್ಲಿ ನಾಡ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
‘ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಸಹ ಹೆಚ್ಚಿನ ಅನುದಾನ ನೀಡುತ್ತಿದೆ. ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆ ಪುನರ್ ಆರಂಭಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಕೇಂದ್ರ ಸರ್ಕಾರ ಕಾರ್ಖಾನೆಗೆ ಸೇರಿದ ಅರಣ್ಯ ಭೂಮಿಗೆ ಎನ್‌ಒಸಿ ನೀಡಬೇಕು. ಕಾರ್ಖಾನೆಗೆ ಎನ್‌ಒಸಿ ಲಭಿಸಿದರೆ 3 ತಿಂಗಳ ಒಳಗೆ ಕಾರ್ಖಾನೆ ಪುನರ್ ಆರಂಭಿಸಲಾಗುವುದು. ಇದರಿಂದ ಸಾವಿರಾರು ಜನರಿಗೆ ಉದ್ಯೋಗ ಲಭಿಸಲಿದೆ’ ಎಂದರು.
ನಗರಸಭೆ ಅಧ್ಯಕ್ಷೆ ಜೆ.ಸಿ.ಗೀತಾ ರಾಜಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಆಯುಕ್ತರಾದ ಎನ್.ಕೆ. ಹೇಮಂತ್, ತಹಶೀಲ್ದಾರ್ ಪರುಸಪ್ಪ ಕುರುಬರ, ಬಿ. ಸಿದ್ದಬಸಪ್ಪ, ಬಿ.ಎಸ್. ಗೋಪಾಲ್, ಕೆ. ತಿಮ್ಮಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ. ನಾಗೇಂದ್ರಪ್ಪ, ಕೃಷ್ಣ ಎಸ್. ಭಟ್, ಡಿ. ನಾಗರಾಜ್ ಉಪಸ್ಥಿತರಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗೌರವಿಸಲಾಯಿತು.
ಕಾರ್ಯಕ್ರಮಕ್ಕೂ ಮೊದಲು ನಗರದ ಬಿ.ಎಚ್ ರಸ್ತೆ, ಅಂಬೇಡ್ಕರ್ ವೃತ್ತದಿಂದ ಕನಕಮಂಟಪ ಮೈದಾನದವರೆಗೂ ತಾಯಿ ಭುವನೇಶ್ವರಿ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.