ADVERTISEMENT

ಕಾನೂನು ಉಪಯೋಗ ಎಲ್ಲಾ ವರ್ಗಕ್ಕೆ ಸಿಗಲಿ: ನ್ಯಾಯಾಧೀಶ ಪ್ರವೀಣ್ ನಾಯಕ್

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ಪ್ರವೀಣ್ ನಾಯಕ್

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 16:03 IST
Last Updated 16 ಸೆಪ್ಟೆಂಬರ್ 2021, 16:03 IST
ದಾವಣಗೆರೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ್ ಅವರು ಕಾರ್ಮಿಕರಿಗೆ ಫುಡ್‌ಕಿಟ್‌ ವಿತರಿಸಿದರು
ದಾವಣಗೆರೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ್ ಅವರು ಕಾರ್ಮಿಕರಿಗೆ ಫುಡ್‌ಕಿಟ್‌ ವಿತರಿಸಿದರು   

ದಾವಣಗೆರೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವುದೇ ಕಾನೂನುಗಳನ್ನು ರೂಪಿಸಲಿ. ಅವೆಲ್ಲವೂ ಸಂವಿಧಾನದ ಅಡಿಯಲ್ಲೇ ಬರುತ್ತವೆ. ಅವುಗಳ ಸದುಪಯೋಗವನ್ನು ಎಲ್ಲ ವರ್ಗದವರು ಪಡೆಯಬೇಕು ಎನ್ನುವುದೇ ಕಾನೂನು ಸೇವಾ ಪ್ರಾಧಿಕಾರದ ಮೂಲ ಉದ್ದೇಶ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ್ ಹೇಳಿದರು.

ನಗರದ ದೇವರಾಜ ಅರಸು ಬಡಾವಣೆಯಲ್ಲಿ ನೆರಳು ಬೀಡಿ ಕಾರ್ಮಿಕರ ಯೂನಿಯನ್‍ನಿಂದ ಸಂಘದ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾನೂನು ಅರಿವು ಕಾರ್ಯಕ್ರಮ ಹಾಗೂ ಜಿಲ್ಲಾ ಕಾರ್ಮಿಕ ಇಲಾಖೆಯಿಂದ ಅಸಂಘಟಿತ ಕಾರ್ಮಿಕರಿಗೆ ನೀಡಲಾದ ಆಹಾರ ಧಾನ್ಯಗಳ ಕಿಟ್‍ ವಿತರಿಸಿ ಅವರು ಮಾತನಾಡಿದರು.

ಮಹಿಳೆಯರು, ಶೋಷಿತ ವರ್ಗದ ಜನರಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ನೆರವು ನೀಡಲಾಗುತ್ತಿದೆ. ನ್ಯಾಯಾಲಯದ ಯಾವುದೇ ಪ್ರಕರಣಗಳಿದ್ದರೂ ಉಚಿತವಾಗಿ ಕಾನೂನು ಸೇವೆ ಪಡೆಯಬಹುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ ವಾರ್ಷಿಕ ವರಮಾನ ₹ 1 ಲಕ್ಷಕ್ಕೂ ಕಡಿಮೆ ಇರುವ ಕುಟುಂಬಗಳು ಪಡೆಯಬಹುದು. ಅದಕ್ಕಾಗಿಯೇ ಕಾನೂನು ಸೇವಾ ಪ್ರಾಧಿಕಾರದಿಂದ ವಕೀಲರನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಮುಖ್ಯ ಅತಿಥಿಗಳಾಗಿದ್ದ ಹಿರಿಯ ನ್ಯಾಯವಾದಿ ಎಲ್.ಎಚ್. ಅರುಣ್‍ಕುಮಾರ್, ‘ಕೊರೊನಾದ ಸಂದರ್ಭದಲ್ಲಿ ಕೂಲಿ ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕರ ಜೀವನ ಸಂಕಷ್ಟದ ಸ್ಥಿತಿಗೆ ತಲುಪಿತ್ತು. ಇಂತಹ ಸಂದರ್ಭದಲ್ಲಿ ದಾನಿಗಳು, ಸಂಘ-ಸಂಸ್ಥೆಗಳು ಆಹಾರ ಧಾನ್ಯ, ಇತರ ವಸ್ತುಗಳನ್ನು ನೀಡುವ ಮೂಲಕ ಸಹಾಯ ಹಸ್ತ ಚಾಚಿದರು. ಇದನ್ನು ಮನಗಂಡ ಮೇಲೆ ಚುನಾಯಿತ ಸರ್ಕಾರಗಳು ನೆರವಿಗೆ ಬಂದವು. ಯಾವುದೇ ಸಂದರ್ಭದಲ್ಲಿ ಹಸಿದವರ ನೆರವಿಗೆ ಬರಬೇಕಾದುದ್ದು ಸರ್ಕಾರಗಳ ಕರ್ತವ್ಯ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆಯ ಜಿಲ್ಲಾ ಅಧಿಕಾರಿ ಇಬ್ರಾಹಿಂ ಸಾಬ್, ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ ಜಬೀನಾಖಾನಂ, ಕಾರ್ಯದರ್ಶಿ ಕರಿಬಸಪ್ಪ ಇದ್ದರು. ಮನೆ ಕೆಲಸ ಮಾಡುವ ಮಹಿಳೆಯರು, ಗೂಡ್ಸ್‍ಶೆಡ್‍ನಲ್ಲಿ ಕೆಲಸ ಮಾಡುವ ಪುರುಷರಿಗೆ ಫುಡ್‍ಕಿಟ್ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.